ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

15 ದಿನಗಳ ಮಟ್ಟಿಗೆ ಬಾಯ್ಕಾಟ್‌ ಪಾಕ್‌ ಕ್ರಿಕೆಟ್‌ ಹೆಡ್‌ ಮಾಸ್ಟರ್‌

By Staff
|
Google Oneindia Kannada News

ಕರಾಚಿ : ಇಂಗ್ಲೆಂಡ್‌ನ ಮಾಜಿ ಬ್ಯಾಟಿಂಗ್‌ ತಾರೆ ಜೆಫ್ರಿ ಬಾಯ್ಕಾಟ್‌ ಈಗ ಪಾಕಿಸ್ತಾನ ಕ್ರಿಕೆಟ್‌ ತಂಡದ ತರಬೇತುದಾರ. ಅವರ ಫೀಸ್‌ ಕೇವಲ 30 ಸಾವಿರ ಪೌಂಡ್‌, ಅದೂ ಬರೇ 15 ದಿನಕ್ಕೆ. ಅವರು ಕೋಚ್‌ ಕೆಲಸ ಮಾಡುವುದೂ 15 ದಿನಗಳು ಮಾತ್ರ !

ಪಾಕಿಸ್ತಾನದ ಮಾಜಿ ಟೆಸ್ಟ್‌ ಕ್ರಿಕೆಟ್‌ ತಾರೆಗಳು ಇದಕ್ಕೆ ಅಬ್ಬಾ, ಇದ್ಯಾವ ನ್ಯಾಯ ಎಂದು ದನಿಯೆತ್ತಿದ್ದರೂ ಪಾಕ್‌ ಕ್ರಿಕೆಟ್‌ ಮಂಡಲಿ (ಪಿಸಿಬಿ) ಅದ್ಯಾವುದನ್ನೂ ಗಮನಕ್ಕೆ ತೆಗೆದುಕೊಳ್ಳದೆ ಈ ನಿರ್ಣಯ ಕೈಗೊಂಡಿದೆ. 2005ರ ಹೊತ್ತಿಗೆ ತನ್ನ ತಂಡವನ್ನು ಮಾದರಿ ಕ್ರಿಕೆಟ್‌ ತಂಡವನ್ನಾಗಿಸಲು ಪಿಸಿಬಿ ಪಣ ತೊಟ್ಟಿದ್ದು ‘ವಿಷನ್‌ 2005’ ಎಂಬ ಕಾರ್ಯಕ್ರಮ ರೂಪಿಸಿದೆ. ಬಾಯ್ಕಾಟ್‌ ಅವರಿಂದ 15 ದಿನಗಳಕಾಲ ತಂಡಕ್ಕೆ ಪಾಠ ಹೇಳಿಸುವುದು ಈ ಯೋಜನೆಯ ಮೊದಲ ಹೆಜ್ಜೆ.

ಅಷ್ಟೇಅಲ್ಲ, ಪಾಕಿಸ್ತಾನ ಕ್ರಿಕೆಟ್‌ ಮಂಡಲಿ ಅಧಿಕಾರಿಗಳು ಈಗ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದಾರೆ. ಒಂದೇ ಸಮ 15 ಟೆಸ್ಟ್‌ ಪಂದ್ಯಗಳನ್ನು ಗೆದ್ದು ಬೀಗುತ್ತಿರುವ ತಂಡದ ತರಬೇತಿ ತಂತ್ರಗಳನ್ನು ಅರಿಯುವ ಉದ್ದಿಶ್ಯ ಅವರದು. ಆಸ್ಟ್ರೇಲಿಯಾ ಆಟಗಾರು ಈ ಮಟ್ಟಿಗೆ ಹೇಗೆ ಪಳಗಿದ್ದಾರೆ ಎನ್ನುವ ತಂತ್ರ ಕದ್ದು ತಂದು, ಪಾಕಿಸ್ತಾನದ ಆಟಗಾರರನ್ನೂ ಅಂತೆಯೇ ತರಪೇತುಗೊಳಿಸುವುದು ಅಧಿಕಾರಿಗಳ ಪ್ರವಾಸದ ಗುರಿ.

