• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಉಳಿದೊಂದು ಚೂರು ಬ್ರೆಡ್ಡಿಗೆ ಜೊಲ್ಲು ಸುರಿಸುವ ಬದುಕು

By Staff
|

ಸುಖದ ತುತ್ತ ತುದಿಯಲ್ಲಿರುವಾಗ ಬುದ್ಧನಿಗೆ ಜೀವ ಬಲು ಅಗ್ಗ ಅನ್ನಿಸಿತಂತೆ. ಆದರೆ, ಐಹಿಕ ಭೋಗಗಳನ್ನೇ ಗುರಿಯಾಗಿಸಿಕೊಂಡ ನಮ್ಮ ನಿಮಗೆ ನಶ್ವರತೆಯ ಯೋಚನೆ ಬರುವುದು ಇಂಥಾ ನೋವಿನ ಪ್ರಸಂಗಗಳಲ್ಲೇ. ಜೀವ ಹಾಗೂ ಸಾವಿನ ನಡುವಿನ ಅಂತರವೆಷ್ಟು ? ಉತ್ತರ ಗೊತ್ತಿದೆ ಎಂದು ಎದೆ ತಟ್ಟಿಕೊಳ್ಳುವವರು ಬಹುಶಃ ಯಾರೂ ಇದ್ದಿರಲಾರರು. ಶುಕ್ರವಾರ ಬೆಳಿಗ್ಗೆ ಬದುಕಿಗೆ ಬೇಲಿಯಾಗಿಸಿಕೊಂಡಿರುವ ಮನೆಯನ್ನು ತೊರೆದು ಬೀದಿಗೆ ಬಿದ್ದ ದೆಹಲಿ, ಮುಂಬಯಿ, ಸೂರತ್‌, ಅಹಮದಾಬಾದ್‌, ಗೋವಾ, ವಿಜಯವಾಡಾ ಮುಂತಾದ ಊರುಕೇರಿಗಳ ಲಕ್ಷಾಂತರ ಜನರನ್ನು ಈ ಗೊಂದಲಗಳು ಇನ್ನೂ ಮುಂದೂ ಬಿಟ್ಟೂ ಬಿಡದೆ ಕಾಡುತ್ತವೆ.

ನಡೆದದ್ದೇನು ಅನ್ನುವ ಅಚ್ಚರಿ ಕಣ್ಣಲ್ಲುಳಿವ ಮುನ್ನವೇ ಅಹಮದಾಬಾದಿನ ಆ ಹುಡುಗನೆದೆಯಿಂದ ಪ್ರಾಣಪಕ್ಷಿ ದೂರಾಗಿತ್ತು . ಸ್ವಲ್ಪ ಹೊತ್ತಿಗೆ ಮೊದಲಷ್ಟೇ ಆ ಹುಡುಗ ಅಮ್ಮ ಅಕ್ಕರೆಯಿಂದ ನೀಡಿದ ಹಾಲು (ಚಹಾ) ಗುಟುಕರಿಸಿರಬಹುದು. ಶಾಲೆಯಲ್ಲಿ ನಡೆಯುವ ಗಣರಾಜ್ಯೋತ್ಸವ ಆಚರಣೆ ಸಂದರ್ಭದ ಕೊನೆಗೆ ಬಾಯಿ ಸಿಹಿಯಾಗಿಸುವ ಕಾಫಿಬೈಟು ಚಾಕೊಲೆಟ್‌ ನೆನೆದು ಖುಷಿಯಾಗಿರಬಹುದು. ಅಥವಾ ಈ ಎಲ್ಲಾ ಇಲ್ಲ . ಒಟ್ಟಿನಲ್ಲಿ ಆ ಹುಡುಗ ಇನ್ನಿಲ್ಲ . ಇನ್ನೆಂದೂ ಇಲ್ಲ . ಬಹುಶಃ ಅವನಿಗಿರಬಹುದಾದ ಪುಟ್ಟಿಯಾಬ್ಬಳಿಗೆ ಬೆಳಗ್ಗೆ ತಾನವನ ಮೇಲೆ ಸಿಟ್ಟಾದದ್ದೀಗ ನೆನಪಿಗೆ ಬರುತ್ತಿರಬಹುದು. ಅಥವಾ ನೆನ್ನೆ ಹೇಳಿದ ಸುಳ್ಳಿನ ಕುರಿತು ಯೋಚಿಸುತ್ತಿರಬಹುದು. ಅಥವಾ ನಿಮಿಷ ಕಾಲ ಅವನೊಟ್ಟಿಗೆ ಕೂತು ಮಾತನಾಡದೆ ಏನನ್ನೋ ಅರಸಿಹೋಗುವ ಆತುರದಲ್ಲಿ ಅವನ ಮನ ನೊಂದದ್ದೇಕೆ ಅನ್ನುವುದು ಅರ್ಥವಾಗುತ್ತಿರಬೇಕು. ಆದರೆ, ಆ ಹುಡುಗನ ಜೀವವಿಲ್ಲದ ದೇಹ ಎಲ್ಲಾ ಯೋಚನೆಗಳಿಂದ ಮುಕ್ತ .

