ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹತ್ತಿ ಬೀಜ ಬಿತ್ತಿ ಸಾಲ ಬೆಳೆದು ಪಾಷಾಣವುಂಡ ಕೊಪ್ಪಳದ ರೈತ

By Staff
|
Google Oneindia Kannada News

ಕೊಪ್ಪಳ : ಭತ್ತದ ಬೆಳೆ ಕೈ ಹತ್ತದೆ ಪಾಷಾಣವುಂಡ ಉತ್ತರ ಕರ್ನಾಟಕದ ರೈತರ ದುರಂತದ ಘಟನೆಗಳು ಕಣ್ಣ ಮುಂದೆ ಹಸಿಯಿರುವಾಗಲೇ, ಹತ್ತಿ ಬೀಜ ಬಿತ್ತಿ ತಳಿ ಬೆಳೆಯಲು ಹೋಗಿ ಸಾಲವನ್ನು ಬೆಳೆದ ಚೆನ್ನಬಸಪ್ಪ ಹೂಗಾರ ಎನ್ನುವ ಜಿಲ್ಲೆಯ ಚುಕ್ಕನಕಲ್‌ ಗ್ರಾಮದ ರೈತ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಕಾವೇರಿ ಕಂಪನಿಯ ಹತ್ತಿಯ ಬೀಜಗಳೊಂದಿಗೆ ಚೆನ್ನಬಸಪ್ಪ ಹೊಸ ಕನಸುಗಳನ್ನೂ ಕಪ್ಪನೆಯ ಮಣ್ಣಿನಲ್ಲಿ ಬಿತ್ತಿದ್ದ. ಬೆಳೆಯ ರಕ್ಷಣೆಗೆ ಬೆವರಿನೊಂದಿಗೆ ಖರ್ಚಾಗಿದ್ದು 40 ಸಾವಿರ ರುಪಾಯಿ. ಆದರೆ, ಚೆನ್ನಬಸಪ್ಪ ತಂದಿದ್ದ ಬೀಜದಲ್ಲಿ ಯಡವಟ್ಟು ಸಂಭವಿಸಿತ್ತು . ಹೆಣ್ಣು ಬೀಜ ಮಾತ್ರ ಕೊಟ್ಟಿದ್ದ ಕಾವೇರಿ ಕಂಪನಿಯವರು ಗಂಡು ಬೀಜ ಕೊಡುವುದನ್ನು ಮರೆತಿದ್ದರು. ಹೀಗಾಗಿ ಬೆಳೆ ನಿರುಪಯುಕ್ತವಾಯಿತು. ಸಾಲ ತಲೆ ಹತ್ತಿತು.

ಚೆನ್ನಬಸಪ್ಪನ ದೂರನ್ನಾಧರಿಸಿ ಗ್ರಾಮಕ್ಕೆ ಆಗಮಿಸಿದ ಕಂಪನಿಯ ಅಧಿಕಾರಿಗಳು, ಯಥಾಪ್ರಕಾರ ಪ್ರಮಾದಕ್ಕೆ ವಿಷಾದ ವ್ಯಕ್ತ ಪಡಿಸಿದರು. ಪರಿಹಾರವಾಗಿ 15 ಸಾವಿರ ರು. ಮೊತ್ತ ಕಟ್ಟಿಕೊಡಲು ಮುಂದಾದರು. ಆದರೆ, ಈ ಪರಿಹಾರ ಸಾಲವನ್ನು ಹಗುರ ಮಾಡುವಷ್ಟಿರಲಿಲ್ಲ . ಕಣ್ಣ ಮುಂದೆ ಕುಣಿಯುತ್ತಿದ್ದ ಸಾಲದ ಭೂತಕ್ಕೆ ಬೆಚ್ಚಿದ ಚೆನ್ನಬಸಪ್ಪ ಕೊನೆಗೆ ಶರಣಾದದ್ದು ಆತ್ಮಹತ್ಯೆಗೆ.

ಶನಿವಾರ ರಾತ್ರಿ ಬೆಳೆಗೆ ನೀರು ಹಾಯಿಸುತ್ತೇನೆಂದು ಹೋದವನು ಕ್ರಿಮಿ ನಾಶಕವುಂಡ. ಭಾನುವಾರ ಬೆಳಿಗ್ಗೆ ಹೊಲಕ್ಕೆ ಹೋದ ಕುಟುಂಬದವರು ಕಂಡದ್ದು ಆಗಲೋ ಈಗಲೋ ಅನ್ನುವಂತಿದ್ದ ಚೆನ್ನಬಸಪ್ಪನನ್ನು . ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವ ಹೊತ್ತಿಗೆ ಆತ ಸಾವಿನೂರಿಗೆ ಬಹುದೂರ ನಡೆದಿದ್ದ . ಅಲ್ಲಿಗೆ ಬೆಳೆ ಹಾನಿಯಿಂದಾಗಿ ಆತ್ಮಹತ್ಯೆ ಮಾಡಿಕೊಂಡ ರೈತರ ಯಾದಿಗೆ ಮತ್ತೊಬ್ಬ ದುರ್ದೈವಿಯ ಸೇರ್ಪಡೆಯಾಯಿತು.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X