ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಗತ್ತಿನ ಅತ್ಯಂತ ದೊಡ್ಡ ಜಾತ್ರೆಯಿದು ಮಹಾ.. ಕುಂಭ ಮೇಳವಯ್ಯ !

By Staff
|
Google Oneindia Kannada News

ಅಲಹಾಬಾದ್‌ : ಗಂಗೆ, ಯಮುನೆ ಮತ್ತು ಗುಪ್ತಗಾಮಿನಿ ಸರಸ್ವತಿಯ ತ್ರಿವೇಣಿ ಸಂಗಮದ ಪ್ರಯಾಗದಲ್ಲಿ ಪವಿತ್ರ ಸ್ನಾನದ ದಿನಗಳಲ್ಲಿ ಭಾರೀ ಜಾತ್ರೆಯೇ ನೆರೆಯುತ್ತದೆ. ಅದು ಭೂಮಿಯ ಮೇಲಿನ ಅತ್ಯಂತ ದೊಡ್ಡ ಜನಜಾತ್ರೆಯೆಂದರೂ ಆದೀತು. ಆ ದಿನಗಳಲ್ಲಿ ಸ್ನಾನ ಘಟ್ಟಕ್ಕೆ ಆಗಮಿಸುವವರ ಸಂಖ್ಯೆ ನಗರದ ಜನಸಂಖ್ಯೆಯ ಹಲವು ಪಟ್ಟಿಗಿಂತ ಹೆಚ್ಚಿರುತ್ತದೆ. ಆಡಳಿತ ಹೊರೆ ಹೊತ್ತವರಿಗಂತೂ ಈ ಅಪಾರ ಸಂಖ್ಯೆಯ ಮಂದಿಯನ್ನು ನಿಯಂತ್ರಿಸುವುದು ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಸವಾಲಿನ ಕೆಲಸ.

ಕುಭಮೇಳದ ನಿಗದಿತ ದಿನಗಳಲ್ಲಿ ತ್ರಿವೇಣಿ ಸಂಗಮದಲ್ಲಿ ಮೀಯುವುದರಿಂದ ಎಲ್ಲಾ ಪಾಪಗಳು ತೊಳೆದುಹೋಗುತ್ತವೆ ಅನ್ನುವ ನಂಬಿಕೆ ಭಕ್ತರದು. ಅದಕ್ಕೆಂದೇ ಆ ದಿನಗಳಲ್ಲಿ 3 ರಿಂದ 30 ಮಿಲಿಯನ್‌ ಜನ ಅಲ್ಲಿರುತ್ತಾರೆ. ಈ ಎಲ್ಲಾ ತಲೆ ನೋವನ್ನು ನಿಭಾಯಿಸುವ ಹೊತ್ತಿಗೆ ಉತ್ತರಪ್ರದೇಶ ಸರ್ಕಾರಕ್ಕೆ ಸಾಕು ಸಾಕಾಗಿರುತ್ತದೆ. ಇನ್ನು ಜಿಲ್ಲಾಡಳಿತದ ಪಾಡಂತೂ ಕತ್ತಿಯ ಸಾಮು ಮಾಡುವಷ್ಟು ಸೂಕ್ಷ್ಮವಾದುದು.

ಯಾವುದೇ ಯುದ್ಧ ಸಿದ್ಧತೆಗಿಂತಾ ಕಡಿಮೆಯಾದುದಲ್ಲ : ಅಲಹಾಬಾದ್‌ ಜಿಲ್ಲಾಧಿಕಾರಿ ಜೀವೇಶ್‌ ನಂದನ್‌ರ ಪ್ರಕಾರ, 2001 ರ ಕುಂಭಮೇಳದ ಸಿದ್ಧತೆಗಾಗಿ 1.2 ಬಿಲಿಯನ್‌ ರುಪಾಯಿಗಳನ್ನು ಖರ್ಚು ಮಾಡಲಾಗಿತ್ತಂತೆ. ಪತ್ರಿಕೆಯಾಂದು ವರದಿ ಮಾಡಿರುವ ಪ್ರಕಾರ - ಜಾತ್ರೆಗೆಂದೇ ವಿಶೇಷವಾಗಿ 1500 ಹೆಕ್ಟೇರ್‌ ಪ್ರದೇಶದಲ್ಲಿ ಸಿದ್ಧಗೊಂಡಿದೆ- ಕುಂಭನಗರ. ಈ ಪ್ರದೇಶದಲ್ಲಿ 54 ಮಿಲಿಯನ್‌ ಲೀಟರ್‌ ನೀರು ಪೂರೈಸುವ 12 ಸಾವಿರ ನಲ್ಲಿಗಳಿವೆ. 25 ಮೆಗಾವ್ಯಾಟ್‌ ವಿದ್ಯುತ್‌ ಪೂರೈಸುವ 35 ಉಪಕೇಂದ್ರಗಳನ್ನು ಹಬ್ಬಕ್ಕೆಂದೇ ರೂಪಿಸಲಾಗಿದೆ. 450 ಕಿಲೋ ಮೀಟರ್‌ ವಿದ್ಯುತ್‌ ತಂತಿ ಜಾಲದಲ್ಲಿ 15 ಸಾವಿರ ಬೀದಿ ದೀಪಗಳು ಬೆಳಗುತ್ತಿವೆ. 100 ಹಾಲಿನ ಕೇಂದ್ರಗಳಿಂದ 35 ಸಾಲಿರ ಲೀಟರ್‌ ಹಾಲು ಪೂರೈಕೆಯಾಗುತ್ತಿದೆ. ಇನ್ನು ಕುಂಭಾರ್ಥಿಗಳಿಗಾಗಿ ಅಲ್ಲಿರುವ ಆರೋಗ್ಯ ಕೇಂದ್ರಗಳ ಸಂಖ್ಯೆ 4. ಟಾಯ್ಲೆಟ್‌ಗಳ ಸಂಖ್ಯೆ 70 ಸಾವಿರ. 7100 ಸ್ವೀಪರ್‌ಗಳು ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದಾರೆ.

