Get Updates
Get notified of breaking news, exclusive insights, and must-see stories!

ಭೂಕಂಪ : ಪುನರ್ವಸತಿಗೆ 500 ಕೋಟಿ ರು. ಪ್ರಧಾನಿ ಪ್ರಕಟಣೆ

ಭುಜ್‌ : ಬಿರಿದ ಭೂಮಿಯ ಕೆನ್ನಾಲಿಗೆಗೆ ತುತ್ತಾಗಿ ಸರ್ವನಾಶವಾಗಿರುವ ಭುಜ್‌ - ಕಛ್‌ ಸೇರಿದಂತೆ ಗುಜರಾತ್‌ನಲ್ಲಿ ಪುನರ್ವಸತಿ ಕಲ್ಪಿಸಲು ಕೇಂದ್ರ ಸರಕಾರ 500 ಕೋಟಿ ರುಪಾಯಿಗಳ ನೆರವು ಪ್ರಕಟಿಸಿದೆ.

ಭೂಕಂಪ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರು ಪ್ರಧಾನಮಂತ್ರಿಗಳ ಪರಿಹಾರ ನಿಧಿಯಿಂದ ಈಗಾಗಲೇ 10 ಕೋಟಿ ರುಪಾಯಿ ಬಿಡುಗಡೆ ಮಾಡಲಾಗಿದೆ. ಕೂಡಲೇ ಇನ್ನೂ 20 ಕೋಟಿ ರುಪಾಯಿಗಳ ಬಿಡುಗಡೆ ಮಾಡಲಾಗುತ್ತಿದೆ ಎಂಬ ವಿವರಗಳನ್ನು ನೀಡಿದರು.

ಪರಿಹಾರ ಕಾಮಗಾರಿಯಲ್ಲಿ ಕೈಜೋಡಿಸಿರುವ ಸರಕಾರೇತರ ಸಂಘ ಸಂಸ್ಥೆಗಳ ಉತ್ತಮ ಸೇವೆಯನ್ನು ಅವರು ಶ್ಲಾಘಿಸಿದರು. ಇದೊಂದು ಭೀಕರ ಭೂಕಂಪ ಎಂದ ಅವರು, ಇನ್ನೂ ಭಗ್ನಾವಶೇಷಗಳಡಿಯಲ್ಲಿ ಸಿಲುಕಿರುವ ಜನರ ರಕ್ಷಣೆಗೆ ಮುಂದಾಗುವಂತೆ ಜನತೆಗೆ ಕರೆ ನೀಡಿದರು. ಚಳಿಯಲ್ಲಿ ನಡುಗುತ್ತಿರುವ ಜನತೆಗೆ ಕಂಬಳಿಗಳ ತುರ್ತು ಅಗತ್ಯ ಇದ್ದು, ಸಂತ್ರಸ್ತರಿಗೆ ಸಹಾಯ ಮಾಡುವಂತೆ ರಾಷ್ಟ್ರದ ಎಲ್ಲ ನಾಗರಿಕರಲ್ಲಿ ಮನವಿ ಮಾಡಿದರು.

ಸದ್ಯಕ್ಕಂತೂ ಭೂಕಂಪ ತಡೆಗಟ್ಟುವ ಉಪಾಯ ನಮ್ಮ ಮುಂದಿಲ್ಲ. ಆದರೆ, ಆಗಬಹುದಾದ ಅನಾಹುತ ತಪ್ಪಿಸಲು ಕೈಗೊಳ್ಳ ಬೇಕಾದ ಕ್ರಮಗಳ ಬಗ್ಗೆ ವಿಜ್ಞಾನಿಗಳು ಹಾಗೂ ತಂತ್ರಜ್ಞರೊಂದಿಗೆ ಸಮಾಲೋಚಿಸಲಾಗುವುದು ಎಂದರು.

