ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಘ ತ್ರಯೋದಶಿಯಂದು ಟಿ. ನರಸೀಪುರಮಹಾಕುಂಭ ಮೇಳ

By Staff
|
Google Oneindia Kannada News

*ನಾಗೇಂದ್ರ ಪ್ರಸಾದ್‌, ನಂಜನಗೂಡು

ತಿರಮಕೂಡಲು ನರಸೀಪುರ : ಮಾಘ ಶುದ್ಧ ತ್ರಯೋದಶಿ ಮಂಗಳವಾರ ,ಫೆಬ್ರವರಿ 6 ರಿಂದ ಟಿನರಸಿಪುರದಲ್ಲಿ ನಡೆಯುವ ಮೂರು ದಿನಗಳ ದಕ್ಷಿಣ ಭಾರತದ ಪ್ರಸಿದ್ಧ ಕುಂಭಮೇಳಕ್ಕೆ ಭರದ ಸಿದ್ಧತೆಗಳು ನಡೆದಿವೆ. ಸುಮಾರು 5 ಲಕ್ಷ ಜನರು ದಕ್ಷಿಣ ಕಾಶಿ ಎಂದೇ ಖ್ಯಾತವಾದ ಈ ಪವಿತ್ರ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನಾರ್ಥವಾಗಿ ಬರುವ ನಿರೀಕ್ಷೆ ಇದ್ದು, ಟಿ. ನರಸೀಪುರ ಹಾಗೂ ಸುತ್ತಮುತ್ತಲ ಶಾಲೆ, ಕಾಲೇಜು ಕ ಟ್ಟಡ, ಸುತ್ತೂರು ಮಠದ ಸಮುದಾಯ ಭವನಗಳಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ.

ಸ್ನಾನದ ಘಟ್ಟವಾದ ಸೋಪಾನ ಕಟ್ಟೆಯಲ್ಲಿ ಭಕ್ತಾದಿಗಳು ಜಾರದಂತೆ ದುರಸ್ತಿ ಮಾಡಲಾಗಿದೆ. ಅಪಾಯಕಾರಿ ಸ್ಥಳಗಳೆದು ನಿರ್ಧರಿಸುವ ನದಿ ಪಾತ್ರಗಳಲ್ಲಿ ಕಟೆಕಟೆಗಳನ್ನು ನಿರ್ಮಿಸಲಾಗಿದೆ. ಸ್ನಾನ ಮಾಡುವ ಸಂದರ್ಭದಲ್ಲಿ ಭಕ್ತಾದಿಗಳು ಅಕಾಸ್ಮಾತ್‌ ನದಿಗೆ ಬಿದ್ದರೆ ಅವರನ್ನು ರಕ್ಷಿಸಲು ನುರಿತ ಈಜುಗಾರರನ್ನು ನಿಯೋಜಿಸಲಾಗಿದೆ. ನಾಡದೋಣಿ ಹಾಗೂ ಯಾಂತ್ರಿಕ ದೋಣಿಗಳೂ ಭಕ್ತರ ರಕ್ಷಣೆ ಕಾರ್ಯಕ್ಕೆ ಸಜ್ಜಾಗಿ ನಿಂತಿವೆ. ನದಿಯಲ್ಲಿ ಬೆಳೆದ ಜೊಂಡು ತೆಗೆದು ಹಾಕಲಾಗಿದೆ.

