Get Updates
Get notified of breaking news, exclusive insights, and must-see stories!

ನಿಲ್ಲದ ಪೈಪ್‌ಲೈನ್‌ ಕಾಮಗಾರಿ 5 ಸಾವಿರ ಮರಗಳ ಬಲಿ

* ರಾಜು ಮಹತಿ

ಬೆಳ್ತಂಗಡಿ : ಪೇಜಾವರ ಮಠಾಧೀಶ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ, ಎಂಆರ್‌ಪಿಎಲ್‌ನ ಪೈಪ್‌ಲೈನ್‌ ಅಳವಡಿಕೆಯ ಕಾಮಗಾರಿಯನ್ನು ತಕ್ಷಣದಿಂದಲೇ ಸ್ಥಗಿತಗೊಳಿಸುವಂತೆ ಮೊನ್ನಿನ ಉಡುಪಿ ಭೇಟಿಯ ಸಂದರ್ಭದಲ್ಲಿ ಪ್ರಧಾನಿಗಳನ್ನು ಒತ್ತಾಯಿಸಿದ್ದರು. ಈ ಯೋಜನೆಗೆ ವಿರೋಧ ಮುಂಚಿನಿಂದ ಇತ್ತಾದರೂ, ಅದು ಲೋಕದ ಗಮನ ಸೆಳೆದದ್ದು ಸ್ವಾಮೀಜಿ ಅವರು ತಮ್ಮ ಪ್ರತಿಭಟನೆಯನ್ನು ವಾಜಪೇಯಿ ಅವರಲ್ಲಿ ತೋಡಿಕೊಂಡಾಗಲೇ. ಆದರೆ, ಈ ಯೋಜನೆಯಿಂದ ಏನೆಲ್ಲಾ ಅನಾಹುತ ಸಂಭವಿಸುತ್ತದೆ ಅನ್ನುವ ವಿವರಗಳು ಹೆಚ್ಚಿನ ಜನಕ್ಕೆ ಗೊತ್ತಿಲ್ಲ . ಈ ಬಗೆಗಿನ ವಿವರಗಳು ಇಲ್ಲಿವೆ.

ಎಂಆರ್‌ಪಿಎಲ್‌ನಿಂದ ಬೆಂಗಳೂರಿಗೆ ತೈಲೋತ್ಪನ್ನಗಳನ್ನು ಸಾಗಿಸಲು ಪೆಟ್ರೋಲ್‌ನ ಕೊಳವೆ ಮಾರ್ಗ ಕಾಮಗಾರಿ ಪಶ್ಚಿಮ ಘಟ್ಟಗಳಲ್ಲಿ ಪರಿಸರವಾದಿಗಳ ವಿರೋಧದ ನಡುವೆಯೂ ಬಿರುಸಿನಿಂದ ನಡೆಯುತ್ತಿದೆ.

ಇದಕ್ಕಾಗಿ ಬೆಳ್ತಂಗಡಿ ತಾಲ್ಲೂಕಿನ ನೆರಿಯ ಗ್ರಾಮದ ಒಟ್ಟು 5000 ಮರಗಳನ್ನು ಉರುಳಿಸಲು ಗುರುತು ಹಾಕಲಾಗಿದೆ.

ಕೆಲವನ್ನು ಬುಲ್ಡೋಜರ್‌ಗಳು ಈಗಾಗಲೇ ಉರುಳಿಸಿವೆ. ಇದರಲ್ಲಿ 2,500 ಮರಗಳು ರಕ್ಷಿತಾರಣ್ಯ ಪ್ರದೇಶದಲ್ಲಿವೆ.

