ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್‌ಟಿಎಫ್‌ ಮೈಯೆಲ್ಲಾ ಕಣ್ಣು, ಕಾಡುಗಳ್ಳನ ಪತ್ತೆಗೆ ಶ್ವಾನದಳ

By Staff
|
Google Oneindia Kannada News

ಕೊಯಮತ್ತೂರು : ಶುಕ್ರವಾರದ ವೀರಪ್ಪನ್‌ ಹಾಗೂ ತಂಡದೊಂದಿಗಿನ ಮುಖಾಮುಖಿಯ ನಂತರ ಎಸ್‌ಟಿಎಫ್‌, ಮೈಯೆಲ್ಲಾ ಕಣ್ಣಾಗಿಸಿಕೊಂಡು ವೆಳ್ಳಿಯೂರು ಅರಣ್ಯ ಪ್ರದೇಶದಲ್ಲಿ ತೀವ್ರ ಶೋಧ ನಡೆಸಿದೆ. ವೈಮಾನಿಕ ಕಾರ್ಯಾಚರಣೆ ಮುಂದುವರೆದಿದ್ದು, ಈಗ ಶ್ವಾನಪಡೆಯನ್ನೂ ಬಳಸಿಕೊಳ್ಳಲಾಗುತ್ತಿದೆ ಎಂದು ಪೊಲೀಸ್‌ ಮೂಲಗಳು ಹೇಳಿವೆ.

ಎಸ್‌ಟಿಎಫ್‌ನ ಹಿರಿಯ ಅಧಿಕಾರಿಗಳು ಕೊಟ್ಟಿರುವ ಇನ್ನಷ್ಟು ಮಾಹಿತಿಗಳು...

ಕಳೆದ ಐದು ವರ್ಷಗಳಿಂದ ವೀರಪ್ಪನ್‌ ತಂಗುದಾಣದ ಬಗ್ಗೆ ಇದೇ ಮೊದಲ ಬಾರಿಗೆ ನಿಖರ ಮಾಹಿತಿ ಸಿಕ್ಕಿದ್ದು, ಆತ ಹಾಗೂ ಆತನ ತಂಡ ವೆಳ್ಳಿಯೂರು ಕಾಡಿನಿಂದ ಪಾರಾಗದಂತೆ ವಿಶೇಷ ಕಾರ್ಯಾಚರಣೆ ಪಡೆಗಳು ಜಾಗೃತವಾಗಿವೆ. 3 ವಿಮಾನಗಳು ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಹಾರಾಟ ನಡೆಸಿವೆ.

ಶುಕ್ರವಾರ ಗುಂಡಿನ ಚಕಮಕಿಯ ನಂತರ ಆ ಪ್ರದೇಶದಲ್ಲಿ ಕೆಲವು ಚಪ್ಪಲಿಗಳು ದೊರೆತಿದ್ದು, ಅವುಗಳ ವಾಸನೆಯ ಜಾಡು ಹಿಡಿದು ಕಾಡುಗಳ್ಳನ ಗುಂಪನ್ನು ಹಿಡಿಯಲು ಎರಡು ಶ್ವಾನಗಳನ್ನು ಶನಿವಾರದಿಂದಲೇ ಬಳಸಲಾಗುತ್ತಿದೆ. ತಿರುಚನಾಪಳ್ಳಿಯಿಂದ ಇನ್ನೂ 2 ನಾಯಿಗಳು ದಳವನ್ನು ಕೂಡಲಿವೆ. ಕಾಡಿನಿಂದ ವೀರಪ್ಪನ್‌ ಯಾವುದೇ ಕಾರಣಕ್ಕೂ ತಪ್ಪಿಸಿಕೊಳ್ಳದಂತೆ ಸಾವಂತಿ ಬೆಟ್ಟದ ಎಲ್ಲಾ ಪ್ರವೇಶ ಸ್ಥಳಗಳಲ್ಲಿ ಹೆಚ್ಚೆಚ್ಚು ಕಾರ್ಯಪಡೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ತ್ರಿಶೂರ್‌ ಡಿಐಜಿ ಮತ್ತು ಪಾಲಕ್ಕಾಡ್‌ ಎಸ್‌ಪಿ ನೇತೃತ್ವದ ಕೇರಳ ಪೊಲೀಸರ ಎರಡು ತಂಡಗಳು ಮಲಂಪುಯ ಮತ್ತು ವಾಲ್ವಾರ್‌ನಿಂದ ಕಾಡನ್ನು ಸುತ್ತುವರಿಯುತ್ತಿವೆ.

