• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪ್ರಧಾನಿ ವಾಜಪೇಯಿ ರಾಜ್ಯಭೇಟಿ, ಗಿಟ್ಟಿದ್ದೇನು ? ಯಾರಿಗೆ ?

By Staff
|

* ಅನಿರುದ್ಧ ರಾಯದುರ್ಗ

ಸತ್ಯಸಾಯಿ ಹೈಟೆಕ್‌ ಧರ್ಮಾಸ್ಪತ್ರೆಯ ಉದ್ಘಾಟನೆಯ ಸಂದರ್ಭದಲ್ಲಿ (ಶುಕ್ರವಾರ) ವಾಜಪೇಯಿ ಭಾವುಕರಾಗಿದ್ದರು. ಆ ಕ್ಷಣದಲ್ಲಿ ಅವರಿಗದು ಆಸ್ಪತ್ರೆಯಾಗಿ ಕಾಣಲಿಲ್ಲ . ಅರಮನೆಯಾಗಿ, ದೇವರ ಮನೆಯಾಗಿ ಕಂಡಿತು. ಇದು ಬರಿ ದವಾಖಾನೆಯಲ್ಲೋ ಅಣ್ಣಾ .. ದೇಗುಲ ಎಂದು ಕವಿಯೂ ಆಗಿರುವ ಪ್ರಧಾನಿ ಬಣ್ಣಿಸಿದರು. ರಾತ್ರಿ 8.30 ರ ಸುಮಾರಿಗೆ ಅವರು ಬೆಂಗಳೂರಿನಲ್ಲಿ ವಿಮಾನ ಹತ್ತಿ ದೆಹಲಿ ಮುಟ್ಟಿದಾಗ ಸಿಲಿಕಾನ್‌ ಸಿಟಿ ಭೇಟಿಯ ಗುಂಗನ್ನು ತುಂಬಿಕೊಂಡೇ ಇದ್ದರು. ಆ ಖುಷಿ ಶನಿವಾರ ಉಳಿಯಲಿಲ್ಲ . ಅದು ರಾಜಕಾರಣಿಯಾಬ್ಬನ ಬದುಕು.

ಗುರುವಾರದ ಉಡುಪಿಯ ಭೇಟಿಯ ಸಂದರ್ಭದಲ್ಲಿ ಪೇಜಾವರ ಮಠಾಧೀಶರೊಂದಿಗೆ ಅಯೋಧ್ಯಾ ಪ್ರಕರಣದ ಬಗ್ಗೆ ಪ್ರಧಾನಿ ಅನೌಪಚಾರಿಕವಾಗಿ ಚರ್ಚಿಸಿದ್ದರಂತೆ. ಪ್ರಧಾನಿ ಏನೆಲ್ಲಾ ಮಾತನಾಡಿರಬಹುದು. ಇಷ್ಟಕ್ಕೂ ಎರಡು ದಿನಗಳ ನಂತರ ಕುಂಭಮೇಳದಲ್ಲಿ ಧರ್ಮ ಸಂಸತ್‌ ಕೈಗೊಳ್ಳುವ ನಿರ್ಣಯದ ಬಗ್ಗೆ ಅವರಿಗೆ ಮುನ್ಸೂಚನೆ ಇತ್ತೇ ? ಇಲ್ಲವೆನ್ನುವುದು ಕಷ್ಟ . ವಿಶ್ವ ಹಿಂದೂ ಪರಿಷತ್‌ ವಾಜಪೇಯಿ ಬಗೆಗೆ ವಿಶ್ವಾಸ ಕಳೆದುಕೊಂಡಿರುವುದು ಈಗ ರಹಸ್ಯವೇನಲ್ಲ . ಇಂಥಾ ಸಂದರ್ಭದಲ್ಲಿ ವಿಹೆಚ್‌ಪಿ ಪ್ರೇರಿತ ಸಾಧುಗಳ ಸಭೆ ಪ್ರಧಾನಿಗೆ ಮುಜುಗರ ಉಂಟು ಮಾಡದಿರುವ ನಿರ್ಣಯ ಕೈಗೊಳ್ಳುತ್ತದೆಂದು ಯಾರೂ ನಿರೀಕ್ಷಿಸಿರಲಾರರು. ಅದು ಹಾಗೇ ಆಗಿದೆ.

