ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದಲ್ಲಿ ವಾಜಪೇಯಿ

By Staff
|
Google Oneindia Kannada News

(ಇನ್ಫೋ ವರದಿ)

ಬೆಂಗಳೂರು : ವಿಶ್ರಾಂತಿಗಾಗಿ ಕಳೆದ ತಿಂಗಳು ಕೇರಳಕ್ಕೆ ಆಗಮಿಸಿದ್ದ ಪ್ರಧಾನಿ ವಾಜಪೇಯಿ, ಈ ಬಾರಿ ಹಲವು ಕಾಮಗಾರಿಗಳಿಗೆ ಚಾಲನೆ ನೀಡುವ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಆಗಮಿಸುವರು.

ಪ್ರಧಾನಿಗಳ ಮೂರು ದಿನಗಳ ಕರ್ನಾಟಕ ಪ್ರವಾಸದಲ್ಲಿ - ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಶಂಕು ಸ್ಥಾಪನೆ, ವೈಟ್‌ ಫೀಲ್ಡ್‌ನ ಹೈಟೆಕ್‌ ಆಸ್ಪತ್ರೆಗೆ ಚಾಲನೆ, ಕುಂಬಳಗೋಡಿನ ವಿದ್ಯಾಸೌಧ ಹಾಗೂ ಉಡುಪಿಯ ರಾಜಾಂಗಣ ಸಭಾ ಗೃಹದ ಉದ್ಘಾಟನೆ ಸೇರಿದೆ.

ಜನವರಿ 18 : ಮಂಗಳೂರಿಗೆ ಹೆಲಿಕಾಫ್ಟರ್‌ನಲ್ಲಿ ಆಗಮಿಸುವ ಪ್ರಧಾನಿ, ಉಡುಪಿ ರಾಜಾಂಗಣ ಸಭಾಗೃಹವನ್ನು ಉದ್ಘಾಟಿಸುವರು. ಒಂದು ಕೋಟಿ ರೂಪಾಯಿ ವೆಚ್ಚದ, 3000 ಮಂದಿ ಕುಳಿತುಕೊಳ್ಳಲು ಯೋಗ್ಯವಾಗಿರುವ ರಾಜಾಂಗಣಾ ಸಭಾಗೃಹವನ್ನು ಪರ್ಯಾಯ ಮಠಾಧೀಶರ ಸಭೆ ಮತ್ತು ಪರ್ಯಾಯ ಪೀಠಾರೋಹಣ ನಡೆಯಲು ಅನುಕೂಲವಾಗುವಂತೆ ನಿರ್ಮಿಸಲಾಗಿದೆ. ಕಟ್ಟಡದ ಛಾವಣಿಗೆ ಆಸ್ಟ್ರೇಲಿಯಾದಿಂದ ಆಮದು ಮಾಡಿಕೊಂಡಿರುವ ಸಾಲ್ಟ್‌ ವೆದರ್‌ ಪ್ರೂಫ್‌ ಷೀಟ್‌ ಹೊದಿಸಲಾಗಿದೆ. ದೇವಸ್ಥಾನದ ಪಕ್ಕ ಐದು ಎಕರೆ ಜಾಗ ಖರೀದಿಸಲಾಗಿದ್ದು, ವಿಶಾಲವಾದ ರಸ್ತೆ, ಕಾರು ನಿಲುಗಡೆ ತಾಣ, ಚೌಲ್ಟ್ರೀ ಮತ್ತು ಉದ್ಯಾನವನ ಕೂಡ ಸದ್ಯದಲ್ಲೇ ತಲೆಯೆತ್ತುತ್ತವೆ. ಪ್ರಧಾನಿ ಆ ರಾತ್ರಿಯನ್ನು ಉಡುಪಿ ದೇವಸ್ಥಾನದಲ್ಲಿ ಕಳೆಯುತ್ತಾರೆ.