ಪ್ರಧಾನಿ ವಾಜಪೇಯಿ ಗುರುವಾರ ರಾತ್ರಿ ನಿದ್ರೆಗೆ ಜಾರುವ ಮುನ್ನ , ಶುಕ್ರವಾರ ಬೆಳಿಗ್ಗೆ ವಾರ್ತೆಗೆ ಕಿವಿ ತೆರೆದುಕೊಳ್ಳುವ ಮುನ್ನ ಐವತ್ತೆರಡನೇ ಗಣರಾಜ್ಯ ದಿನದ ಭಾಷಣದ ಗುಂಗಿನಲ್ಲೇ ಇದ್ದಿರಬಹುದು. ಅವರ ಸರ್ಕಾರ, ದಿನ ಮೊದಲಷ್ಟೇ ಪ್ರಕ್ಷುಬ್ಧ ಕಾಶ್ಮೀರ ಕೊಳ್ಳದಲ್ಲಿ ಕದನ ವಿರಾಮವ ಮತ್ತೊಂದು ಮಾಸ ಹೆಚ್ಚಿಸಿತ್ತು . ಈ ಕ್ರಮವನ್ನು ದಿಟ್ಟ ನಡವಳಿಕೆ ಎಂದು ಬಣ್ಣಿಸಿದ್ದ ರಾಷ್ಟ್ರಪತಿಗಳ ಭಾಷಣದ ಗುಂಗು ಇನ್ನೂ ಕೊನೆಯಾಗಿಲ್ಲ . ಈ ನಡುವೆ ಯಾರಲ್ಲಾದರೂ ಸುಳಿದಾಡುತ್ತಿದ್ದ ಶಂಕಾತಂಕವೆಂದರೆ- ಉಗ್ರಗಾಮಿಗಳು ಪರಿಸ್ಥಿತಿಯ ಲಾಭ ಪಡೆಯುತ್ತಾರಾ ಅನ್ನುವುದು. ಅದಕ್ಕೆ ತಕ್ಕನಾಗಿ ಶುಕ್ರವಾರ ಕಾಶ್ಮೀರದಲ್ಲಿ ಅಲ್ಲಲ್ಲಿ ಗ್ರೆನೇಡುಗಳು ಸಿಡಿದಿವೆ. ಆದರೆ, ಅದರತ್ತೆ ಯಾರ ಗಮನವೂ ಹೋಗುತ್ತಿಲ್ಲ . ಎಲ್ಲೆಡೆ ಭೂಕಂಪದ್ದೇ ಮಾತು.

