ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರದಿಂದಲೇ ಕೃಷ್ಣಾ ನದಿ ಸಮಸ್ಯೆಗೆ ಪರಿಹಾರ- ಬೆಂಗಳೂರಲ್ಲಿ ಪ್ರಧಾನಿ

By Staff
|
Google Oneindia Kannada News

ಬೆಂಗಳೂರು : ಇದೀಗ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಭಾರತದ ಸಿಲಿಕಾನ್‌ ವ್ಯಾಲಿಯಲ್ಲಿದ್ದಾರೆ. ಉಡುಪಿಯಲ್ಲಿ ರಾಜಾಂಗಣ ಉದ್ಘಾಟನೆ ನೆರವೇರಿಸಿ, ಕೃಷ್ಣ ದರ್ಶನ ಪಡೆದು ಶುಕ್ರವಾರ ಬೆಳಿಗ್ಗೆ ಮಂಗಳೂರಿನಲ್ಲಿ ಬೆಂಗಳೂರು ವಿಮಾನ ಹತ್ತಿದ ಪ್ರಧಾನಿ ಶುರು ಮಧ್ಯಾಹ್ನದ ಬಿಸಿಲು ಹೊತ್ತಿಗೆ ಬೆಂಗಳೂರು ಮುಟ್ಟಿದರು.

ವಿಮಾನ ಇಳಿದ ತಕ್ಷಣ ಮುತ್ತಿಕೊಂಡ ಪತ್ರಕರ್ತರ ಯಾವುದೇ ಪ್ರಶ್ನೆಗಳಿಗೆ ಪ್ರಧಾನಿ ಉತ್ತರಿಸುವ ಮೂಡಿನಲ್ಲಿರಲಿಲ್ಲ . ಕೃಷ್ಣಾ ನದಿ ಸಮಸ್ಯೆಯನ್ನು ಕೇಂದ್ರಸರ್ಕಾರವೇ ಬಗೆಹರಿಸುತ್ತದೆ ಎಂದ ಅವರು, ಧರ್ಮ ಸಂಸತ್ತಿನ ಬಗ್ಗೆ ಇಲ್ಲಿ ಏನನ್ನೂ ಹೇಳಲಾರೆ ಎಂದರು. ಉಳಿದಂತೆ ಯಾವುದೇ ಪ್ರಶ್ನೆಗಳಿಗೆ ಉತ್ತರಿಸದೆ- ದಿನಪೂರ್ತಿ ಬೆಂಗಳೂರಿನಲ್ಲಿಯೇ ಇರುತ್ತೇನೆ. ಮಾತನಾಡಲು ಅನೇಕ ಅವಕಾಶಗಳಿವೆ. ಆಗ ಎಲ್ಲವನ್ನೂ ಹೇಳುತ್ತೇನೆ ಎಂದು ಒಂದಾನೊಂದು ಕಾಲದಲ್ಲಿ ಪತ್ರಕರ್ತರೂ ಆಗಿದ್ದ ಪ್ರಧಾನಿ ಸುದ್ದಿಗಾರರನ್ನು ಸಾಗಹಾಕಿದರು.

ಶುಕ್ರವಾರದ ಪ್ರಧಾನಿಗಳ ಕಾರ್ಯಕ್ರಮದಲ್ಲಿ - ಕುಂಬಳಗೋಡಿನಲ್ಲಿ ಆದಿ ಚುಂಚನಗಿರಿ ಸಂಸ್ಥಾನ ನಿರ್ಮಿಸಿರುವ ಅಂತರರಾಷ್ಟ್ರೀಯ ವಸತಿ ಶಾಲೆಯ ಉದ್ಘಾಟನೆ, ಸಿಲಕಾನ್‌ ವ್ಯಾಲಿಯ ಗುಮ್ಮಟ ಇನ್ಫೋಸಿಸ್‌ ಭೇಟಿ, ವೈಟ್‌ಫೀಲ್ಡ್‌ನಲ್ಲಿ ನಿರ್ಮಿಸಲಾಗಿರುವ ಸತ್ಯಸಾಯಿ ಉನ್ನತ ವೈದ್ಯಕೀಯ ವಿಜ್ಞಾನಗಳ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗೆ ಚಾಲನೆ ಹಾಗೂ ಕೊನೆಯದಾಗಿ ಸಂಜೆ 05.05 ಕ್ಕೆ ವಿಧಾನಸೌಧದಲ್ಲಿ ರಿಮೋಟ್‌ ಒತ್ತುವ ಮೂಲಕ ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಕಾಮಗಾರಿಗೆ ಸಾಂಕೇತಿಕ ಹಸಿರು ನಿಶಾನೆ ಸೇರಿವೆ.

ವಿಧಾನಸೌಧದಲ್ಲಿನ ಎಲ್ಲಾ ಕಚೇರಿಗಳಿಗೆ ರಜೆ : ಪ್ರಧಾನಿಗಳು ವಿಧಾನಸೌಧಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ ವಿಧಾನಸೌಧದಲ್ಲಿನ ಅಂಚೆ, ಬ್ಯಾಂಕ್‌ ಸೇರಿದಂತೆ ಎಲ್ಲಾ ಕಚೇರಿಗಳನ್ನು ಶುಕ್ರವಾರದ ಮಟ್ಟಿಗೆ ಮುಚ್ಚಲಾಗಿದೆ. ಸೌಧಕ್ಕೆ ಬಿಗಿ ಬಂದೋಬಸ್ತ್‌ ಒದಗಿಸಲಾಗಿದ್ದು , ಸುತ್ತಮುತ್ತಲಿನ ರಸ್ತೆಗಳಲ್ಲಿ ಸಂಚಾರಕ್ಕೆ ಬದಲಿ ಮಾರ್ಗಗಳನ್ನು ಕಲ್ಪಿಸಲಾಗಿದೆ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X