ಇನ್ನು ಕುಂಭಮೇಳಕ್ಕೆಂದೇ ವಿಶೇಷ ದೂರವಾಣಿ ಸಂಪರ್ಕಗಳು, ದೂರವಾಣಿ ಕೇಂದ್ರಗಳು, ರಸ್ತೆಗಳು ಸಿದ್ಧವಾಗಿವೆ. ಉತ್ತರಪ್ರದೇಶ ಸರ್ಕಾರದ ಕೋರಿಕೆಯ ಮೇರೆಗೆ ಭಾರತ ಸರ್ಕಾರ ಜಾತ್ರೆಯ ಪ್ರಯುಕ್ತ 13500 ಟನ್‌ ಗೋಧಿ ಹಾಗೂ 7800 ಟನ್‌ ಅಕ್ಕಿಯನ್ನು ಒದಗಿಸಿದೆ.

ಕುಂಭನಗರದ ವ್ಯವಸ್ಥೆ 11 ವಿಭಾಗಗಳಲ್ಲಿ ಹಂಚಿಕೆಯಾಗಿದ್ದು ಉಳಿದಂತೆ ಆರೋಗ್ಯ, ನೀರು, ವಿದ್ಯುತ್‌ಗಳು ಪ್ರತ್ಯೇಕ ನಿರ್ವಹಣಾ ಕಚೇರಿಗಳನ್ನು ಹೊಂದಿವೆ. ಭದ್ರತಾ ವ್ಯವಸ್ಥೆಯ ಬಗ್ಗೆ ಹೇಳುವುದಾದರೆ, 10 ಸಾವಿರ ಪೊಲೀಸರು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಶಾಂತಿ ರಕ್ಷಣಾ ಕಾರ್ಯದಲ್ಲಿ ವ್ಯಸ್ತರಾಗಿದ್ದಾರೆ. ಜೊತೆಗೆ ಪಿಎಸಿ 40 ತುಕಡಿಗಳು ಕೂಡ ಶಾಂತಿರಕ್ಷಣೆಗಾಗಿ ಶ್ರಮಿಸುತ್ತಿವೆ.

144 ವರ್ಷಗಳಿಗೊಮ್ಮೆ ಮಾತ್ರ ಮಹಾಕುಂಭ : ಪ್ರಸ್ತುತದ ಮಹಾಕುಂಭ ಮೇಳ ಧಾರ್ಮಿಕವಾಗಿ ಅಪಾರ ಪ್ರಾಮುಖ್ಯತೆ ಪಡೆದಿದೆ. ಈ ಮೇಳ 144 ವರ್ಷಗಳಿಗೊಮ್ಮೆ ಮಾತ್ರ ಬರುವಂಥದ್ದು . 12 ಕುಂಭಮೇಳಗಳು ಸೇರಿ 1 ಪೂರ್ಣ ಕುಂಭವೆನ್ನಿಸುತ್ತೆ. ಅಂಥಾ 12 ಪೂರ್ಣಕುಂಭಗಳು ಸೇರಿದರೆ ಮಹಾಕುಂಭವಾಗುತ್ತೆ. ಇಂಥಾ ಅಪರೂಪದ, ಜೀವನದಲ್ಲಿ ಮತ್ತೊಮ್ಮೆ ಕಾಣಲಾಗದ ಉತ್ಸವ ಮೋಕ್ಷ ಕಾರಕವೆನ್ನುವ ನಂಬಿಕೆ ಯಾತ್ರಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸಿದೆ.

ಚೀನಾದ ಯಾತ್ರಿಕ ಹ್ಯೂಯನ್‌ ತ್ಸಾಂಗ್‌ ಭಾರತ ಪ್ರವಾಸ ಕಾಲದಲ್ಲಿ - ಹರ್ಷವರ್ಧನನ ಆಳ್ವಿಕೆಯಲ್ಲಿ (ಕ್ರಿ.ಶ.629 ರಿಂದ 645 ) ತಾನು ಕಂಡ ಮಹಾಕುಂಭಮೇಳವನ್ನು ಬಣ್ಣಿಸಿದ್ದಾನೆ. 8 ದಿನಗಳ ಉತ್ಸವದಲ್ಲಿ ಭಾಗವಹಿಸಿದ ಸಾಧು ಸನ್ಯಾಸಿಗಳ ಸಂಖ್ಯೆಯನ್ನು ಕಂಡು ಅವನಿಗೆ ಭಾರೀ ಅಚ್ಚರಿ. ಬುದ್ಧ, ಜಿನ, ಈಶ್ವರ, ಸೂರ್ಯ ಎಲ್ಲರಿಗೂ ಅಲ್ಲಿ ಪೂಜೆ. ಈ ವಿಷಯ ಕುಂಭಮೇಳದ ವಿವರಗಳನ್ನು ದಾಖಲಿಸುವ www.kumbhallahabad.com ನಲ್ಲಿ ಸುದ್ದಿಯಾಗಿದೆ.

(ಐಎಎನ್‌ಎಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X