ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೋಮಾಂಚನಗೊಳಿಸಿದ ಸಾಕು ನಾಯಿಗಳ ನೋಟ - ಆಟ

By Staff
|
Google Oneindia Kannada News

ಬೆಂಗಳೂರು: ನಿಯತ್ತಿನ ಪ್ರಾಣಿ ನಾಯಿಯಲ್ಲೂ ನೂರೆಂಟು ಬಗೆ. ವಿವಿಧ ಆಕಾರ. ಭಾನುವಾರ ನಗರದಲ್ಲಿ ನಾನಾ ತಳಿಗಳ ನಾಯಿಗಳು ಒಂದೆಡೆ ಸೇರಿದ್ದವು. ವಿವಿಧ ಜಾತಿಯ ನಾಯಿಗಳ ನೋಟ - ಆಟವನ್ನು ಕಣ್ಣಾರೆ ಕಂಡು ಪ್ರೇಕ್ಷಕರು ನಿಬ್ಬೆರಗಾದರು.

ನಗರದ ಹೆಬ್ಬಾಳದ ಪಶುವೈದ್ಯ ಕಾಲೇಜ್‌ ಆವರಣದಲ್ಲಿ ಮೈಸೂರು ಕೆನಲ್‌ ಕ್ಲಬ್‌ ಆಯೋಜಿಸಿದ್ದ 74 ಮತ್ತು 75ನೇ ಅಖಿಲ ಭಾರತ ಮುದ್ದು ನಾಯಿಗಳ ಮಾಂತ್ರಿಕ ಪ್ರದರ್ಶನದಲ್ಲಿ ನಾಯಿಗಳ ವಿವಿಧ ಚಾತುರ್ಯ ಕಂಡ ಪ್ರೇಕ್ಷಕರ ರೋಮಾಂಚನ ಹೇಳತೀರದಾಗಿತ್ತು. ಕೊರೆಯುವ ಮಾಗಿಯ ಚಳಿಯಲ್ಲೂ ಮೈ ಜುಮ್ಮೆನ್ನುವಂತಹ ಅಪೂರ್ವ ಕ್ಷಣ.

ತಮ್ಮ ಮಾಲಿಕರೊಂದಿಗೆ ದೂರ ದೂರದ ಊರುಗಳಿಂದ ಬಂದ ನಾಯಿಗಳು, ನಗರದ ನಾಯಿಗಳಿಗೆ ತಾವೇನೂ ಕಮ್ಮಿ ಇಲ್ಲ ಎನ್ನುವಂತೆ ಕಲಿತ ವಿದ್ಯೆಯನ್ನೆಲ್ಲಾ ಪ್ರದರ್ಶಿಸಿದವು. ಚಿರತೆಯಂತೆ ಮೈಯೆಲ್ಲಾ ಚಿತ್ತಾರ ಮೂಡಿಸಿಕೊಂಡ ನಾಯಿ ತನ್ನ ಎತ್ತರದ ನಿಲುವಲ್ಲಿ ನಿಂತಿದ್ದರೆ, ಎಲ್ಲರನ್ನೂ ಆಕರ್ಷಿಸುವ ಶ್ವೇತ ಸುಂದರಿಯಂತೆ ಕುತ್ತಿಗೆಗೆ ಕೆಂಪು ರಿಬ್ಬನ್‌ ತೊಟ್ಟ ಬಿಳಿಯ ಜೂಲು ನಾಯಿ ಮರಿ ತನ್ನ ಪುಟ್ಟ ಬಾಲವನ್ನು ಅಲ್ಲಾಡಿಸುತ್ತಿತ್ತು.

ಮೊಲದ ತದ್ರೂಪಿ ಎನ್ನುವಂತಿದ್ದ ಪುಟ್ಟ ನಾಯಿ ಮರಿ, ಉದ್ದ ಕೂದಲಿನ ಕೆಂಪು ಮೂತಿಯ ನಾಯಿ ತನ್ನ ಮಾಲಿಕನಿಗೆ ಪೇಪರ್‌ ತಂದುಕೊಡುವ, ಎಸೆದ ಬಾಲನ್ನು ಬಾಯಲ್ಲಿ ಕಚ್ಚಿಕೊಂಡು ತನ್ನ ಒಡೆಯನ ಬಳಿಗೆ ಓಡಿ ಬರುವ ಕಾಯಕದಲ್ಲಿ ನಿರತವಾಗಿತ್ತು. ಮುಧೋಳದ ಎತ್ತರದ ಭೇಟಿ ನಾಯಿ, ಪೇಟ ಸುತ್ತಿಕೊಂಡು ಬಂದು ಕುಳಿತಿದ್ದ ಉತ್ತರ ಕರ್ನಾಟಕದ ತನ್ನ ಒಡೆಯನ ಆಣತಿಗೆ ಕಾಯುತ್ತಿತ್ತು.

ಚಿರತೆಯ ತದ್ರೂಪಿಯಂತೆ ತೋರುತ್ತಿದ್ದ ಗ್ರೇಟ್‌ಡೆನ್‌ ಅಲ್‌ಕ್ಯೂನ್‌ ರಿಂಗ್‌ನಲ್ಲಿ ಅತ್ತಿಂದಿತ್ತ, ಇತ್ತಿಂದತ್ತ ಹಾರುತ್ತ ತನ್ನ ಚಾತುರ್ಯ ಪ್ರದರ್ಶನ ತೋರುತ್ತಿತ್ತು. ಒಟ್ಟು ಹದಿನಾಲ್ಕು ವರ್ಗಗಳಲ್ಲಿ ನಡೆದ ಸ್ಪರ್ಧೆಯಲ್ಲಿ ನಲವತ್ತಕ್ಕೂ ಹೆಚ್ಚು ತಳಿಗಳ ಒಟ್ಟು 345 ನಾಯಿಗಳು ಈ ಶ್ವಾನ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದವು.

ಬುಲ್‌ಡಾಗ್‌, ಸ್ಯಾಜೋಯಾರಂ, ಸೆಟ್‌ ಬಾರ್ನಾಡ್‌, ನೆಪೋಲಿಯನ್‌ ಮಾಷಿಸ್‌, ಗ್ರೇಟ್‌ಡೆನ್‌ ಅಲ್‌ಕ್ಯೂನ್‌, ಮೈನರ್‌ ಪಪ್ಪಿಯೇ ಮೊದಲಾದ ಪುಟ್ಟ ನಾಯಿಗಳಿಂದ ಹಿಡಿದು ಆಳೆತ್ತರದ ದೊಡ್ಡ ನಾಯಿಗಳು ಪ್ರೇಕ್ಷಕರ ಮೈ ನವಿರೇಳಿಸಿದವು. ಈ ಮಧ್ಯೆ ನಾಯಿಗಳ ಕೊರಳ ಪಟ್ಟಿ, ಚೈನ್‌ ಹಾಗೂ ಆಕರ್ಷಕ ನಾಯಿಮರಿಗಳ ಮಾರಾಟ ಪ್ರದರ್ಶನದ ಅಂಗಳದ ಅಂಚಿನಲ್ಲಿ ಭರದಿಂದ ಸಾಗಿತ್ತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X