ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂದು ಎನಗೆ ಗೋವಿಂದ

By Super
|
Google Oneindia Kannada News

ಅಹಮದಾಬಾದ್‌ : ಸಂಕಟ ಬಂದಾಗ ವೆಂಕಟರಮಣ ಅನ್ನುವುದು ಗುಜರಾತಿನಲ್ಲಿ ಮತ್ತೊಮ್ಮೆ ಸತ್ಯವಾಗುತ್ತಿದೆ. ಮಂದಿರ- ಮಸೀದಿ- ಇಗರ್ಜಿ ಎಲ್ಲೆಲ್ಲಿ ನೋಡಲಿ ನೊಂದವರ ಸಾಲುಗಳು. ಇಂದು ಎನಗೆ ಗೋವಿಂದ ನಿನ್ನಯ ಪಾದಾರವಿಂದವೆ ಗತಿ ಎಂದು ಹಿಂದೂ ಮಂದಿ ಹಾಡುತ್ತಿದ್ದರೆ, ಅಲ್ಲಾ ಅಲ್ಲಾ ನೀನೆ ಎಲ್ಲಾ ಎಂಬುದು ಮುಸಲ್ಮಾನರ ಪ್ರಾರ್ಥನೆ. ಜೀಸಸ್‌ ಭಕ್ತರು ಎಲ್ಲವೂ ಕ್ರಿಸ್ತಾರ್ಪಣ ಅನ್ನುತ್ತಿದ್ದಾರೆ. ಪ್ರಾರ್ಥನೆ ಸಾಗುತ್ತಿದೆ ಹಗಲೂ ಇರುಳೂ.

ಪ್ರಭುವೇ ಮತ್ತೆ ಎರಗದಿರಲಿ ಸಿಡಿಲು : ಮನೆ ಮಠದೊಂದಿಗೆ ಕಳ್ಳುಬಳ್ಳಿಗಳ ಕಳಕೊಂಡವರು, ಬಾನನ್ನೇ ಸೂರಾಗಿಸಿಕೊಂಡು ಪುನರ್ವಸತಿಗಾಗಿ ಚಾತಕಗಳಾಗಿರುವವರು ಈಗ ದೇವರ ಮೊರೆ ಹೋಗಿದ್ದಾರೆ. ಜ. 26 ರ ಸಮೂಹನಾಶ ಮತ್ತೊಮ್ಮೆ ಎರಗದಿರಲಿ ಎಂದು ಸರ್ವಶಕ್ತನಿಗೆ ಸಂತ್ರಸ್ತರ ಮೊರೆ. ಪದೇ ಪದೇ ಕಂಪಿಸುತ್ತಿರುವ ವಸುಂಧರೆಯೂ ಅವರ ಭೀತಿಯನ್ನು ಹೆಚ್ಚಿಸುತ್ತಿದ್ದಾಳೆ, ಆ ಮೂಲಕ ಧಾರ್ಮಿಕ ಪ್ರಜ್ಞೆಯ ಚೋದಿಸುತ್ತಿದ್ದಾಳೆ.

ಶುಕ್ರವಾರ (ಜ.26) ದ ಭೂಕಂಪದ ನಂತರ ಪ್ರಾರ್ಥನಾ ಮಂದಿರಗಳಿಗೆ ಬರುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಸಾವಿರಾರು ಮಂದಿ ದೇಗುಲಗಳಿಗೆ ಭೇಟಿ ಕೊಡುತ್ತಿದ್ದಾರೆ ಎಂದು ಷಾಹಿಬಾಗ್‌ ಗಾಯತ್ರಿ ದೇಗುಲದ ಪ್ರಮುಖ ಅರ್ಚಕ ಲಾಭ್‌ಶಂಕರ್‌ ಜೋಶಿ ಹೇಳುತ್ತಾರೆ. ತಮ್ಮ ಕಾರ್ಯ ವ್ಯಾಪ್ತಿಯ ದೇಗುಲಕ್ಕೆ ಭೇಟಿ ಕೊಡುತ್ತಿರುವ ಬಹುತೇಕರು ಈ ಮೊದಲು ವರ್ಷಗಳ ಕಾಲ ದೇಗುಲಕ್ಕೆ ಭೇಟಿ ಕೊಟ್ಟಿರಲಿಲ್ಲ . ಆದರೆ, ಕಳೆದ ಮೂರು ದಿನಗಳಿಂದ ತಪ್ಪದೆ ಪ್ರಾರ್ಥನೆ ಸಲ್ಲಿಸಲು ಬರುತ್ತಿದ್ದಾರೆ ಅನ್ನುವುದು ಜೋಶಿಯವರ ಅನುಭವ.

