ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಂದೆ ಇಲ್ಲದ ಮಕ್ಕಳ ತಬ್ಬಿ ಕಂಬನಿ ಮಿಡಿದ ವರನಟ

By Staff
|
Google Oneindia Kannada News

ಮೈಸೂರು : ಶಿಳ್ಳೆ, ಚಪ್ಪಾಳೆ, ಬೊಬ್ಬೆ ಹೊಡೆಯುವಿಕೆ ಯಾವುದೂ ಕೇಳಲಿಲ್ಲ. ತಂದೆಯನ್ನು ಕಳೆದುಕೊಂಡ ಚಿಣ್ಣರನ್ನು ವರನಟ ತಬ್ಬಿ ಕಣ್ಣಾಲಿ ತುಂಬಿಕೊಂಡಾಗ, ನೆರೆದಿದ್ದ ಜನರ ಕಣ್ಣುಗಳೂ ತಾವೇ ತಾವಾಗಿ ಮಂಜಾದವು. ಮೌನ ಬಹಳಷ್ಟು ಮಾತಾಡಿತು.

ಕಾರ್ಗಿಲ್‌ ಹಾಗೂ ಆ ಯುದ್ಧಕ್ಕೂ ಮುನ್ನಾ ಸಮರಗಳಲ್ಲಿ ಮಡಿದ ಯೋಧರ ಕುಟುಂಬಗಳಿಗೆ 28 ಲಕ್ಷ ರುಪಾಯಿ ಚೆಕ್‌ ವಿತರಿಸಲು ಮಾನಸ ಗಂಗೋತ್ರಿ ಬಯಲು ರಂಗ ಮಂದಿರದಲ್ಲಿ ಸೋಮವಾರ ನಡೆದ ಸರಳ ಸಮಾರಂಭದ ಚಿತ್ರಣವಿದು.

ಕಲಾಮಂದಿರದಲ್ಲಿ ಡಾ.ರಾಜ್‌ ನೇತೃತ್ವದಲ್ಲಿ ತಾರಾಮೇಳ ನಡೆಸಿ, ಸಂಗ್ರಹಿಸಿದ 18 ಲಕ್ಷ ರುಪಾಯಿ ಹಾಗೂ ಜಿಲ್ಲಾಡಳಿತ, ನಗರಪಾಲಿಕೆ ಹಾಗೂ ಪೊಲೀಸ್‌ ಇಲಾಖೆ ಸಂಗ್ರಹಿಸಿದ್ದ 10 ಲಕ್ಷ ರುಪಾಯಿಯನ್ನು (ಒಟ್ಟು 28 ಲಕ್ಷ ರುಪಾಯಿ) ಮೃತ ಯೋಧರ ಕುಟುಂಬಗಳಿಗೆ ಡಾ. ರಾಜ್‌ ವಿತರಿಸಿದರು. ವಿಧವೆಯರು ಅಣ್ಣಾವ್ರ ಚರಣಗಳಿಗೆ ನಮಿಸಿ, ಚೆಕ್ಕನ್ನು ಕಣ್ಣಿಗೊತ್ತಿಕೊಂಡರು.

ಕೊಪ್ಪಳ ಜಿಲ್ಲೆಯ ಅಲವಂಟಿ ಗ್ರಾಮದ ಸರೋಜ ಮೇಘಲಾ ಮಠ್‌ ಹಾಗೂ ಕುಷ್ಟಗಿಯ ನಿರ್ಮಲಾ ಕುಲಕರ್ಣಿ ವೇದಿಕೆಗೆ ತಮ್ಮ ಮಕ್ಕಳನ್ನೂ ಕರೆ ತಂದಾಗ ರಾಜ್‌, ಮಕ್ಕಳನ್ನು ತಬ್ಬಿಕೊಂಡರು. ಅವರ ಕಣ್ಣು ತುಂಬಿ ಬಂತು. ಜನರು ಈ ದೃಶ್ಯಕ್ಕೆ ಕರತಾಡನ ಮಾಡಲಿಲ್ಲ. ಬದಲಿಗೆ ಅವರ ಕಣ್ಣುಗಳೂ ಭರ್ತಿಯಾದವು.

