• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸ್ತಂಭೀಭೂತ ಸಂತ್ರಸ್ತರ ಮನ ತಿದ್ದಲು ಗುಜರಾತ್‌ಗೆ ನಿಮ್ಹಾನ್ಸ್‌

By Staff
|

*ಇಮ್ರಾನ್‌ ಖುರೇಶಿ

ಬೆಂಗಳೂರು : ಅಮಾನುಷ ಹಾಗೂ ಅಸಹಜ ರಕ್ತ ಸಿಕ್ತ- ಕೊಳೆತ ಮೃತ ದೇಹಗಳನ್ನು ಕಂಡ ಮನಸ್ಸುಗಳು, ಕಿವಿ ತುಂಬಿದ ಜೀರ್ಣಿಸಿಕೊಳ್ಳಲಾರದ ಅರಣ್ಯರೋದನ ಈ ಹೊತ್ತು ಗುಜರಾತಿನಲ್ಲಿ ಬದುಕುಳಿದವರನ್ನೂ ಕೊಲ್ಲುತ್ತಿದೆ. ಕಣ್ಣಲ್ಲಿ ಮನೆ ಮಾಡಿರುವ ಕಂಪನ- ರಕ್ತ ಸಿಂಚನ ಕನಸಿನಲ್ಲೂ ಪದೇ ಪದೇ ಠಸ್ಸೆ ಹೊಡೆದು ಬೆಚ್ಚಿ ಬೀಳಿಸುತ್ತಿವೆ. ಇದನ್ನು ಮರೆಸಲೋಸುಗ ನಿಮ್ಹಾನ್ಸ್‌ನ ಒಂದು ತಂಡ ಈ ವಾರ ಗುಜರಾತ್‌ಗೆ ತೆರಳಲಿದೆ.

1993ರ ಲಾಥೂರ್‌ ಭೂಕಂಪ ಹಾಗೂ 1999ರ ಒರಿಸ್ಸಾ ನೆರೆ ಹಾವಳಿ ನಂತರ ಹಿಂಡಿಹೋಗಿದ್ದ ಮನಸ್ಸುಗಳನ್ನು ಮರುಸ್ಥಿತಿಗೆ ತರುವ ನಿಟ್ಟಿನಲ್ಲಿ ಸರ್ಕಾರಿ ಹಾಗೂ ಸರ್ಕಾರೇತರ ಸಂಸ್ಥೆಗಳ ಜತೆ ಕೈ ಜೋಡಿಸಿ ಕೆಲಸ ಮಾಡಿದ್ದ ನಿಮ್ಹಾನ್ಸ್‌ ಈಗ ಮತ್ತೆ ಹೋಂವರ್ಕ್‌ ಮಾಡುತ್ತಿದೆ. ನೊಂದ- ಬೇಸತ್ತ ಮನಗಳಿಗೆ ಚೇತನ ತುಂಬಿ, ಜಡತ್ವ- ಹತಾಶೆ ಕಳೆಯಲು ಕಾರ್ಯಕ್ರಮಗಳನ್ನು ರೂಪಿಸುತ್ತಿದೆ.

ಮನದ ತುಂಬೆಲ್ಲಾ ಕಂಪನ : ಸರ್ಕಾರದ ವರದಿಯಂತೆ ಸುಮಾರು 25 ಸಾವಿರ ಮಂದಿ ಸತ್ತಿದ್ದಾರೆ. 50 ಸಾವಿರಕ್ಕೂ ಹೆಚ್ಚು ಜನ ಇನ್ನೂ ಆಸ್ಪತ್ರೆಯಲ್ಲೇ ಹಾಸಿಗೆ ಹಿಡಿದಿದ್ದಾರೆ. ಈ ಕರಾಳ ದೃಶ್ಯಗಳನ್ನು ಕಂಡ ಲಕ್ಷಾಂತರ ಜನ ದೈಹಿಕವಾಗಿ ಅಷ್ಟೇನೂ ತೊಂದರೆ ಅನುಭವಿಸದಿದ್ದರೂ, ಮಾನಸಿಕವಾಗಿ ಬೆಂದು ಹೋಗಿದ್ದಾರೆ. ಮರುಕಳಿಸುವ ಕಂಪನದ ನೆನಪು ನಿದ್ದೆ ಕದಿಯುತ್ತಿದೆ. ಟಿವಿ ಹಾಕಿದರೂ ಅದರ ತುಂಬೆಲ್ಲಾ ಕಟ್ಟಡದ ಪರಿಕರಗಳಡಿ ಸಿಲುಕಿರುವ ಹೆಣಗಳ ದರ್ಶನ. ಇಂಥ ಜನರಿಗೆ ಮಾನಸಿಕ ಚಿಕಿತ್ಸೆ ನೀಡಲು ನಿಮ್ಹಾನ್ಸ್‌ ಭಿತ್ತಿ ಪತ್ರಗಳನ್ನು ಸಿದ್ಧಪಡಿಸಿದೆ.

