ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೃಷ್ಣ ಕಂಡ ಕನಸು ನನಸಾದರೆ ..ಬೆಂದಕಾಳೂರಿಗಿಷ್ಟು ಅಮೃತ ಸಿಂಚನ

By Staff
|
Google Oneindia Kannada News

ಬೆಂಗಳೂರು : ಇದೊಂದು ಸುಂದರ ಕನಸು . ನಗರದ ಹೃದಯಭಾಗದಲ್ಲಿ ಬಯಲಾಗಿ ಬಿದ್ದು ವ್ಯಾಪಾರಸ್ಥರ ಆಸೆಗಳನ್ನು ಚೋದಿಸುವ, ವಾಣಿಜ್ಯಮೇಳಗಳಿಗೆ ತಾಣವಾಗುವ, ಯುವಕರಿಗೆ ಕ್ರಿಕೆಟ್‌ ಮೈದಾನವಾಗುವ 405 ಎಕರೆಗಳ ಅರಮನೆ ಮೈದಾನದಲ್ಲಿ ಹಸುರುಟ್ಟ ಮರಗಳು, ಹೂ ತೊಟ್ಟ ಗಿಡಗಳು ಮೈ ತಾಳುವುದೆಂದರೆ -

ಅಂಥದ್ದೊಂದು ಕನಸು ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಅವರ ಎದೆಯಲ್ಲಿ ಮೊಳೆತಿದೆ. ಪ್ಯಾಲೇಸ್‌ ಗ್ರೌಂಡ್‌ನ 405 ಎಕರೆ ಜಾಗದಲ್ಲಿ ಸುಂದರ ಉದ್ಯಾನವನವನ್ನು ನಿರ್ಮಿಸಬೇಕೆಂಬ ಕನಸಿದೆ ಎಂದು ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಹೇಳಿದ್ದಾರೆ. ಆದರೆ ಅಲ್ಲಿ ಗಿಡ ನೆಡುವ ಕೆಲಸ ಶುರು ಮಾಡಬೇಕಿದ್ದರೆ ಕೋರ್ಟ್‌ ಅಪ್ಪಣೆಗಾಗಿ ಕಾಯಬೇಕು.

ಮೈಸೂರು ರಾಜ ವಂಶದ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್‌ ಪ್ಯಾಲೇಸ್‌ ಗ್ರೌಂಡ್‌ನ ಬಗ್ಗೆ ತಕರಾರೆತ್ತಿ ಅದು ತಮಗೆ ಸೇರಬೇಕಾದ್ದು ಎಂದು ಆಗ್ರಹಿಸಿ ಕೋರ್ಟ್‌ ಮೆಟ್ಟಿಲೇರಿದ್ದಾರೆ. ಕೋರ್ಟ್‌ನಲ್ಲಿ ಕೇಸು ಇತ್ಯರ್ಥವಾಗಿ, ಸರಕಾರದ ಪರವಾಗಿ ತೀರ್ಪು ಬಂದರೆ, ಕೂಡಲೇ ಪ್ಯಾಲೇಸ್‌ ಗ್ರೌಂಡ್‌ನಲ್ಲಿ ಹಾರೆ ಪಿಕ್ಕಾಸಿಗಳೊಂದಿಗೆ ಆಳುಗಳು ಉದ್ಯಾನ ಕಟ್ಟುವ ಕೆಲಸ ಆರಂಭಿಸಲಿದ್ದಾರೆ. ಹೂವಿನ ಗಿಡ, ಮರಗಳ ಅಕ್ಕ ಪಕ್ಕ ಪುಟ್ಟ ತೊರೆ, ಮತ್ತು ಚಿಮ್ಮುವ ಕಾರಂಜಿಯ ಉದ್ಯಾನ ನಿರ್ಮಾಣ ಕೆಲಸ ನಡೆಯುತ್ತಿರುವಾಗಲೇ ಮಕ್ಕಳ ಆಟದ ಪಾರ್ಕನ್ನೂ ನಿರ್ಮಿಸಲು ಸರಕಾರ ಉದ್ದೇಶಿಸಿದೆ. ಸುದ್ದಿಗಾರರೊಂದಿಗೆ ಕ್ಯಾಷುವಲ್‌ ಆಗಿ ಮಾತನಾಡುತ್ತಿದ್ದ ಕೃಷ್ಣ ಈ ಐಡಿಯಾದ ಬಗ್ಗೆ ಹೇಳಿದ್ದಾರೆ.

ಬಟಾಬಯಲಿನಲ್ಲಿ ಜೀವ ಕಾರಂಜಿಗಳ ಉಗಮಕ್ಕೆ ಕಾನೂನು ಸಹಕರಿಸೀತೆ ?

