ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾವಿನ ನಡುವಲ್ಲೊಂದು ಹುಟ್ಟು :ಅಳುವ ಕಡಲಲಿ ತೇಲಿ ಬಂದ ಫೌಜಿ

By Staff
|
Google Oneindia Kannada News

ಅಂಜಾರ್‌ : ಸಾವಿನ ಊರಾಗಿ, ಭಯಾನಕವಾಗಿರುವ ಗುಜರಾತಿನಲ್ಲಿ ಸೋಮವಾರ ಬೆಳಿಗ್ಗೆ ಪವಾಡವೆಂಬಂತೆ, ಕಂದಮ್ಮನೊಬ್ಬ ಹುಟ್ಟಿದ್ದಾನೆ. ಎದೆ ಹಿಂಡುವ ಸಾವು ನೋವುಗಳ ಅಳಲು, ಜೀವ ಉಳಿದರೆ ಸಾಕು ಎಂಬ ಕರುಳಿನಾಳದ ಆಸೆಯ ಕೂಗುಗಳ ನಡುವೆ ಅಂಜಾರ್‌ನಲ್ಲಿ ಒಂದಷ್ಟು ಮಂದಿಯ ಮುಖದಲ್ಲಿ ನಗು ಕಾಣಿಸಿಕೊಂಡಿತು.

ಕಟ್ಟಡದ ಅವಶೇಷಗಳಡಿ ಸಿಕ್ಕಿ ಹಾಕಿಕೊಂಡಿದ್ದ ತುಂಬು ಗರ್ಭಿಣಿಯನ್ನು ಸೈನಿಕರು ರಕ್ಷಿಸಿದ್ದಾರೆ. ಕಳೆದ ಮೂರು ದಿನಗಳ ಕಾಲ ಕಟ್ಟಡದಡಿಯಲ್ಲಿ ಸಿಲುಕಿಕೊಂಡಿದ್ದ ಮಹಿಳೆ, ಮಧು ಜೈನ್‌ ಎಂಬಾಕೆಯನ್ನು ಅವಶೇಷಗಳಡಿಯಿಂದ ತೆಗೆದ ತುಸು ಹೊತ್ತಿಗೇ ಅಂದರೆ ವಸಂತ ಪಂಚಮಿಯಂದು ಬೆಳಿಗ್ಗೆ ಆಕೆ, ಗಂಡು ಮಗುವಿಗೆ ಜನ್ಮ ನೀಡಿದರು. ಭುಜ್‌ ಪ್ರದೇಶದ ಜನರು ಅಲ್ಲಿನ ಮಿಲಿಟರಿ ಆಸ್ಪತ್ರೆಯಲ್ಲಿ ಹುಟ್ಟಿದ ಕಂದಮ್ಮನ ಅಳುದನಿಯನ್ನು ಕೇಳಿಸಿಕೊಂಡು ಮಡುಗಟ್ಟಿದ ವಿಷಾದವನ್ನು ತುಸು ಒತ್ತಟ್ಗಿಟ್ಟು ಮುಗುಳು ನಗುತ್ತಾರೆ.

ಬದುಕುವ ಛಲದ ಮಗುವಿನ ಹೆಸರು ಫೌಜಿ : ಅದೇ ಆಸ್ಪತ್ರೆಯ ವಾರ್ಡಿನಲ್ಲಿ ಭೂಕಂಪದ ಹರಿತವಾದ ಹಲ್ಲುಗಳಡಿಯಿಂದ ಬರೀ ಉಸಿರಿನೊಂದಿಗೆ ತಪ್ಪಿಸಿಕೊಂಡು ಬಂದು ಶುಶ್ರೂಷೆ ಪಡೆಯುತ್ತಿರುವವರಿದ್ದಾರೆ. ಅವರೆಲ್ಲರ ನರಳಾಟ, ಅಳಲಿನ ನಡುವೆ, ಫೌಜಿಯ ಅಳು ಅವರೆದೆಯಲ್ಲಿ ವಾತ್ಸಲ್ಯ, ಖುಷಿಯ ಸಣ್ಣ ಅಲೆಯೆಬ್ಬಿಸುತ್ತಿದೆ. ಹರಸಾಹಸ ಮಾಡಿ ತಾಯಿ ಮಗುವನ್ನು ಉಳಿಸಿದ ಸೈನಿಕರು ಮಹಿಳೆಯನ್ನು ಬದುಕಿಸಿದ್ದನ್ನು ಸ್ಮರಿಸಿಕೊಂಡು, ಮಿಲಿಟರಿ ಆಸ್ಪತ್ರೆಯ ಡಾಕ್ಟರು ಮಗುವಿಗೆ ಫೌಜಿ ಎಂದು ಹೆಸರಿಟ್ಟಿದ್ದಾರೆ.

ಫೌಜಿಯ ಅಮ್ಮ ಮಧು 24 ವರ್ಷ ವಯಸ್ಸಿನ ಮಹಿಳೆ. ಆಸ್ಪತ್ರೆಯಿಂದ ಹೊರ ಹೋಗಲು ಮನೆಯೆಂಬುದೇ ಇಲ್ಲ . ಮಗುವಿನ ಅಪ್ಪ ಎಲ್ಲಿದ್ದಾರೋ, ಅವರಿಗೇನಾಗಿದೆಯೋ, ಎಂದು ಬಿಕ್ಕುವ ಈ ಬಾಣಂತಿ 70 ಗಂಟೆಗಳ ಬಳಿಕ ಕಟ್ಟಡಗಳ ಅಡಿಯಿಂದ ಬದುಕಿ ಬಂದಿರುವ ಬಗ್ಗೆ ಸಮಾಧಾನವಿದೆ. ಒಂದು ದೊಡ್ಡ ಕಲ್ಲಿನ ಹಲಗೆ ನನ್ನ ಮೇಲೆ ಬಿದ್ದಿತ್ತು, ಸ್ಕೂಟರ್‌ ಕೂಡ ನನ್ನನ್ನು ಒತ್ತಿ ಹಿಡಿದಿತ್ತು ಎಂದು 24 ವರ್ಷ ವಯಸ್ಸಿನ ಮಧು ಹೇಳುತ್ತಾರೆ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X