ಕಾನೂನು ಉಲ್ಲಂಘನೆ ? : ಧರ್ಮ ಸಂಸತ್‌ ಗೊತ್ತು ಪಡಿಸಿರುವ ಮಾರ್ಚ್‌ 12, 2002 ರ ಗಡುವಿಗೆ ನಿರೀಕ್ಷೆಯಂತೆಯೇ ಮುಸಲ್ಮಾನ ಸಂಘಟನೆಗಳಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಬಾಬ್ರಿ ಮಸೀದಿ ಕ್ರಿಯಾ ಸಮಿತಿ ಅಧ್ಯಕ್ಷರಂತೂ, ಗಡುವು ಇನ್ನೂ ದೂರವಿದೆ. ಆ ಹೊತ್ತಿಗೆ ಮಂದಿರ ನಿರ್ಮಾಣ ತಡೆಯಲು ಮುಸ್ಲಿಂ ಬಾಂಧವರು ಅಯೋಧ್ಯೆ ಮುಟ್ಟಬಹುದು ಎನ್ನುವರ್ಥದ ಮಾತುಗಳಾಡಿದ್ದಾರೆ. ಅಲ್ಲಿಗೆ ಮತ್ತೊಮ್ಮೆ ಕಾನೂನು ಭಂಗ, ಹಿಂಸಾಚಾರಕ್ಕೆ ಇಬ್ಬಣಗಳೂ ಹೇಸುತ್ತಿಲ್ಲವೆನಿಸುತ್ತೆ.

ಇಷ್ಟೆಲ್ಲಾ ನಡೆದರೂ ಪ್ರಧಾನಿ ತಮ್ಮ ಮೌನ ಮುರಿದಿಲ್ಲ . ಅವರದ್ದು ಅರ್ಥಪೂರ್ಣ ಮೌನ. ವಾಜಪೇಯಿ ಏನಾದರೂ ವಿವಾದಾಸ್ಪದವಾದ್ದು ಹೇಳಿಯಾರೆ ಎಂದು ವಿರೋಧ ಪಕ್ಷಗಳು ಮೈಯ್ಯೆಲ್ಲಾ ಕಿವಿಯಾಗಿವೆ. ಇದು ವಾಜಪೇಯಿಗೂ ಗೊತ್ತು . ಆದರೆ, ಅವರು ತಮ್ಮ ಮಾತನ್ನು ಪಕ್ಷದ ಅಧ್ಯಕ್ಷರಿಂದ ಆಡಿಸಿದ್ದಾರೆ. ವಿಹೆಚ್‌ಪಿ ಬೆದರಿಕೆಗೆ ಮಣಿಯುವುದು ಸಾಧ್ಯವಿಲ್ಲ ಎಂದು ಬಿಜೆಪಿಯ ರಾಷ್ಟ್ರಾಧ್ಯಕ್ಷ ಬಂಗಾರು ಲಕ್ಷ್ಮಣ್‌ ಹೇಳಿದ್ದಾರೆ. ಆದರದು ಸರ್ಕಾರದ ಪ್ರತಿಕ್ರಿಯೆಯಲ್ಲ ಅನ್ನುವುದು ಗಮನಾರ್ಹ.

ಒಟ್ಟಿನಲ್ಲಿ ಪ್ರಧಾನಿ ಈಗ ಬಿಕ್ಕಟ್ಟಿನಲ್ಲಿದ್ದಾರೆ. ಅವರ ಕುರ್ಚಿ ಮತ್ತೊಮ್ಮೆ ಆತಂಕ ಎದುರಿಸುತ್ತಿದೆ. ಧರ್ಮ ಸಂಸತ್‌ ವಿಧಿಸಿರುವ ಗಡುವಿಗೆ ಇನ್ನೂ ವರ್ಷವಿದೆಯಾದರೂ, ಅದರ ಪರಿಣಾಮಗಳು ಇಂದಿನಿಂದಲೇ ಪ್ರಾರಂಭವಾಗುತ್ತವೆ. ವಾಜಪೇಯಿ ಈಗೇನು ಮಾಡುತ್ತಾರೆ. ನೋಡಬೇಕು, ಅನುಭವಿ ರಾಜಕಾರಣಿಯ ದಾಳಗಳನ್ನು.

