ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

27 ವರ್ಷಗಳ ಹಿಂದೆ ಚಿನ್ನ ಕದ್ದವನಿಗೆ ದಂಡ : ಇದು ನಮ್ಮ ಕಾನೂನು

By Staff
|
Google Oneindia Kannada News

ನವದೆಹಲಿ : ಕಳೆದೈದು ವರ್ಷಗಳಲ್ಲಿ 2 ಕೋಟಿಗೂ ಮಿಕ್ಕ ಸಿವಿಲ್‌ ಪ್ರಕರಣಗಳು ಇನ್ನೂ ಚುಕ್ತಾ ಆಗಿಲ್ಲ. ಹೊಸ ಕೇಸುಗಳೂ ಗಣನೀಯವಾಗಿ ಹೆಚ್ಚುತ್ತಿವೆ. ಈಗಿನ ನ್ಯಾಯಾಲಯ ವ್ಯವಸ್ಥೆ ಇಷ್ಟೆಲ್ಲಾ ಕೇಸುಗಳನ್ನು ಶೀಘ್ರ ವಿಲೇವಾರಿ ಮಾಡಲಾಗದ ಕಾರಣ ದೇಶದ ಪ್ರತಿ ಜಿಲ್ಲೆಗೊಂದರಂತೆ 1700 ಜಲ್ದಿ ಚುಕ್ತಾ ಕೋರ್ಟುಗಳನ್ನು ಸ್ಥಾಪಿಸುವುದಾಗಿ ಕೇಂದ್ರ ಕಾನೂನು ಸಚಿವ ಅರುಣ್‌ ಜೈಟ್ಲಿ ಮೊನ್ನೆ ಮೊನ್ನೆ ಹೇಳಿದ್ದರು. ಸಿವಿಲ್‌ ಕೇಸುಗಳು ಹಾಗಿರಲಿ, ಕ್ರಿಮಿನಲ್‌ ಕೇಸುಗಳ ವಿಲೇವಾರಿಯೂ ಆಮೆ ವೇಗದಿಂದ ಹೊರ ಬಂದಿಲ್ಲ. ಜ್ವಲಂತ ನಿದರ್ಶನ ಇಲ್ಲಿದೆ...

ಕ್ರಿಶನ್‌ ಕುಮಾರ್‌ ಎಂಬ ‘ಚಿನ್ನಗಳ್ಳ’ 27 ವರ್ಷಗಳ ಹಿಂದೆ (1973) ಪೊಲೀಸರ ಕೈಗೆ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ದ. 1978ರಲ್ಲಿ ಆತನ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಾಯಿತು. ಅವ ಮಾಡಿದ ಕಳ್ಳತನ ರುಜುವಾತಾಗಿ ಜನವರಿ 24, 2001ದಂದು ನಗರ ಕೋರ್ಟು 5 ಸಾವಿರ ರುಪಾಯಿ ದಂಡ ವಿಧಿಸಿದೆ !

ಮಹಾನಗರ ಕೋರ್ಟಿನ ಹೆಚ್ಚುವರಿ ಮುಖ್ಯ ನ್ಯಾಯಾಧೀಶರಾದ ವಿ.ಕೆ.ಮಹೇಶ್ವರಿ ಈ ತೀರ್ಪಿತ್ತಿದ್ದಾರೆ. ದಿ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌ ಪತ್ರಿಕೆಯಲ್ಲಿ ಈ ಪ್ರಕರಣದ ಬಗ್ಗೆ ವರದಿ ಪ್ರಕಟವಾಗಿದೆ. ಕಾನೂನು ಕ್ಷೇತ್ರದಲ್ಲಿ ಕೈಯಾಡಿಸುವ ನನ್ನಂಥವರಿಗೆ ಇಂಥ ಪ್ರಕರಣಗಳು ದೊಡ್ಡ ತಲೆನೋವಾಗಿವೆ. 1973ರಲ್ಲಿ ಮಾಡಿದ ಕಳ್ಳತನಕ್ಕೆ ಈಗ ಶಿಕ್ಷೆ ಕೊಡುವಷ್ಟು ವಿಳಂಬ ನ್ಯಾಯಿಕ ವ್ಯವಸ್ಥೆ ಎನ್ನಲು ವಿಷಾದವಾಗುತ್ತದೆ ಎಂದು ಮಹೇಶ್ವರಿ ಹೇಳಿದ್ದಾರೆ.