ಪಟ್ಟಣದ ಪ್ರಮುಖ ವೃತ್ತದಿಂದ ದೇವಾಲಯದವರೆಗೆ ರಸ್ತೆಯಲ್ಲಿ ಸೋಡಿಯಂ ದೀಪಗಳನ್ನು ಹಾಕಲಾಗಿದೆ. ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಅಲ್ಲಲ್ಲಿ ಕುಡಿಯುವ ನೀರಿನ ನಲ್ಲಿಗಳನ್ನು ಹಾಕಲಾಗಿದೆ. ವಿಶೇಷ ಬಸ್‌ಗಳ ಸಂಚಾರವನ್ನೂ ಸಾರಿಗೆ ಇಲಾಖೆ ಮಾಡಿದೆ. ರಾಜ್ಯದ ಪ್ರಮುಖ ಪಟ್ಟಣಗಳಿಂದ ಖಾಸಗಿ ಬಸ್‌ಗಳೂ ಸೇರಿದಂತೆ ತಿ. ನರಸೀಪುರಕ್ಕೆ ಕುಂಭಮೇಳದ ವಿಶೇಷ ಬಸ್‌ಗಳು ಸಂಚರಿಸಲಿವೆ. ಈ ಹೊತ್ತು ನರಸೀಪುರ ಭಕ್ತಾದಿಗಳ ನಿರೀಕ್ಷೆಯಲ್ಲಿ ತುದಿಗಾಲಲ್ಲಿ ನಿಂತಿದೆ. ವ್ಯಾಪಾರಿಗಳು ಅಂಗಡಿ ಮುಂಗಟ್ಟುಗಳನ್ನು ಅಣಿಮಾಡಿಕೊಂಡು ಕಾಯುತ್ತಿದ್ದಾರೆ. ಇಡೀ ಪ್ರದೇಶದಲ್ಲಿ ಜಾತ್ರೆಯ ವಾತಾವರಣ ಮೂಡಿದೆ.

ಜಿಲ್ಲಾಧಿಕಾರಿಗಳ ಸೂಚನೆ : ಕುಂಭಮೇಳದ ಸಮಯದಲ್ಲಿ ಯಾವುದೇ ಅನಾಹುತಗಳು ನಡೆಯದಂತೆ ಎಚ್ಚರ ವಹಿಸುವಂತೆ ಅಧಿಕಾರಿಗಳಿಗೆ ಹಾಗೂ ಪೊಲೀಸರಿಗೆ ಜಿಲ್ಲಾಧಿಕಾರಿ ಬಿ. ಬಸವರಾಜು ಸೂಚಿಸಿದ್ದಾರೆ. ವೈದ್ಯಕೀಯ ಸಂಚಾರಿ ಶಿಬಿರಗಳನ್ನೂ ಏರ್ಪಡಿಸಲಾಗಿದೆ. ತಾತ್ಕಾಲಿಕ ಆರೋಗ್ಯ ಕೇಂದ್ರಗಳನ್ನೂ ಸ್ಥಾಪಿಸಲಾಗಿದೆ. ಸಾಕಷ್ಟು ಪ್ರಮಾಣದ ಪ್ರಥಮ ಚಿಕಿತ್ಸಾ ಪರಿಕರಗಳನ್ನು ಎಲ್ಲ ಕೇಂದ್ರಗಳಿಗೂ ಒದಗಿಸಲಾಗಿದೆ. ಸಾಕಷ್ಟು ಸಂಖ್ಯೆ ವೈದ್ಯರು ಹಾಗೂ ಪರಿಚಾರಕರನ್ನೂ ಈ ಕಾರ್ಯಕ್ಕೆ ನಿಯೋಜಿಸಲಾಗಿದೆ. ತುರ್ತು ವೈದ್ಯಕೀಯ ವ್ಯವಸ್ಥೆ , ಅ್ಯಂಬುಲೆನ್ಸ್‌ ವಾಹನ ಸಜ್ಜಾಗಿ ನಿಂತಿವೆ.

ಮುನ್ನೆಚ್ಚರಿಕೆ : ಸರಕಾರ ಮಹಾಕುಂಭ ಮೇಳಕ್ಕೆ 10 ಲಕ್ಷ ರುಪಾಯಿಗಳನ್ನು ಬಿಡುಗಡೆ ಮಾಡಿದೆ. ರಸ್ತೆಗಳ ದುರಸ್ತಿ, ಟಾರ್‌ ಹಾಕುವ ಕೆಲಸ ಭರದಿಂದ ಸಾಗಿದೆ. ವಿದ್ಯುತ್‌ ನಿಗಮ ಹೆಚ್ಚುವರಿ ಟ್ರಾನ್ಸ್‌ಫಾರ್ಮರ್‌ಗಳನ್ನು ಅಳವಡಿಸಿ, ವಿದ್ಯುತ್‌ ವ್ಯತ್ಯಯವಾಗದಂತೆ ಕ್ರಮ ಕೈಗೊಂಡಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಗೆ ವಹಿಸುವಂತೆ ಪೊಲೀಸ್‌ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಎಚ್‌. ಶ್ರೀನಿವಾಸ್‌ ತಿಳಿಸಿದ್ದಾರೆ.

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X