ಪಿಸಿಬಿ ಅಧ್ಯಕ್ಷ ಲೆಫ್ಟಿನೆಂಟ್‌ ಜನರಲ್‌ ತಾಕ್ವಿರ್‌ ಜಿಯಾ ಕಡಕ್‌ ಆಗಿಬಿಟ್ಟಿದ್ದಾರೆ. ದುಡ್ಡಿನ ಮುಖ ನೋಡಿಕೊಂಡು ಆಟ ಕೆಡಿಸಿಕೊಳ್ಳಲು ಅವರು ಸುತರಾಂ ಸಿದ್ಧರಿಲ್ಲವಂತೆ. ಈ ಕಾರಣಕ್ಕಾಗೇ ಜೆಫ್ರಿ ಬಾಯ್ಕಾಟ್‌ ನೇಮಕದ ವಿಷಯದಲ್ಲಿ ಕೆಲವು ಅಧಿಕಾರಿಗಳ ನಕಾರವನ್ನೂ ಜಿಯಾ ನಿರ್ಲಕ್ಷಿಸಿದ್ದಾರೆ. ಈ ಹೊತ್ತು ಇದು ದುಬಾರಿ ಎನಿಸಬಹುದು. ಆದರೆ ಪಾಕ್‌ ಕ್ರಿಕೆಟ್‌ನ ಭವಿತವ್ಯದ ದೃಷ್ಟಿಯಲ್ಲಿ ಇದು ಅತ್ಯಗತ್ಯ ಎಂಬುದು ಜಿಯಾ ವಾದ.

ಪಾಕಿಸ್ತಾನ ಕ್ರಿಕೆಟ್‌ ತಂಡದ ಮಾಜಿ ನಾಯಕ ಇಂತಿಕಾಬ್‌ ಆಲಂ ಒಂದು ಒಳ್ಳೆ ಪ್ರಶ್ನೆ ಎಸೆದಿದ್ದಾರೆ- ಬಾಯ್ಕಾಟ್‌ ಅಷ್ಟೊಂದು ಬೆಲೆ ಬಾಳುವ ಹಾಗೂ ಅರ್ಹ ತರಬೇತುದಾರರಾದರೆ, ಅವರಿಗೆ ಈವರೆಗೆ ಇಂಗ್ಲೆಂಡ್‌ ತಂಡದ ಕೋಚ್‌ ಆಫರ್‌ ಯಾಕೆ ಕೊಟ್ಟಿಲ್ಲ . ಇದಕ್ಕೆ ಜಿಯಾ ಅವರೇ ಉತ್ತರ ಕೊಡಬೇಕು.

ಇಷ್ಟೆಲ್ಲಾ ಗಜಿ ಬಿಜಿ ನಡುವೆ ಭಾನುವಾರ ಸಂಜೆ ಲಾಹೋರ್‌ಗೆ ಆಗಮಿಸಿದ ಬಾಯ್ಕಾಟ್‌ ಹೇಳುತ್ತಾರೆ- ‘ನಾನು ಪಾಕಿಸ್ತಾನಿ ಆಟಗಾರರ ಸ್ವಾಭಾವಿಕ ಶೈಲಿಯ ಆಟ ಮತ್ತು ಅವರ ಅದ್ಭುತ ಪ್ರತಿಭೆಗೆ ಮನಸೋತು ಕೋಚ್‌ ಆಗಿ ಕೆಲಸ ಮಾಡಲು ಒಪ್ಪಿದ್ದೇನೆ. ವೈರುಧ್ಯಗಳನ್ನು ಬದಿಗೊತ್ತಿ ನನ್ನ ಮೇಲೆ ವಿಶ್ವಾಸ ಇಟ್ಟಿರುವ ಪಿಸಿಬಿ ಯತ್ನಕ್ಕೆ ಖಂಡಿತ ಅರ್ಥ ಕೊಡುತ್ತೇನೆ. ಸಯೀದ್‌ ಅನ್ವರ್‌, ಇಂಜಮಾಮ್‌- ಉಲ್‌- ಹಕ್‌ ಅವರಂಥ ಪಳಗಿರುವ ಆಟಗಾರರಿಗೆ ಯಾವುದೇ ತರಪೇತಿಯ ಅಗತ್ಯವಿಲ್ಲ. ಉದಯೋನ್ಮುಖ ಪ್ರತಿಭೆಗಳನ್ನು ಪಾಲಿಷ್‌ ಮಾಡುವುದು ನನ್ನ ಕೆಲಸ’.

(ಎಎಫ್‌ಪಿ)

ವಾರ್ತಾಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X