ಯಾಕೆ ಹೀಗೆ? ಮಹೇಶ್ವರಿ ಕೊಟ್ಟಿರುವ ಉತ್ತರ ಇಂತಿದೆ...

  • ಸ್ವಾತಂತ್ರ್ಯಾ ನಂತರ ಕಾನೂನಿನಲ್ಲಿ ಕಂಡಾಪಟ್ಟೆ ಮಾರ್ಪಾಟುಗಳಾದವು. ಹೊಸ ಮಸೂದೆ ವಗೈರೆಗಳು ಸಿಕ್ಕಾಪಟ್ಟೆ ಸೇರಿ, ಪ್ರಕರಣದ ಇತ್ಯರ್ಥ ಸಂಕೀರ್ಣವಾಯಿತು.
  • ನಮ್ಮಲ್ಲಿ ಆರೋಪಿ, ಆರೋಪಿಯ ವಿರೋಧಿ ಅರ್ಜಿದಾರ ಇಬ್ಬರಿಗೂ ತಾವೇ ಸರಿ ಎಂದು ಹೋರಾಡಲು ಸಾಕಷ್ಟು ಅವಕಾಶಗಳಿವೆ. ಈ ಅವಕಾಶಗಳನ್ನು ಉಪಯೋಗಿಸಕೊಂಡು ಅರ್ಜಿ ಮೇಲೆ ಅರ್ಜಿ ಗುಜರಾಯಿಸೋದರಿಂದ ಕೇಸು ವಿಲೇವಾರಿ ವಿಳಂಬವಾಗುತ್ತದೆ.
ವರಮಾನ ಮತ್ತು ಅಬಕಾರಿ ಸುಂಕಾಧಿಕಾರಿಗಳು ಅಂದಾಜು 32 ಸಾವಿರ ರುಪಾಯಿ ಚಿನ್ನಾಭರಣಗಳ ಸಮೇತ ಕ್ರಿಶನ್‌ ಕುಮಾರ್‌ನನ್ನು ಬಂಧಿಸಿದ್ದರು. ಆತನ ಸೋದರಮಾವ ದಾಮೋದರ ದಾಸ್‌ ಹಾಗೂ ಕನ್ವರ್‌ ಲಾಲ್‌ ಎಂಬ ಅಕ್ಕಸಾಲಿಗ ಕೂಡ ಅಪರಾಧಿಗಳೆಂದು ರುಜುವಾತಾಗಿದ್ದು, ಸುಂಕ ಕಾಯ್ದೆ ಹಾಗೂ ಚಿನ್ನ ನಿಯಂತ್ರಣ ಕಾಯ್ದೆಯನ್ವಯ ಮೂವರೂ ಆರೋಪಿಗಳಿಗೆ ತಲಾ 5 ಸಾವಿರ ರುಪಾಯಿ ದಂಡ ವಿಧಿಸಲಾಗಿದೆ.

ಪ್ರಸ್ತುತ ದೇಶಾದ್ಯಂತ ಕೋರ್ಟುಗಳಲ್ಲಿ ಮೂರೂವರೆ ಕೋಟಿ ಪ್ರಕರಣಗಳು ಚುಕ್ತಾ ಆಗಬೇಕಿವೆ. ಶೀಘ್ರ ನ್ಯಾಯದಾನಕ್ಕಾಗಿ ಸರ್ಕಾರ 5 ಬಿಲಿಯನ್‌ ರುಪಾಯಿ ವೆಚ್ಚದಲ್ಲಿ ಮೂಲಭೂತ ಸೌಕರ್ಯ ಹಾಗೂ ಅಗತ್ಯ ಮುಖ್ಯ ನ್ಯಾಯಾಧೀಶರನ್ನು ನೇಮಿಸಲು ಮುಂದಾಗಿದೆ. ಆದರೆ ಇವೆಲ್ಲಾ ಕ್ಷಿಪ್ರವಾಗಿ ಅನುಷ್ಠಾನಕ್ಕೆ ಬರಬೇಕಷ್ಟೆ. ಜಲ್ದಿ ಚುಕ್ತಾ ಕೋರ್ಟುಗಳೂ ಬೇಗ ತಲೆ ಎತ್ತಿದಲ್ಲಿ ಪ್ರಕರಣಗಳ ಹೊರೆಯನ್ನು ಸಾಕಷ್ಟು ಮಟ್ಟಿಗೆ ಇಳಿಸಬಹುದು ಎನ್ನುತ್ತಾರೆ ಮಹೇಶ್ವರಿ.

(ಐಎಎನ್‌ಎಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X