ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಗಲು ಸುಡು ಸೂರ್ಯ, ಇರುಳು ಗವ್ವನೆ ಕತ್ತಲು

By Staff
|
Google Oneindia Kannada News

ಗುಜರಾತ್‌ನಲ್ಲಿ ಸಾವಿನ ಸಂಖ್ಯೆ ಕ್ಷಣದಿಂದ ಕ್ಷಣಕ್ಕೆ ಹೆಚ್ಚುತ್ತಿರುವ ಜೊತೆ ಜೊತೆಗೇ ಹರಿದು ಬರುತ್ತಿರುವ ನೆರವಿನ ಹರಿವೂ ಹೆಚ್ಚುತ್ತಿದೆ. ದೇಶದೊಳಗೆ ಹೊರಗಿನಿಂದ ಪ್ರವಾಹೋಪಾದಿಯಲ್ಲಿ ನೆರವು ಗುಜರಾತ್‌ಗೆ ಬರುತ್ತಿದೆ. ಆದರದು ಬಕಾಸುರನ ಹೊಟ್ಟೆಗೆ ಸಲ್ಲುವ ಅರೆಕಾಸಿನ ಮಜ್ಜಿಗೆ.

ಸಂತ್ರಸ್ತ ಜನತೆ ಬಿಸಿಲಿನಲ್ಲಿ ಬಸವಳಿದು ನರಳುತ್ತಿದೆ. ಎಷ್ಟೋ ಜನ ಭೂಕಂಪ ಸಂಭವಿಸಿದ ದಿನದಿಂದ ತಲೆಯ ಮೇಲೊಂದು ಸೂರು ಕಂಡಿಲ್ಲ . ಅವರ ಪಾಲಿಗೆ ಹಗಲೆಲ್ಲಾ ಸುಡುವ ಸೂರ್ಯ, ರಾತ್ರಿಯಾದರೆ ಎದುರಿನವರ ಮುಖ ಕಾಣದ ಕತ್ತಲು. ಅರ್ಥಾತ್‌ ಅವರ ಬದುಕೀಗ ಕತ್ತಲೆ. ಬೆಳಕು ಬರುವ ದಿನ ಸದ್ಯಕ್ಕಂತೂ ಹತ್ತಿರ ಇರುವ ಹಾಗೆ ಕಾಣುತ್ತಿಲ್ಲ . ಯಾಕೆಂದರೆ, ಸಂಭವಿಸಿರುವ ದುರಂತ ಹಿಂದೆಂದೂ ಕಾಣದಂಥಹದ್ದು . ಇದೆಲ್ಲಾ ಅರಿತೂ ನೆರವಿಗಾಗಿ ಟೊಂಕ ಕಟ್ಟಿದವರು ಅಹೋ ರಾತ್ರಿ ಶ್ರಮಿಸುತ್ತಿದ್ದಾರೆ. ಕೆಲಸ ತಮ್ಮದು, ಫಲಾಫಲ ಅವನದು ಎನ್ನುವ ನಿಷ್ಕಾಮ ಅವರದ್ದು .

ಬೆಂಗಳೂರಿನಲ್ಲಿ ಮೊನ್ನೆ ಗುಡುಗಿದ ನೆಲ ಆಮೇಲೆ ಯಥಾವತ್‌ ಗಂಭೀರವಾಗಿದೆ. ಜನ ಮಾಮೂಲಿನ ಲಯಕ್ಕೆ ಮರಳಿದ್ದಾರೆ. ಶಾಲಾ ಕಾಲೇಜುಗಳು, ಕಚೇರಿಗಳು ಎಂದಿನಂತೆ ಲವಲವಿಕೆಯಿಂದಿವೆ. ಆದರೂ, ಜನತೆಯಲ್ಲಿ ಮತ್ತೇನಾದರೂ ಭೂಮಿ ನಡುಗೀತೇನೊ ಅನ್ನುವ ಆತಂಕದೆಳೆ. ಕೆಲವರ ಆತಂಕ ನಿರೀಕ್ಷೆಯಂತೆ ಧ್ವನಿಸುತ್ತಿರುವುದು ಈ ಹೊತ್ತಿನ ದುರಂತ ಇದ್ದೀತು. ಅದೇನಾದರೂ ಇರಲಿ, ರಾಜ್ಯದ ಶಾಂತಿ ಹಾಳಾಗಿಲ್ಲ . ಇಲ್ಲಿ ಭೂಕಂಪ ಸಂಭವಿಸುವ ಸಾಧ್ಯತೆಯೂ ಇಲ್ಲ ಎಂದಿದ್ದಾರೆ ತಜ್ಞರು. ಅವರ ಮಾತು ನಿಜವಾಗಲಿ. ಎಲ್ಲರೂ ಬಿದ್ದರೆ ಊರುಗೋಲಾಗುವವರು ಯಾರು.

ಬುಧವಾರದ ಹವಾ ಹವಾ : ರಾಜ್ಯಾದ್ಯಂತ ಒಣಹವೆಯದ್ದೇ ಅಧಿಪತ್ಯ. ಕೆಲವೆಡೆ ಕನಿಷ್ಠ ತಾಪಮಾನದಲ್ಲಿ ತುಸು ಇಳಿಕೆ ಕಂಡು ಬಂದಿತ್ತು . ಬೆಳಗಾವಿಯಲ್ಲಿ ರಾಜ್ಯದ ಅತ್ಯಂತ ಕನಿಷ್ಠ ತಾಪಮಾನ 10.8 ಡಿಗ್ರಿ ಸೆಲ್ಷಿಯಸ್‌ ದಾಖಲಾಗಿತ್ತು . ಉಳಿದಂತೆ ಶುಕ್ರವಾರದವರೆಗೂ ಒಣಹವೆಯೇ ಮುಂದುವರಿಯುವುದು. ಬೆಂಗಳೂರಿನಲ್ಲಿ ಶುಭ್ರಾಕಾಶವಿದ್ದು, ಕನಿಷ್ಠ ಉಷ್ಣಾಂಶ 15 ಡಿಗ್ರಿ ಸೆಲ್ಷಿಯಸ್‌ ಆಸುಪಾಸಿರುವ ಸಂಭವವಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X