ಪೈಪ್‌ಲೈನ್‌ಗೆ ಭೂಸ್ವಾಧೀನ ಪ್ರಕ್ರಿಯೆ ಆರಂಭಗೊಳ್ಳುತ್ತಿದ್ದಂತೆಯೇ ಉಜಿರೆ ಬಳಿ ಲಾರಿಗಟ್ಟಲೆ ಪೈಪುಗಳು ಆರು ಎಕರೆ ಪ್ರದೇಶದಲ್ಲಿ ಜಮಾವಣೆಯಾಗತೊಡಗಿದ್ದವು. ಈಗ ಅವುಗಳನ್ನು ಪಶ್ಚಿಮ ಘಟ್ಟಗಳ ಎದೆ ಸೀಳಿ ದುರ್ಗಮ ಪ್ರದೇಶಕ್ಕೆ ಒಯ್ಯಲಾಗುತ್ತಿದೆ. ಬೃಹತ್‌ ವಾಹನಗಳು ಸಾಗಲು ಅನುಕೂಲವಾಗುವಂತೆ 100 ಅಡಿಯಷ್ಟು ಕಚ್ಚಾ ರಸ್ತೆಯನ್ನು ನಿಯಮ ಬಾಹಿರವಾಗಿ ನಿರ್ಮಿಸಲಾಗುತ್ತಿದೆ. ಅಪರೂಪದ ಬಿದಿರುಗಳನ್ನು ಯದ್ವಾ ತದ್ವಾ ಉರುಳಿಸಲಾಗಿದೆ. ಬುಲ್ಡೋಜರ್‌ಗಳು ಪೈಪ್‌ಗಾಗಿ ಗುಂಡಿ ತೋಡುವ ಕೆಲಸವನ್ನು ಆರಂಭಿಸಿವೆ. ಪ್ರತಿಭಟನೆಯನ್ನು ತಡೆಯಲು ಪೊಲೀಸ್‌ ನೆರವು ಪಡೆಯಲಾಗಿದೆ.

ಕಾಡು ಕಡಿಯುವುದು ನಿಲ್ಲಿಸಿ : ಅರಣ್ಯ ನಾಶ ನಿಲ್ಲಿಸಬೇಕು ಎಂದು ಒತ್ತಾಯಿಸಿ ಬೆಳ್ತಂಗಡಿ ತಾಲ್ಲೂಕು ಪರಿಸರ ಜಾಗೃತಿ ಒಕ್ಕೂಟ ಎಚ್‌ಪಿಸಿಎಲ್‌ ಪೈಪ್‌ ಲೈನ್‌ ವಿರೋಧಿ ಸಮಿತಿ, ದ.ಕ. ಪರಿಸರಾಸಕ್ತ ಕೃಷಿಕರ ವೇದಿಕೆ, ಬೆಳ್ತಂಗಡಿ ತಾಲ್ಲೂಕು ಮಹಿಳಾ ಜಾಗೃತಿ ವೇದಿಕೆ, ನಾಗರಿಕ ಸೇವಾ ಟ್ರಸ್ಟ್‌, ದಲಿತ ಅಬಿವೃದ್ಧಿ ಸಮಿತಿಯ ಸಹಭಾಗಿತ್ವದಲ್ಲಿ , ಕಾಮಗಾರಿ ನಡೆಯುವ ಪ್ರದೇಶದಲ್ಲಿ ಪ್ರತಿಭಟನಾ ಧರಣಿ ನಡೆಸಲಾಗಿದೆ. ಸೋಮನಾಥ್‌ ನಾಯಕ್‌, ಶಂಪಾ ದೈತೋಟ, ಲಕ್ಷೀಶ ತೋಳ್ಪಾಡಿ, ಇಸುಬು ಬ್ಯಾರಿ ಮತ್ತಿತರ ಪರಿಸರವಾದಿಗಳು ಪೈಪ್‌ಲೈನ್‌ ಕಾಮಗಾರಿ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