ಎಚ್ಚರ ! ಭೂಮಾತೆ ಮುನಿದಿದ್ದಾಳೆ : ಜೈನ ಬಳಗದ್ದು ಬೇರೆಯದ್ದೇ ಆದ ನಂಬಿಕೆ. ದುಷ್ಟ ಶಕ್ತಿಗಳು ದೂರವಿರಲೆಂದು ಮನೆಯ ಸುತ್ತಲೂ ದಿಯಾಸ್‌ (ಮಣ್ಣಿನ ಹಣತೆ) ಬೆಳಗಿಸುತ್ತಿದ್ದಾರೆ. ಮಜುಲಬೇನ್‌ ಷಾ ಅನ್ನುವ ಜಿನ ಗೃಹಿಣಿಯಂತೂ ಭೂಕಂಪಕ್ಕೆ ತಮ್ಮದೇ ವ್ಯಾಖ್ಯಾನ ಕಟ್ಟುತ್ತಾರೆ. ಅವರ ಪ್ರಕಾರ, ಭೂಕಂಪ ಭೂಮಿ ದೇವತೆಗಳು ಮುನಿದಿರುವ ಸಂಕೇತ. ತಾವು ದಿಯಾಸ್‌ಗಳನ್ನು ಬೆಳಗುತ್ತಿರುವುದು ಪರಿಣಾಮ ಬೀರಿದೆ. ದಿಯಾಸ್‌ ಪ್ರಭಾವದಿಂದಲೇ ತೀವ್ರ ಭೂಕಂಪ ಮತ್ತೊಮ್ಮೆ ಸಂಭವಿಸಿಲ್ಲ ಎಂದೇ ಷಾ ನಂಬಿದ್ದಾರೆ.

ಸಂಜೆಯಾಗುತ್ತಿದಂತೆ ಜಿನ ಹಾಗೂ ಹಿಂದೂ ಮಂದಿರಗಳಿಗೆ ರಂಗೇರುತ್ತಿದೆ. ಪ್ರತಿ ಸಂಜೆಯೂ ಮಂದಿರಗಳಲ್ಲಿ ವಿಶೇಷ ಪ್ರಾರ್ಥನೆ. ಅಲ್ಲಿ ನೂರಾರು ಭಕ್ತರು ಸೇರುತ್ತಾರೆ. ಇಗರ್ಜಿ, ಮಸೀದಿಗಳಲ್ಲೂ ಇಂಥದ್ದೇ ಪರಿಸ್ಥಿತಿ. ಇಗರ್ಜಿಯಾಂದರ ಮುಖ್ಯಸ್ಥರು ಹೇಳುವಂತೆ - ಈ ಮುನ್ನ ಇಗರ್ಜಿ ಕಾಣುತ್ತಿದ್ದುದು ಕೆಲವೇ ಭಕ್ತರನ್ನು . ಈ ದಿನಗಳಲ್ಲಿ ನೂರಾರು ಭಕ್ತರು ಪ್ರಾರ್ಥನೆಗೆ ಆಗಮಿಸುತ್ತಿದ್ದಾರೆ. ಬೆಳಗಿನ ವೇಳೆಯಲ್ಲಂತೂ ನೂಕು ನುಗ್ಗಲು.

ದರ್ಶನಕ್ಕೆ ಬಂದವರಿಗೆ ಪ್ರಸಾದ : ಭೇಟಿ ನೀಡುವ ಭಕ್ತರಿಗೆ ವಿತರಿಸಲು ಅನೇಕರು ಆಹಾರ ಹಾಗೂ ಸಿಹಿತಿಂಡಿಗಳನ್ನು ಮಂದಿರಗಳಿಗೆ ದೇಣಿಗೆ ನೀಡುತ್ತಿದ್ದಾರೆ. ಭೂಕಂಪದ ನಂತರವಂತೂ ಮಂದಿರಗಳಿಗೆ ಬರುತ್ತಿರುವ ಹಣ ಹಾಗೂ ಆಹಾರ ರೂಪದ ದೇಣಿಗೆ ಭಾರೀ ಸಂಖ್ಯೆಯಲ್ಲಿ ಹೆಚ್ಚಾಗುತ್ತಿದೆ. ದೇಣಿಗೆ ಬರುತ್ತಿರುವ ಹಣವನ್ನು ಸಂತ್ರಸ್ತರ ಪರಿಹಾರ ಕಾರ್ಯಕ್ಕಾಗಿ ಬಳಸುತ್ತಿದ್ದೇವೆ ಅನ್ನುತ್ತಾರೆ ಜೋಶಿ.

ಅದೇನೆ ಇರಲಿ. ವಿಶ್ವ ಕಂಡ ಅತ್ಯಂತ ಘೋರ ದುರಂತವೊಂದಕ್ಕೆ ಬಲಿಯಾಗಿರುವ ಗುಜರಾತ್‌ನಲ್ಲೀಗ ಕಾಣುತ್ತಿರುವ ದೈವ ಪ್ರಜ್ಞೆ ಯನ್ನು ಅರ್ಥೈಸುವುದು ಕಷ್ಟ . ರೆಡ್‌ಕ್ರಾಸ್‌ ಸೇರಿದಂತೆ ವಿದೇಶಗಳ ಮಂದಿ ಪರಿಹಾರ ಕಾಮಗಾರಿಗಳಲ್ಲಿ ವ್ಯಸ್ತರಾಗಿರುವ ಚಿತ್ರ ಒಂದೆಡೆ, ದೇಗುಲಗಳಲ್ಲಿ ಕಂಡು ಬರುತ್ತಿರುವ ಗುಂಪು ಮತ್ತೊಂದೆಡೆ- ಈ ಎರಡೂ ಚಿತ್ರಗಳನ್ನು ಒಟ್ಟಿಗೆ ಕಲ್ಪಿಸಿಕೊಳ್ಳುವುದು ಕಷ್ಟ .

English summary
Earthquake makes People to rush into prayer halls in gujarath
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X