ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೆರವಿನ ಮಹಾಪೂರ, ಎಷ್ಟು ಬಂದರೂ ಸಾಲದು

By Staff
|
Google Oneindia Kannada News

ಬೆಂಗಳೂರು : ಸಂತ್ರಸ್ತರಿಗೆ 5 ಕೋಟಿ ರುಪಾಯಿ ನೆರವು ನೀಡಲು ಸಿದ್ಧವಾಗಿರುವುದಾಗಿ ಕರ್ನಾಟಕದ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಪ್ರಕಟಿಸಿದ್ದಾರೆ. ಸಚಿವರೊಬ್ಬರ ನೇತೃತ್ವದಲ್ಲಿ ನಿಯೋಗವೊಂದನ್ನು ಗುಜರಾತ್‌ಗೆ ಕಳುಹಿಸಿ, ನೆರವನ್ನು ಒದಗಿಸಲಾಗುವುದು ಎಂದು ಕೃಷ್ಣ ತಿಳಿಸಿದ್ದಾರೆ. ಆದರೆ, ನೆರವಿನ ವಿವರಗಳನ್ನು ಅವರು ಪ್ರಕಟಿಸಲಿಲ್ಲ .

ವಾಷಿಂಗ್ಟನ್‌ ವರದಿ : ಗುಜರಾತ್‌ನ ಭೂಕಂಪ ಸಂತ್ರಸ್ತರ ನೆರವಿಗೆ ಮಾನವೀಯತೆಯ ಹಿನ್ನೆಲೆಯಲ್ಲಿ ತಕ್ಷಣವೇ ಧಾವಿಸುವಂತೆ ಅಮೆರಿಕದ ನೂತನ ಅಧ್ಯಕ್ಷ ಜಾರ್ಜ್‌ ಡಬ್ಲ್ಯೂ. ಬುಷ್‌ರನ್ನು ಇಲ್ಲಿನ ಭಾರತೀಯ ನಿಯೋಗ ಒತ್ತಾಯಿಸಿದೆ.

ವಿಶ್ವದ ಅತ್ಯಂತ ಎರಡು ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಗಳ ನಡುವಣ ಸಂಬಂಧವನ್ನು ಉತ್ತಮಗೊಳಿಸುವ ದೃಷ್ಟಿಯಿಂದ ಕೂಡ ಅಮೆರಿಕ, ಭಾರತದ ನೆರವಿಗೆ ಮುಂದಾಗಬೇಕು ಹಾಗೂ ಸಾಧ್ಯವಿರುವ ಎಲ್ಲಾ ನೆರವನ್ನು ತಕ್ಷಣದಿಂದಲೇ ಒದಗಿಸಬೇಕೆಂದು ಬುಷ್‌ಗೆ ಬರೆದಿರುವ ಪತ್ರದಲ್ಲಿ ಭಾರತೀಯ ನಿಯೋಗ ಆಗ್ರಹಿಸಿದೆ. ಪತ್ರದ ಪ್ರತಿಗಳನ್ನು ಸಮಿತಿಯ ಸಹ ಅಧ್ಯಕ್ಷ ರಾದ ಜಿಮ್‌ ಮೆಕ್‌ಡರ್ಮಾಟ್‌ ಹಾಗೂ ಎಡ್ವರ್ಡ್‌ ರಾಯ್ಸ್‌ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ.