ದೇಶಕ್ಕಾಗಿ ತ್ಯಾಗ- ಬಲಿದಾನ ಮಾಡಿದ ಯೋಧರಿಗೆ ನಾಡು ಸಲ್ಲಿಸುತ್ತಿರುವ ಅಲ್ಪ ಕಾಣಿಕೆ ಇದು. ದೇಶಕ್ಕಾಗಿ ಪ್ರಾಣ ತೆತ್ತ ಯೋಧರ ಕುಟುಂಬಗಳ ಕಷ್ಟಕ್ಕೆ ಆಗುವುದು ಎಲ್ಲರ ಕರ್ತವ್ಯ. ಕಾಣದ ದೇವರು ಎಲ್ಲೂ ಇಲ್ಲ. ನಮ್ಮ ಹೃದಯದಲ್ಲೇ ಇದ್ದಾನೆ. ಕೆಟ್ಟದಾದಾಗ ಒಳ್ಳೆಯದರ ಮಹತ್ವ ತಿಳಿದು ಸಾಮರಸ್ಯದಿಂದ ಜೀವನ ನಡೆಸಬೇಕು. ಕಷ್ಟ- ಸುಖ ಎಲ್ಲವನ್ನೂ ಎದುರಿಸಿ ಬದುಕಬೇಕು. ಇದೇ ಜೀವನದ ಸತ್ಯ ಎಂದು ಹೇಳುವಾಗ ವರನಟನ ಹೃದಯ ತುಂಬಿಬಂತು.

ತ್ಯಾಗ ಸ್ಮರ-ಣೆ ಅಗ-ತ್ಯ : ಮೋಜಿನ ಜೀವನ ನಡೆಸೋ ಜನರ ಕಂಡು ಯೋಧ ಬೇಜಾರು ಮಾಡಿಕೊಂಡಲ್ಲಿ ದೇಶದ ರಕ್ಷಣೆ ಸಾಧ್ಯವೇ? ಈ ಬಗ್ಗೆ ಸರ್ಕಾರ ಅಷ್ಟೇ ಅಲ್ಲ, ನಮ್ಮ ಜನರೂ ಚಿಂತಿಸಬೇಕು. ದೇಶಕ್ಕಾಗಿ ಜೀವನವನ್ನೇ ಪಣಕ್ಕಿಟ್ಟ ಯೋಧರ ಕುಟುಂಬದ ಬಗ್ಗೆ ಚಿಂತಿಸಬೇಕು ಎಂದು ಪ್ರಾಥಮಿಕ ಶಿಕ್ಷಣ ಸಚಿವ ಎಚ್‌.ವಿಶ್ವನಾಥ್‌ ಹೇಳಿದರು.

ಕಾರ್ಗಿಲ್‌ ಹುತಾತ್ಮರ ಮಕ್ಕಳಿಗೆ ಶಿಕ್ಷಣ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನೂ ಕೇಂದ್ರ ಹಾಗೂ ರಾಜ್ಯ ಸರ್ಕಾರ ನೀಡಬೇಕು ಎಂದು ಮೇಯರ್‌ ನಾರಾಯಣ ಆಗ್ರಹಿಸಿದರು.

ಕಾರ್ಗಿಲ್‌ ಮುನ್ನಾ ಸಮರಗಳಲ್ಲಿ ಮಡಿದವರ ಕುಟುಂಬದ ಸದಸ್ಯರಿಗೆ ಪಾರ್ವತಮ್ಮ ರಾಜ್‌ಕುಮಾರ್‌, ಸಚಿವ ವಿಶ್ವನಾಥ್‌, ಶಾಸಕರಾದ ಎ.ಎಸ್‌.ಗುರುಸ್ವಾಮಿ ಹಾಗೂ ಎಚ್‌.ಎಸ್‌.ಶಂಕರ ಲಿಂಗೇಗೌಡ ಚೆಕ್‌ ವಿತರಿಸಿದರು.

ಕಾರ್ಯಕ್ರಮದ ಪ್ರಾರಂಭದಲ್ಲಿ ಮೂರು ಬಾರಿ ಗುಂಡು ಹಾರಿಸಿ ಹುತಾತ್ಮರಿಗೆ ಗೌರವ ಸೂಚಿಸಲಾಯಿತು. ನಂತರ ಗಾಯಕಿ ಲೀಲಾವತಿ ಓ ನನ್ನ ದೇಶದ ಬಾಂಧವರೆ (ಏ ಮೇರೆ ವತನ್‌ ಕೆ ಲೋಗೋ ಕನ್ನಡ ಭಾಷಾಂತರ) ದೇಶಭಕ್ತಿ ಗೀತೆ ಹಾಡಿದರು.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X