ತಮಿಳುನಾಡಿನ ಎಸ್‌ಟಿಎಫ್‌ನ ಎಸ್‌ಪಿ ಶೈಲೇಂದ್ರಬಾಬು ನೇತೃತ್ವದ ತಂಡ, ಅದರೊಟ್ಟಿಗೆ ಗಡಿ ಭದ್ರತಾ ಪಡೆಯ ಯೋಧರ ತಂಡ ಒತ್ತೊತ್ತಾಗಿ ಮರಗಳಿರುವ ಸೂಕ್ಷ್ಮ ಜಾಗೆಗಳಲ್ಲಿ ಕಾರ್ಯಾಚರಣೆ ನಡೆಸಿವೆ. ತಮಿಳುನಾಡು ಕಾರ್ಯಾಚರಣೆ ಪಡೆಯ ಡಿ.ಜಿ.ಬಾಲಚಂದ್ರನ್‌ ಹಾಗೂ ಕರ್ನಾಟಕ ಎಸ್‌ಟಿಎಫ್‌ನ ಹರ್ಷವರ್ಧನ ರಾಜು ಕೂಡ ಅರಣ್ಯ ಹೊಕ್ಕಿದ್ದಾರೆ.

ಮಾರುವೇಷ ದಳ : ಉಭಯ ರಾಜ್ಯಗಳ ವಿಶೇಷ ಕಾರ್ಯಾಚರಣೆ ಪಡೆಯ ಗುಪ್ತಾಚಾರ ದಳವೊಂದು ಹಳ್ಳಿಗರ ಮಾರುವೇಷ ಧರಿಸಿ, ವೀರಪ್ಪನ್‌ ತಂಡಕ್ಕೆ ಅನುಮಾನ ಬರದಂತೆ ಮಾಹಿತಿ ಹೆಕ್ಕುತ್ತಿದೆ. ದಿಂಬಂನಿಂದ ಸುರಕ್ಷಿತ ಸ್ಥಳವೆಂದು ಲೆಕ್ಕಿಸಿ ವೀರಪ್ಪನ್‌ ಹಾಗೂ ತಂಡ ಕೇರಳ ಗಡಿ ಭಾಗಕ್ಕೆ ಬಂದಿರುವುದೇ ಎಸ್‌ಟಿಎಫ್‌ ಬಲೆಗೆ ಬೀಳುವಂತಾಗಿದೆ. ಇನ್ನೆರಡು ದಿನಗಳಲ್ಲಿ ಆತನ ತಂಡವನ್ನು ನಾವು ಪತ್ತೆ ಮಾಡುತ್ತೇವೆ.

ವೀರಪ್ಪನ್‌ ಡೈರಿಯಲ್ಲಿ... : ಶುಕ್ರವಾರದ ಗುಂಡಿನ ಚಕಮಕಿಯ ನಂತರ ದೊರೆತ ವಸ್ತುಗಳ ಪೈಕಿ ಒಂದು ಡೈರಿ ಕೂಡ ದೊರೆತಿದ್ದು, ಅದರಲ್ಲಿ ಹಲವು ದೂರವಾಣಿ ಸಂಖ್ಯೆಗಳಿವೆ. ಆ ಸಂಖ್ಯೆಗಳು ಯಾರವು ಎಂಬುದನ್ನು ಈಗಲೇ ಬಹಿರಂಗಪಡಿಸಲಾಗದು. ಲಭ್ಯವಾಗಿರುವ ಮೊಬೈಲ್‌ ಫೋನಿಗೆ ಮಾಡಲಾಗಿರುವ ಕರೆಗಳ ಪತ್ತೆಗೂ ತನಿಖೆ ನಡೆಸಲಾಗುತ್ತಿದೆ ಎಂದು ಕರ್ನಾಟಕ ಪೊಲೀಸ್‌ ಮಹಾ ನಿರ್ದೇಶಕ ಸಿ.ದಿನಕರ್‌ ತಿಳಿಸಿದ್ದಾರೆ.

(ಇನ್ಫೋ ವಾರ್ತೆ).

ವಾರ್ತಾಸಂಚಯ
ಮುಖಪುಟ / ವೀರಪ್ಪನ್‌ ಶಿಕಾರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X