ಜನವರಿ 19 : ಬೆಂಗಳೂರಿಗೆ ಆಗಮಿಸುವ ಪ್ರಧಾನಿ, ಆದಿಚುಂಚನಗಿರಿ ಮಠ 25 ಲಕ್ಷ ರೂಪಾಯಿ ವೆಚ್ಚದಲ್ಲಿ ಕುಂಬಳಗೋಡಿನಲ್ಲಿ ನಿರ್ಮಿಸಿರುವ ವಿದ್ಯಾಸೌಧವನ್ನು ಉದ್ಘಾಟಿಸುವರು. ಕುಂಬಳಗೋಡಿನ ಸಮಾರಂಭ ಮುಗಿಸಿಕೊಂಡು ಐಟಿ ಸೌಧ ಇನ್ಫೋಸಿಸ್‌ ಕಚೇರಿಗೆ ಭೇಟಿ ನೀಡಿ, ಐಟಿ ದಿಗ್ಗಜ ನಾರಾಯಣ ಮೂರ್ತಿಯಾಂದಿಗೆ ಸಂಭಾಷಿಸುತ್ತಾರೆ. ಅಂದು ಸಂಜೆ ನಗರದ ಹೊರವಲಯದಲ್ಲಿ ಸತ್ಯ ಸಾಯಿ ಸುಪರ್‌ ಸ್ಪೆಷಾಲಿಟಿ ಹೈಟೆಕ್‌ ಆಸ್ಪತ್ರೆಯ ಶುಭಾರಂಭ ಪ್ರಧಾನಿಗಳ ಅಮೃತಹಸ್ತದಿಂದ.

ಜನವರಿ 20 : ಕರ್ನಾಟಕದ ಬಹುದಿನಗಳ ಕನಸು, ದೇವನಹಳ್ಳಿ ವಿಮಾನ ನಿಲ್ದಾಣ ಕೆಲಸವನ್ನು ಅಟಲ್‌ ಬಿಹಾರಿ ವಾಜಪೇಯಿ ಜನವರಿ 20ರಂದು ಸಾಂಕೇತಿಕವಾಗಿ ಆರಂಭಿಸುವರು. ಒಂದು ಸಾವಿರ ಕೋಟಿ ರೂಪಾಯಿ ವೆಚ್ಚದ ವಿಮಾನ ನಿಲ್ದಾಣ ನಿರ್ಮಾಣದ ಹೊಣೆಯನ್ನು ಇನ್ಫೋಸಿಸ್‌ನ ನಾರಾಯಣಮೂರ್ತಿಯವರ ಅಧ್ಯಕ್ಷತೆಯಲ್ಲಿ ರಚಿಸಲಾಗಿರುವ ನೂತನ ಕಂಪೆನಿ ಹೊತ್ತಿದೆ. ನಿಲ್ದಾಣ ಕಾಮಗಾರಿಯ ಶೇ 74ರಷ್ಟು ಬಂಡವಾಳವನ್ನು ಖಾಸಗಿ ಕಂಪೆನಿಗಳು ಹೊಂದಿವೆ. ವಿಮಾನ ನಿಲ್ದಾಣ ಪ್ರಾಧಿಕಾರ ಮತ್ತು ಸರಕಾರ ತಲಾ ಶೇಕಡಾ 13ರಷ್ಟು ಬಂಡವಾಳವನ್ನು ಒದಗಿಸುತ್ತವೆ.

ವಿಧಾನಸೌಧದಲ್ಲಿ ವಿಮಾನ ನಿಲ್ದಾಣದ ಶಂಕುಸ್ಥಾಪನೆ : 2005ನೇ ಮಾರ್ಚ್‌ 30ಕ್ಕೆ ನಿಲ್ದಾಣ ರೆಡಿಯಾಗುವ ನಿರೀಕ್ಷೆಯಿದೆ. ಬೆಂಗಳೂರಿನಿಂದ 30 ಕಿ.ಮೀ ದೂರದಲ್ಲಿನ ಈ ನಿಲ್ದಾಣದ ಶಂಕು ಸ್ಥಾಪನಾ ಕಾರ್ಯಕ್ರಮ ವಿಧಾನಸೌಧದಲ್ಲಿಯೇ ನಡೆಯಲಿದೆ. ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಔಪಚಾರಿಕವಾಗಿ ನಡೆಯಲಿರುವ ಸಮಾರಂಭದಲ್ಲಿ ವಾಜಪೇಯಿ ಸಾಂಕೇತಿಕವಾಗಿ ಶಂಕುಸ್ಥಾಪನಾ ಭಾಷಣ ಮಾಡುವರು.

ದೆಹಲಿಗೆ ತೆರಳುವ ಮುನ್ನ ಅಜೀಮ್‌ ಪ್ರೇಮ್‌ಜೀ ಸಂಸ್ಥೆಯ ನಡುವಿನ ಒಪ್ಪಂದವೊಂದಕ್ಕೆ ಅವರು ಸಹಿ ಹಾಕುವ ಕಾರ್ಯಕ್ರಮವೂ ಇದೆ.

ವಾರ್ತಾಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X