ಸಂಪೂರ್ಣ ನೆರವು - ಬುಷ್‌ ಘೋಷಣೆ : ಭೂಕಂಪ ಸಂತ್ರಸ್ತರಿಗೆ ತಮ್ಮ ಸಹಾನುಭೂತಿಯನ್ನು ವ್ಯಕ್ತಪಡಿಸಿರುವ ಅಮೆರಿಕ ಅಧ್ಯಕ್ಷ ಬುಷ್‌, ಅಮೆರಿಕದ ಎಲ್ಲ ನೆರವು ಭಾರತಕ್ಕೆ ದೊರೆಯಲಿದೆ ಎಂದು ಪ್ರಕಟಿಸಿದ್ದಾರೆ. ಭಾರತ ಸರ್ಕಾರ ನಿರೀಕ್ಷಿಸುವ ನೆರವು ಒದಗಿಸಲು ನಾವು ಸಿದ್ಧರಿದ್ದೇವೆ. ಭೂಕಂಪಗಳಿಗೆ ಯಾವುದೇ ರಾಜಕೀಯ ಗಡಿಗಳಿಲ್ಲ ಎಂದು ಅವರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿದೇಶಗಳಿಂದ ನೆರವಿನ ಮಹಾಪೂರ : ಭೂಕಂಪ ಪರಿಹಾರ ಕಾರ್ಯ ಕೈಗೊಳ್ಳುವ ವಿಶ್ವದ ಅತ್ಯುತ್ತಮ ಘಟಕ ಎಂದು ಹೆಸರಾಗಿರುವ ಹಾಗೂ ಸಂಚಾರಿ ಆಸ್ಪತ್ರೆ ಹೊಂದಿರುವ ಸೆಂಟೊಸ್ಪಾಸ್‌ನ್ನು ನವದೆಹಲಿ ಬಯಸಿದಲ್ಲಿ ನೇರವಾಗಿ ಭೂಕಂಪ ಪೀಡಿತ ಪ್ರದೇಶಗಳಿಗೆ ಕಳಿಸಲು ರಷ್ಯಾ ಸಿದ್ಧತೆ ಮಾಡಿಕೊಂಡಿದೆ.

ಸಂಕಷ್ಟದ ಸ್ಥಿತಿಯಲ್ಲಿ ನಾವು ನಿಮ್ಮೊಂದಿಗಿದ್ದೇವೆ ಎಂದು ರಾಷ್ಟ್ರಪತಿ ನಾರಾಯಣನ್‌ರಿಗೆ ಜರ್ಮನಿಯ ಅಧ್ಯಕ್ಷ ಜೋಹೆನ್ನ್ನೆಸ್‌ ಸಂದೇಶ ಕಳುಹಿಸಿದ್ದಾರೆ. ಪರಿಣತರ ತಂಡವನ್ನು ಭಾರತಕ್ಕೆ ಕಳುಹಿಸಲಾಗುವುದು ಎಂದು ಯುರೋಪ್‌ ಒಕ್ಕೂಟದ ಆಯುಕ್ತರು ಪ್ರಕಟಿಸಿದ್ದಾರೆ.

ಗುಜರಾತ್‌ಗೆ 3 ಮಿಲಿಯನ್‌ ಪೌಂಡ್‌ಗಳ ನೆರವನ್ನು ಒದಗಿಸುವುದಾಗಿ ಬ್ರಿಟನ್‌ ಸರ್ಕಾರ ಪ್ರಕಟಿಸಿದೆ. ಈ ನೆರವಿನಲ್ಲಿ ರೆಡ್‌ಕ್ರಾಸ್‌ನ 2.5 ಲಕ್ಷ ಪೌಂಡ್‌ಗಳ ನೆರವೂ ಸೇರಿದೆ.

ಆಂಧ್ರಪ್ರದೇಶದಿಂದ 5 ಕೋಟಿ ನೆರವು : ಭೂಕಂಪ ಸಂತ್ರಸ್ತರ ಪರಿಹಾರ ಕಾರ್ಯಕ್ಕೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು 5 ಕೋಟಿ ರುಪಾಯಿ ನೆರವು ಪ್ರಕಟಿಸಿದ್ದಾರೆ. ಚತ್ತೀಸ್‌ಘಡ ರಾಜ್ಯ 1 ಕೋಟಿ ರು. ನೆರವು ಪ್ರಕಟಿಸಿದೆ. ಅನೇಕ ರಾಜ್ಯಗಳು ಹಣಕಾಸು, ಆಹಾರ ಹಾಗೂ ಔಷಧಿ ನೆರವನ್ನು ಈಗಾಗಲೇ ಗುಜರಾತ್‌ಗೆ ಕಳುಹಿಸಿವೆ.

(ಯುಎನ್‌ಐ/ ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X