ಕಳೆದ ತಿಂಗಳಷ್ಟೇ ತಮಿಳುನಾಡು, ಕೇರಳದ ಕೆಲವು ಪ್ರದೇಶಗಳಲ್ಲಿ ಲಘು ಭೂಕಂಪ ಸಂಭವಿಸಿತ್ತು . ಆದರದು, ಕಂಗಾಲಾಗುವಷ್ಟು ಅನಾಹುತಗಳನ್ನೇನೂ ಹೊತ್ತು ತಂದಿರಲಿಲ್ಲ . ಈ ಭಾರಿಯದ್ದು ನೂರಾರು ಜನರನ್ನು ಬಲಿತೆಗೆದುಕೊಂಡಿರುವ ಚಂಡಿತನದ ಸ್ವರೂಪ. ಸತ್ತವರ ಸಂಖ್ಯೆ ಕ್ಷಣ ಕ್ಷಣಕ್ಕೂ ಹೆಚ್ಚುತ್ತಲೇ ಇದೆ. ಕಟ್ಟಡಗಳಡಿ ನುಜ್ಜುಗುಜ್ಜಾಗಿರುವ ದೇಹಗಳನ್ನು ತೆಗೆಯಲು, ಪರಿಸ್ಥಿತಿಯನ್ನು ನಿಯಂತ್ರಿಸಲು ಸೇನೆ ಕಾರ್ಯರಂಗಕ್ಕಿಳಿದಿದೆ. ಎಲ್ಲಾ ಮಾನವೀಯತೆಯ ಬಾಗಿಲುಗಳೂ ತೆಗೆದುಕೊಂಡಿವೆ.

ಎಲ್ಲವೂ ಯಥಾಸ್ಥಿತಿಗೆ ಬರಲು, ಮತ್ತೆ ಕನಸುಗಳನ್ನು ಕಟ್ಟಲು ಎಷ್ಟೊಂದು ವರ್ಷಗಳು ಬೇಕು . ಸದ್ಯಕ್ಕೆ ದುರಂತದ ಕರಾಳತೆಯೇ ಕಣ್ಣು ಕಟ್ಟುತ್ತಿದೆ. ಕಣ್ಣೀರು ಹರಿಯದೇ ಆವಿಯಾಗುತ್ತಿದೆ. ಈ ನಡುವೆಯೂ ಪುಟ್ಟಿಗೆ ಹೊಟ್ಟೆಯ ಹಸಿವಾಗುತ್ತೆ . ಅವಳು ಉಳಿದ ಕೊನೆಯ ತುಂಡು ರೊಟ್ಟಿಗೆ ಜೊಲ್ಲು ಹಚ್ಚುತ್ತಾಳೆ. ಅದು ಬದುಕು. ಆ ಬದುಕಿನತ್ತ ಮುಂದುವರಿಯಲಿ ಯುಗ ಯುಗದ ಪಯಣ. ಕನಸುಗಳು ಕೈಗೊಡದಿರಲಿ ಎಂದು ಹಾರೈಸುವ. ನಿಮ್ಮದೂ ದನಿಯಿರಲಿ. ತೋಳ ಕಸುವೂ ನೊಂದವರಿಗೆ ಊರುಗೋಲಾಗಲಿ. ಆಗುತ್ತೀರಲ್ಲವಾ.

ಶ್ರಕ್ರವಾರದ ಹವಾ : ರಾಜ್ಯದ ಬಹುತೇಕ ಭಾಗಗಳಲ್ಲಿ ದಿನದ ಉಷ್ಣಾಂಶ ಕುಸಿದಿದೆ. ಮೋಡ ಮುಚ್ಚಿದ ಧಗೆಯ ಬಾನಂಗಣದಡಿ ಗಣರಾಜ್ಯೋತ್ಸವ ಉತ್ಸವಗಳನ್ನು ರಾಜ್ಯಾದ್ಯಂತ ಆಚರಿಸಿದ ವರದಿಗಳೂ ಬಂದಿವೆ. ನೆರೆ ರಾಜ್ಯಗಳಲ್ಲಿ ಸಂಭವಿಸಿರುವ ಭೂಕಂಪದ ತೀವ್ರತೆ ಕನ್ನಡಿಗರಿಗೆ ತಟ್ಟಿಲ್ಲ . ಅವರೆಲ್ಲ ವಾಹಿನಿಗಳಲ್ಲಿ ಬಿತ್ತರವಾಗುತ್ತಿರುವ ಸಿನಿಮಾಗಳ ಸುಖದಲ್ಲಿದ್ದಾರೆ. ಉದಯವಾಯಿತು ಚೆಲುವ ಕನ್ನಡನಾಡು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more