ವೈದ್ಯರ ತಂಡ : ಗಾಯಾಳುಗಳ ಚಿಕಿತ್ಸೆಗಾಗಿ ಸುಮಾರು 600 ವೈದ್ಯರ ತಂಡ, ನೂರಾರು ಸಹಾಯಕ ಸಿಬ್ಬಂದಿ ಹಾಗೂ 200ಕ್ಕೂ ಹೆಚ್ಚು ಅ್ಯಂಬುಲೆನ್ಸ್‌ಗಳು ಭುಜ್‌ ಹಾಗೂ ಕಛ್‌ಗೆ ಆಗಮಿಸಿವೆ. ಭೂಕಂಪದಿಂದಾಗಿ ತಮ್ಮ ಬಂಧು - ಮಿತ್ರರ ಗತಿ ಏನಾಗಿದೆ ಎಂಬ ಬಗ್ಗೆ ಮಾಹಿತಿಯೇ ಇಲ್ಲದೆ ತೊಳಲಾಡುತ್ತಿರುವ ಜನರ ಸಹಾಯಕ್ಕಾಗಿ ಈವರೆಗೆ 14 ವಿಶೇಷ ಉಚಿತ ರೈಲುಗಳನ್ನು ಓಡಿಸಲಾಗಿದೆ. ಅಲ್ಲದೆ ನಿರ್ವಸಿತರಾಗಿ ಪುನರ್ವಸತಿ ಕೇಂದ್ರಗಳಲ್ಲಿರುವ ಜನರ ನೆರವಿಗಾಗಿ 40 ಸಾವಿರ ಕಿಲೋ ಲೀಟರ್‌ ಸೀಮೆ ಎಣ್ಣೆಯನ್ನೂ ಬಿಡುಗಡೆ ಮಾಡಲಾಗಿದೆ. ತೈಲ ಕಂಪನಿಗಳು 40 ಕೋಟಿ ರುಪಾಯಿಗಳ ನೆರವು ಘೋಷಿಸಿವೆ.

ಕಛ್‌ ಪ್ರದೇಶದಲ್ಲಿ ಸುಮಾರು 15 ಸಾವಿರಕ್ಕೂ ಹೆಚ್ಚು ಮಂದಿ ಮೃತಪಟ್ಟಿರುವ ಶಂಕೆ ಇದೆ. ಕಾಂಡ್ಲಾ ಬಳಿಯ ಗಾಂಧೀಗ್ರಾಮ್‌ ಸಮೀಪದ ಎರಡು ಹಳ್ಳಿಗಳು ನಾಮವಶೇಷವಾಗಿ ಹೋಗಿವೆ. ಬದುಕುಳಿದಿರುವ ಮಂದಿ ನೀರು, ಆಹಾರದ ಕೊರತೆಯಿಂದ ಕಂಗೆಟ್ಟಿದ್ದಾರೆ. ಕೇವಲ ಮೂವರು ವೈದ್ಯರು 600ಕ್ಕೂ ಹೆಚ್ಚು ಜನರಿಗೆ ಒಂದೇ ದಿನ ಚಿಕಿತ್ಸೆ ನೀಡಿದ್ದಾರೆ. ಗಾಯಾಳುಗಳಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರೂ ಬಸವಳಿದಿದ್ದಾರೆ.

ಸಾವಿನ ಸಂಖ್ಯೆ 30 ಸಾವಿರ ಮುಟ್ಟುವ ಭೀತಿ: ಭುಜ್‌ ಪ್ರದೇಶದಲ್ಲಿ ಮತ್ತೆ ಮತ್ತೆ ಸಂಭವಿಸುತ್ತಿರುವ ಭೂಕಂಪಗಳಿಂದಾಗಿ ಬಿರುಕು ಬಿಟ್ಟು ನೆಲಕಚ್ಚದೇ ನಿಂತಿದ್ದ ಕಟ್ಟಡಗಳೂ ನೆಲಸಮಗೊಂಡಿವೆ. ಸಾವಿನ ಸಂಖ್ಯೆ 30 ಸಾವಿರವನ್ನೂ ದಾಟುವ ಸಾಧ್ಯತೆಗಳಿವೆ ಎಂದು ಪರಿಹಾರ ಕಾರ್ಯದಲ್ಲಿ ತೊಡಗಿಕೊಂಡಿರುವ ಸೇನಾ ಅಧಿಕಾರಿಗಳು ತಿಳಿಸಿದ್ದಾರೆ. ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಇನ್ನೂ ಲಕ್ಷ ಮಂದಿ ಸಿಲುಕಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಕೇಂದ್ರ ಸರಕಾರ ಗುಜರಾತ್‌ ಭೂಕಂಪ ಸಂತ್ರಸ್ತರಿಗೆ ಕಳುಹಿಸುವ ಎಲ್ಲ ನೆರವು ಸಾಮಗ್ರಿಗೆ ತೆರಿಗೆ ವಿನಾಯಿತಿ ಘೋಷಿಸಿದೆ.

(ಇಂಡಿಯಾ ಇನ್‌ಫೋ ವರದಿ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+