ಗುಜರಾತಿ ಭಾಷೆಯಲ್ಲಿ ಭಿತ್ತಿ ಪತ್ರಗಳು : ನಾವು ಈಗಾಗಲೇ ಸಾಕಷ್ಟು ಚರ್ಚೆ ನಡೆಸಿ, ಅಲ್ಲಿನ ಪರಿಸ್ಥಿತಿಗಳ ಗಂಭೀರತೆಯನ್ನು ಮನನ ಮಾಡಿಕೊಂಡಿದ್ದೇವೆ. ಮಾನಸಿಕ ತುಮುಲ ಗುಜರಾತ್‌ನ ಯಾವ ಪ್ರದೇಶದಲ್ಲಿ ತೀವ್ರವಾಗಿದೆ ಎಂಬುದಕ್ಕೆ ಅನುಗುಣವಾಗಿ ಆಯಾ ಪ್ರದೇಶಗಳಿಗೆ ವೈದ್ಯರ ತಂಡಗಳನ್ನು ನಿಯೋಜಿಸಲಾಗುವುದು. ನಾವು ಸಿದ್ಧಪಡಿಸಿರುವ ಭಿತ್ತಿ ಪತ್ರಗಳು, ಸಲಹೆ ಸೂಚನೆಗಳನ್ನೊಳಗೊಂಡ ಟಿಪ್ಪಣಿಗಳು ಮೊದಲಾದ ಸರಕನ್ನು ಗುಜರಾತ್‌ನ ಸ್ಥಳೀಯ ಸಂಘಟನೆಗಳ ಕಾರ್ಯದರ್ಶಿ ಮತ್ತಿತರರ ನೆರವಿನಿಂದ ಗುಜರಾತಿ ಭಾಷೆಗೆ ತರ್ಜುಮೆ ಮಾಡಿ, ಜನರಿಗೆ ತಲುಪಿಸುತ್ತೇವೆ ಎನ್ನುತ್ತಾರೆ ನಿಮ್ಹಾನ್ಸ್‌ನ ಮಾನಸಿಕ ಆರೋಗ್ಯ ವಿಭಾಗದ ಮುಖ್ಯಸ್ಥ ಮೋಹನ್‌ ಐಸಾಕ್‌.

ಲಾಥೂರ್‌ ಕಂಪನ ಹಾಗೂ ಒರಿಸ್ಸಾ ಪ್ರವಾಹದ ನಂತರದ ಜನರ ಮನಸ್ಥಿತಿಯನ್ನು ಸಂಸ್ಥೆ ಅಧ್ಯಯನ ಮಾಡಿತ್ತು. ಅದರ ಆಧಾರದ ಮೇಲೆ ಈಗ ನಾವು ಭಿತ್ತಿ ಪತ್ರಗಳನ್ನು ಸಿದ್ಧಪಡಿಸಿದ್ದೇವೆ. ಭಯದಲ್ಲಿ ಕಳೆದು ಹೋಗಿರುವ ಮನಸ್ಸುಗಳನ್ನು ಹುಡುಕಿ ತರುವ ಕೆಲಸವನ್ನು ಸಂಸ್ಥೆಯ ವೈದ್ಯರು ಮಾಡಲಿದ್ದಾರೆ ಎಂಬುದು ಐಸಾಕ್‌ ವಿವರಣೆ.