ಇಷ್ಟೆಲ್ಲಾ ನಡೆಯುತ್ತಿದ್ದಾಗಲೂ ಅರಣ್ಯ ನಾಶ ಮುಂದುವರೆದಿದೆ. ಬೃಹತ್‌ ಗಾತ್ರದ ಪೈಪ್‌ಗಳನ್ನು ಕ್ಯಾಟರ್‌ ಪಿಲ್ಲರ್‌ ಯಂತ್ರಗಳು ಏರಿಸಿ ಇಳಿಸುತ್ತಿವೆ. ಅಡ್ಡ ಬಂದ ಗುಡ್ಡಗಳನ್ನು ಕಡಿದು ಹಾಕಲಾಗುತ್ತಿದೆ. ಕಾಮಗಾರಿಯ ಗುತ್ತಿಗೆ ಹಿಡಿದವರು ಬೆಳ್ತಂಗಡಿಯ ನೆರಿಯ ಗ್ರಾಮದಲ್ಲಿ ಸುಸಜ್ಜಿತ ಕಟ್ಟಡ ಸಂಕೀರ್ಣ ನಿರ್ಮಿಸುತ್ತಿದ್ದಾರೆ.

ಈ ಪೈಪ್‌ಲೈನ್‌ ಕಾಮಗಾರಿಗಾಗಿ ಮೊದಲು ವಿರೋಧ ವ್ಯಕ್ತಪಡಿಸುತ್ತಿದ್ದ ರಾಜಕೀಯ ಮುಖಂಡರು ಈಗ ತುಟಿ ಬಿಚ್ಚುತ್ತಿಲ್ಲ. ಈ ಪೈಪ್‌ಲೈನ್‌ ದಕ್ಷಿಣ ಕನ್ನಡ, ಚಿಕ್ಕಮಗಳೂರು, ಹಾಸನ, ತುಮಕೂರು, ಮಂಡ್ಯ, ಬೆಂಗಳೂರು ನಗರ ಮತ್ತು ಗ್ರಾಮಾಂತರ ಹೀಗೆ 7 ಜಲ್ಲೆಗಳ 17 ತಾಲ್ಲೂಕುಗಳ 243 ಹಳ್ಳಿಗಳಲ್ಲಿ ಹಾದು ಹೋಗುತ್ತದೆ. 18 ಮೀಟರ್‌ ಅಗಲದ ಹಾದಿಯಲ್ಲಿ ಒಂದು ಮೀಟರ್‌ ಆಳದಲ್ಲಿ ಎರಡು ಅಡಿ ವ್ಯಾಸದ ಪೈಪ್‌ಗಳನ್ನು ಹುಗಿಯಲಾಗುತ್ತದೆ. ಈ ಪ್ರಸ್ತಾವಿತ ಕೊಳವೆ ಮಾರ್ಗದ ಉದ್ದ 376 ಕಿ.ಮೀ. ಇದಕ್ಕೆ ಭಾರತ ಸರಕಾರ ಅಪ್ಪಣೆ ಕೊಡಿಸಿದ ಅಧಿಸೂಚನೆ ಕಳೆದ ಜೂನ್‌ 16ರಂದು ಪ್ರಕಟವಾಗಿದೆ. ಮಂಗಳೂರು, ಬಂಟ್ವಾಳ, ಬೆಳ್ತಂಗಡಿ ತಾಲ್ಲೂಕುಗಳ 23 ಗ್ರಾ ಮ ಪಂಚಾಯತ್‌ಗಳು ಪೈಪ್‌ಲೈನ್‌ ವಿರೋಧಿಸಿ ನಿರ್ಣಯ ಕೈಗೊಂಡಿವೆ. ಇದನ್ನು ಸರಕಾರ ಲೆಕ್ಕಕ್ಕೆ ತೆಗೆದುಕೊಂಡಿಲ್ಲ ಎನ್ನುವುದಕ್ಕೆ ಮುಂದುವರೆಯುತ್ತಿರುವ ಕಾಮಗಾರಿಯೇ ಸಾಕ್ಷಿ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+