ರಾಜ್ಯಭೇಟಿ, ಗಿಟ್ಟಿದ್ದೇನು ? : ಎರಡು ದಿನಗಳ ಅಟಲ್‌ ಕರ್ನಾಟಕ ಭೇಟಿ ಮಾಧ್ಯಮಗಳಲ್ಲಿ ಭಾರೀ ಪ್ರಚಾರ ಪಡೆಯಿತು. ಈ ಸಂದರ್ಭದಲ್ಲಿ ಪ್ರಧಾನಿ ಹಲವು ಉದ್ಘಾಟನೆ, ಶಂಕುಸ್ಥಾಪನೆಗಳ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡರು. ಬೆಂಗಳೂರು ಭಾರತದ ಹೆಮ್ಮೆಯ ನಗರಿ, ಇನ್ಫೋಸಿಸ್‌ ಬೆಂಗಳೂರಿನ ತಾಜಮಹಲ್‌ ಎಂದು ಬಣ್ಣಿಸಿದರು. ಇನ್ಫೋಸಿಸ್‌ನಲ್ಲಿ ಒಂದು ಪದ್ಯವನ್ನೂ ಹೇಳಿದರು. ದೇವನಹಳ್ಳಿಯಲ್ಲಿ ನಿರ್ಮಾಣವಾಗುವ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿಧಾನಸೌಧದಲ್ಲಿಯೇ ರಿಮೋಟ್‌ ಒತ್ತುವ ಮೂಲಕ ಶಂಕುಸ್ಥಾಪನೆ ನೇರವೇರಿಸಿದರು (ಅದು ಸಾಂಕೇತಿಕವಂತೆ). ಇದೆಲ್ಲಾ ಒಂಥರಾ ಪಿಕ್ನಿಕ್‌ನಂತಿತ್ತು .

ಎರಡೇ ವಾರಗಳ ಹಿಂದೆ ಕೇರಳದಲ್ಲಿ ಮೋಜಿಗೆ ಬಂದಿದ್ದ ಪ್ರಧಾನಿ ಈ ಬಾರಿ ಕರ್ನಾಟಕಕ್ಕೆ ಪಿಕ್ನಿಕ್‌ಗೆ ಬಂದರೆ? ಹಾಗನ್ನುವುದು ತಪ್ಪಾದೀತು. ರಾಜ್ಯಭೇಟಿಯ ಸಂದರ್ಭದಲ್ಲಿ ವಾಜಪೇಯಿ ಅನೇಕ ಗಮನಾರ್ಹ ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ. ಅಂತರರಾಷ್ಟ್ರೀಯ ಸಂಬಂಧಗಳ ಬಗ್ಗೆ ಮಾತನಾಡಿದ್ದಾರೆ. ಇದೆಲ್ಲಾ ಸರಿಯೇ. ಆದರೆ, ಕರ್ನಾಟಕಕ್ಕೇನು ಲಾಭ?

ಮತ್ತಷ್ಟು ಯೋಜನೆಗಳು, ಆಶ್ವಾಸನೆಗಳು : ಕೃಷ್ಣಾ ನದಿ ವಿವಾದವನ್ನು ಬಗೆಹರಿಸುವ ಜವಾಬ್ದಾರಿ ಕೇಂದ್ರಕ್ಕೇ ಸೇರಿದ್ದೆಂದು ಪ್ರಧಾನಿ ಬೆಂಗಳೂರಿನಲ್ಲಿ ಹೇಳಿದರು. ಈ ಬಗ್ಗೆ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಪ್ರಧಾನಿಗೆ ಪತ್ರವನ್ನೂ ಬರೆದಿದ್ದರು ಅನ್ನುವುದಿಲ್ಲಿ ಗಮನಾರ್ಹ. ಕೇಂದ್ರ ಸರ್ಕಾರಕ್ಕೆ ಕೊನೆಗಾದರೂ ಕೃಷ್ಣೆಯ ನೆನಪಾಗಿದೆ. ಈ ಹೇಳಿಕೆಗಾಗಿ ಪ್ರಧಾನಿ ಬೆಂಗಳೂರಿಗೆ ಬರಬೇಕಿತ್ತೆ?