ಮಿದುಳಿಗೆ ಕೈ ಹಾಕಲು ಇದೇ ಸುಸಮಯ : ಮಾನಸಿಕ ಆರೋಗ್ಯದತ್ತ ನೀವು ತಡವಾಗಿ ಗಮನ ಹರಿಸುತ್ತಿದ್ದೀರಿ ಅನಿಸೋದಿಲ್ಲವೇ ಎಂಬ ಪ್ರಶ್ನೆಗೆ ಐಸಾಕ್‌ ಹೀಗೆ ಉತ್ತರ ಕೊಡುತ್ತಾರೆ- ‘ಭೂಕಂಪವಾದ ನಂತರದ 10 ದಿನಗಳಲ್ಲಿ ಜನರ ದೈಹಿಕ ಆರೋಗ್ಯಕ್ಕೆ ಒತ್ತು ಕೊಡಬೇಕಾಗುತ್ತದೆ. ಮೂಳೆ ತಜ್ಞರು, ಹೃದಯ ತಜ್ಞರು ಮೊದಲಾದ ವೈದ್ಯರ ಅಗತ್ಯ ಈ ದಿನಗಳಲ್ಲಿ ಅತಿಯಾಗಿರುತ್ತದೆ. ದೇಹದಲ್ಲಿನ ನೋವು ಮನಸ್ಸನ್ನು ಮಲಗಲು ಬಿಡದೆ ನಾಟುತ್ತಿರುತ್ತದೆ. ಆದರೆ ನೋವು- ಉರಿ ಮಾಯವಾದ ನಂತರ ಮನಸ್ಸು ಸಪಾಟಾಗಿ ಹೋಗುತ್ತದೆ. ಕ್ಷಣ ಕ್ಷಣವೂ ಒಂದೊಂದು ಭೂಕಂಪದ ಅನುಭವ ಒಡ್ಡುತ್ತದೆ. ಮಿದುಳು ಅಕ್ಷರಶಃ ಭಯದ ಮುದ್ದೆಯಾಗಿ ಬಿಡುತ್ತದೆ. ಇಂಥ ಸಂದರ್ಭದಲ್ಲಿ ಮಾನಸಿಕ ವೈದ್ಯರು ಎಚ್ಚೆತ್ತುಕೊಳ್ಳಲೇಬೇಕು. ನಾವೀಗ ಮಾಡುತ್ತಿರುವುದೂ ಅದನ್ನೇ’.

ಆರೋಗ್ಯ ಕೇಂದ್ರಗಳಲ್ಲಿನ ಪ್ರಚಾರಕರು, ದೇಶದ ಮೂಲೆ ಮೂಲೆಗಳಲ್ಲಿನ ಮಾನಸಿಕ ತಜ್ಞರು ನಮ್ಮ ಈ ಕೆಲಸಕ್ಕೆ ಬೆಂಬಲ ಕೊಡಲಿದ್ದಾರೆ. ನಿಶ್ಚೇಷ್ಟಿತವಾಗಿರುವ ಮನಸ್ಸುಗಳಿಗೆ ಮತ್ತೆ ಜೀವ ತುಂಬಲು ಓಕ್ಸ್‌ಫ್ಯಾಮ್‌, ಆ್ಯಕ್ಷನ್‌ ಏಡ್‌ ಮೊದಲಾದ ಸಂಸ್ಥೆಗಳೂ ನಿಮ್ಹಾನ್ಸ್‌ ಜೊತೆ ಸಹಕರಿಸಲಿವೆ. ಮಾನಸಿಕ ಶಕ್ತಿ ತುಂಬುವುದರ ಜೊತೆಗೆ ಪುನರ್ವಸತಿ ಕಾರ್ಯದಲ್ಲಿಯೂ ಸಂಸ್ಥೆ ಕೈ ಹಚ್ಚಲಿದೆ.

(ಐಎಎನ್‌ಎಸ್‌)ಮುಖಪುಟ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more