ಅರಮನೆ ಆವರಣದಲ್ಲಿ ಪಾರ್ಕ್‌ ನಿರ್ಮಿಸಲು ಇರುವ ಇನ್ನೊಂದು ವಿಘ್ನವೂ ಕಾನೂನಿಗೆ ಸಂಬಂಧಪಟ್ಟಿದ್ದೆ. ಕಾಯ್ದೆ ಪ್ರಕಾರ ಪ್ಯಾಲೇಸ್‌ ಗ್ರೌಂಡ್‌ನಲ್ಲಿ ಯಾವುದೇ ಕಟ್ಟಡಗಳನ್ನು ಕಟ್ಟುವುದು ನಿಷಿದ್ಧ. ಟೆಂಪರರಿ ಟೆಂಟ್‌ ಹಾಕಿಕೊಂಡು ಉತ್ಸವ, ಜಾತ್ರೆ, ಮೇಳಗಳು ಅಲ್ಲಿ ನಡೆಯುವುದಿಲ್ಲ ಎಂದಲ್ಲ. ಆದರೂ ಶಾಶ್ವತ ಕಟ್ಟಡ ಮಾತ್ರ ಕಟ್ಟುವಂತಿಲ್ಲ. ನಮ್ಮ ಮುಖ್ಯಮಂತ್ರಿಗಳ ಲೆಕ್ಕಾಚಾರವೆಂದರೆ, ಒಂದುವೇಳೆ ಕೋರ್ಟ್‌ ತೀರ್ಪು ಸರಕಾರದ ಪರವಾಗಿದ್ದರೆ, ಈಗಾಗಲೇ ಇರುವ ಕಾಯ್ದೆಗೊಂದು ತಿದ್ದುಪಡಿ ವಾಕ್ಯ ಸೇರಿಸಿಕೊಂಡು, ಬೆಂಗಳೂರು ನಗರಕ್ಕೆ ಇನ್ನೊಂದು ಉದ್ಯಾನ ಕೊಡುವುದು. ಉದ್ಯಾನ ನಗರಿ ಎಂಬ ಹೆಸರು ಮರೆತು ಮಾಲಿನ್ಯ ನಗರಿ ಎಂದೇ ಕರೆಸಿಕೊಳ್ಳುತ್ತಿರುವ ಬೆಂಗಳೂರಿಗೆ, ಮುತ್ತಿಕೊಳ್ಳುವ ಹೊಗೆಯಿಂದ ಒಂದಿಂಚಾದರೂ ರಿಲೀಫ್‌ ಸಿಗಲು ಈ ಹೊಸ ಪಾರ್ಕ್‌ ಜೀವವಾಯು ಉಗುಳಬಲ್ಲುಜದು.
ಈ ಉದ್ಯಾನವನದ ಕನಸು ಸದ್ಯಕ್ಕಿರುವುದು ‘ರೆ ’ ಸಾಮ್ರಾಜ್ಯದಲ್ಲಿ. ಕೋರ್ಟ್‌ ತೀರ್ಪೇನಾದರೂ ಶ್ರೀಕಂಠದತ್ತ ಒಡೆಯರ ಪರವಾಗಿ ಬಂದರೆ ಸರಕಾರ ಮೌನವಾಗಿ ಈ ಮೈದಾನವನ್ನು ರಾಜ ಕುಟುಂಬಕ್ಕೆ ಹಸ್ತಾಂತರಿಸಿ ತುಳಸೀ ನೀರು ಬಿಡಬೇಕು. ಆಮೇಲೆ ಒಡೆಯರ ಚಿತ್ತದಂತೆ. ಕಾಂಪ್ಲೆಕ್ಸ್‌ , ಶಿಕ್ಷಣ ಸಂಸ್ಥೆ ..ಅಲ್ಲಿ ಏನಾದರೂ ಹುಟ್ಟಬಹುದು. ಜೊತೆಗೆ ಕೋರ್ಟ್‌ ವ್ಯವಹಾರ ಮುಗಿಯುವ ಹೊತ್ತಿಗೆ ಕೃಷ್ಣ ಅವರ ಕಾಲಾವಧಿಯೇ ಮುಗಿದಿರಲೂಬಹುದು. ಅದೇನೇ ಇರಲಿ, ಸದ್ಯಕ್ಕಂತೂ ಸರಕಾರದ ಉದ್ಯಾನದ ಕನಸು ಕೋರ್ಟ್‌ ಬೆಂಚಿನಲ್ಲಿ ತೀರ್ಪಿಗಾಗಿ ಕಾಯುತ್ತಾ ಕೂತಿದೆ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X