ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಸತ್‌ ಭವನದಲ್ಲಿ ಅಣ್ಣ ಬಸವಣ್ಣ

By Staff
|
Google Oneindia Kannada News

ಗುಲ್ಬರ್ಗಾ : 12ನೇ ಶತಮಾನದ ಕ್ರಾಂತಿ ಪುರುಷ ಶ್ರೀ ಬಸವೇಶ್ವರರು ಆಶ್ವಾರೂಢರಾಗಿ ರಾಷ್ಟ್ರದ ರಾಜಧಾನಿಯತ್ತ ಪ್ರಯಾಣ ಬೆಳೆಸಲಿದ್ದಾರೆ. 800 ವರ್ಷಗಳ ಹಿಂದೆಯೇ ಜಾತೀಯತೆಯ ನಿರ್ಮೂಲನೆಗೆ ಹೋರಾಡಿ, ಅಂತರ್ಜಾತೀಯ ವಿವಾಹಗಳಿಂದ ಜಾತೀಯತೆಯ ನಿರ್ಮೂಲನೆ ಸಾಧ್ಯ ಎಂದು ಸಾರಿ, ಕಲ್ಯಾಣ ರಾಜ್ಯದ ಕಲ್ಪನೆಯನ್ನು ಜಗತ್ತೀಗೇ ತೋರಿದ ಅಣ್ಣನವರು ಅಶ್ವಾರೂಢರಾಗಿ ಮುಂದಿನ ತಿಂಗಳು ನವದೆಹಲಿಯ ಸಂಸತ್‌ ಭವನದ 9ನೇ ದ್ವಾರದ ಮೊಗಸಾಲೆಯಲ್ಲಿ ವಿರಾಜಮಾನರಾಗಲಿದ್ದಾರೆ.

ಸಂಸತ್‌ ಭವನದ ಮೊಗಸಾಲೆಯಲ್ಲಿ ಜಗಜ್ಯೋತಿ ಬಸವೇಶ್ವರರ ಕಂಚಿನ ಪುತ್ಥಳಿ ಸ್ಥಾಪಿಸುವ ನಿಟ್ಟಿನಲ್ಲಿ ಭರದ ಸಿದ್ಧತೆಗಳು ನಡೆದಿವೆ. ಇದಕ್ಕಾಗಿಯೇ ಅಶ್ವಾರೂಢರಾದ ಶ್ರೀ ಬಸವೇಶ್ವರರ 13 ಅಡಿ ಎತ್ತರದ ಕಂಚಿನ ಪುತ್ಥಳಿ ರೂಪುಗೊಂಡಿದೆ. ಮುಂಬಯಿಯ ಶಿಲ್ಪಿ ಶ್ಯಾಮ ಸಾರಂಗರು ನಿರ್ಮಿಸುತ್ತಿರುವ ಈ ಪುತ್ಥಳಿ ನಿರ್ಮಾಣ ಕಾರ್ಯ ಅಂತಿಮ ಘಟ್ಟ ಮುಟ್ಟಿದೆ. ಈ ಪುತ್ಥಳಿಯ ನಿರ್ಮಾಣಕ್ಕೆ ತಗುಲುತ್ತಿರುವ ಒಟ್ಟು ವೆಚ್ಚ 15 ಲಕ್ಷ ರುಪಾಯಿಗಳು.

ಸೋಮವಾರ ಈ ವಿಷಯವನ್ನು ಮಹಾತ್ಮಾ ಬಸವೇಶ್ವರರ ಪುತ್ಥಳಿ ಅನಾವರಣ ಸಮಿತಿಯ ಅಧ್ಯಕ್ಷ ಹಾಗೂ ಶರಣ ಬಸವೇಶ್ವರ ದಾಸೋಹ ಪೀಠಾಧಿಪತಿ ಡಾ. ಶರಣಬಸವಪ್ಪ ಅಪ್ಪ ಅವರು ಇಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಈ ಸಂಬಂಧ ಲೋಕಸಭೆಯ ಕಾರ್ಯದರ್ಶಿ ಬ್ರಹ್ಮಗುಪ್ತ ಅವರು ಪ್ರತಿಮೆಯನ್ನು ಆದಷ್ಟು ಬೇಗ ದೆಹಲಿಗೆ ತರುವಂತೆ ತಮಗೆ ಪತ್ರ ಬರೆದಿದ್ದು, ಫೆಬ್ರವರಿ ಮೊದಲ ವಾರ ಬಸವೇಶ್ವರರ ಕಂಚಿನ ಪ್ರತಿಮೆಯನ್ನು ದೆಹಲಿಗೆ ತೆಗೆದುಕೊಂಡು ಹೋಗಲಾಗುವುದು ಎಂದರು.

ಸ್ತ್ರೀಸ್ವಾತಂತ್ರ್ಯ, ಸಮಾನತೆ, ಅಸ್ಪೃಶ್ಯತೆ ನಿವಾರಣೆ, ಸಾಮಾಜಿಕ ಅಭಿವೃದ್ಧಿಗಾಗಿ ಹೋರಾಡಿದ ಮಹಾತ್ಮನ ಪುತ್ಥಳಿಯನ್ನು ಸಂಸತ್‌ಭವನದಲ್ಲಿ ಸ್ಥಾಪಿಸುತ್ತಿರುವುದು ಔಚಿತ್ಯಪೂರ್ಣವಾಗಿದೆ ಎಂದು ಅವರು ಹೇಳಿದರು. ಪ್ರತಿಮೆಯ ನಿರ್ಮಾಣಕ್ಕೆ ಗುಲ್ಬರ್ಗಾದ ಶರಣ ಬಸವೇಶ್ವರ ಶಿಕ್ಷಣ ಸಂಸ್ಥೆ 5 ಲಕ್ಷ ರುಪಾಯಿ ದೇಣಿಗೆ ನೀಡಿದೆ. ಹೈದರಾಬಾದ್‌ ಕರ್ನಾಟಕ ಶಿಕ್ಷಣ ಸಂಸ್ಥೆ ಹಾಗೂ ಆರ್‌.ಎಂ.ಬಿ. ಆರಾಧ್ಯ ಅವರು ತಲಾ 2 ಲಕ್ಷ ರುಪಾಯಿ ನೆರವು ನೀಡಿದ್ದಾರೆ ಎಂದೂ ಡಾ. ಶರಣಬಸವಪ್ಪ ಅಪ್ಪ ಅವರು ತಿಳಿಸಿದರು.

(ಇನ್‌ಫೋ ವರದಿ)

ವಾರ್ತಾಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X