ಕುಂಬಳಗೋಡಿನಲ್ಲಿ ಅಂತರರಾಷ್ಟ್ರೀಯ ವಸತಿಶಾಲೆ ಉದ್ಘಾಟನೆ ಸಂದರ್ಭದಲ್ಲಿ ಪ್ರಧಾನಿ ಅನೇಕ ಯೋಜನೆಗಳನ್ನು ಪ್ರಕಟಿಸಿದರು. ಅವುಗಳಲ್ಲಿ ತಮ್ಮ ಹುಟ್ಟುಹಬ್ಬದ ಸಂದರ್ಭದಲ್ಲಿ ಪ್ರಕಟಿಸಿದ್ದ ಅನೇಕ ಯೋಜನೆಗಳ ಪುನರಾವರ್ತನೆಯೂ ಇತ್ತು . ಇನ್ನುಳಿದಂತೆ ಯಾವ ಯೋಜನೆ ಯಾವಾಗ ಕಾರ್ಯಗತವಾಗುತ್ತದೆನ್ನುವ ಕಿಂಚಿತ್ತೂ ಸುಳಿವೂ ಎಲ್ಲೂ ಕಾಣಲಿಲ್ಲ .

ಪ್ರಧಾನಿಯವರ ಘೋಷಣೆಗಳು ಶುದ್ಧ ಸಮಯಸ್ಫೂರ್ತಿಯಿಂದ ಕೂಡಿದ್ದವು. ಸಮಾರಂಭದಲ್ಲಿ - ಯಾರೋ ರೈತ, ಬಡವರಿಗೆ ಕಮ್ಮಿ ಬೆಲೆಯಲ್ಲಿ ದವಸ ಕೊಡಿ ಎಂದು ಕೂಗಿದ್ದಕ್ಕೆ ಪ್ರತಿಯಾಗಿ 3 ರುಪಾಯಿಗೆ ಅಕ್ಕಿ, 2 ರು.ಗೆ ಗೋಧಿ ನೀಡುವುದಾಗಿ ಪ್ರಧಾನಿ ಪ್ರಕಟಿಸಿದರು. ರಾಜ್ಯದಲ್ಲಿ ಕೃಷ್ಯುತ್ಪನ್ನಗಳ ಬೆಲೆ ಕುಸಿತ, ರೈತರ ಪ್ರತಿಭಟನೆಯ ವಿಷಯವೂ ಪ್ರಧಾನಿಗೆ ಗೊತ್ತು . ಆದ್ದರಿಂದಲೇ ಅವರು, ದೇಶದ ವಿವಿಧ ಭಾಗಗಳಲ್ಲಿ ಉಗ್ರಾಣಗಳನ್ನು ಸ್ಥಾಪಿಸಲಾಗುವುದು, ಕೃಷ್ಯುತ್ಪನ್ನಗಳಿಗೆ ಸೂಕ್ತ ಬೆಲೆ ಸಿಗುವಂತೆ ಕ್ರಮ ಕೈಗೊಳ್ಳಲಾಗುವುದು ಎಂದರು. ಮಾಧ್ಯಮಗಳು ಪ್ರಧಾನಿ ಉಸುರಿದ ಪ್ರತಿ ಅಕ್ಷರವನ್ನೂ ಅಚ್ಚುಕಟ್ಟಾಗಿ ಮುದ್ರಿಸಿ ತಮ್ಮ ಕರ್ತವ್ಯಪರತೆ ಮೆರೆದವು. ಅದನ್ನು ರೈತನೂ ಓದಿಕೊಂಡು, ಓದಿಸಿಕೊಂಡು ಖುಷಿ ಪಟ್ಟು ಕೊಂಡ. ಆನಂತರ ಮುಂದೇನು? ವಾಜಪೇಯಿಗೀಗ ಸಮಯವಿಲ್ಲವಾದ್ದರಿಂದ ಈ ಅರ್ಥಹೀನ ಪ್ರಶ್ನೆಯನ್ನು ನೀವು ಕೇಳುವಂತಿಲ್ಲ .

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more