ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಟಿ ಪಂಟರಿಗೆ ‘ಜೈವಿಕ ಅಂಕಿಅಂಶ’ ಎಂಬ ಹೊಸ ಹುಲ್ಲು ಹಾಸು

By Staff
|
Google Oneindia Kannada News

ಬೆಂಗಳೂರು : ಈಗ ಐಟಿಯಲ್ಲಿ ಅಗೆದಷ್ಟೂ ಬಂಗಾರ. ಅದಕ್ಕೆ ತಕ್ಕಂತೆ ಅವಕಾಶವೂ ಹೆಚ್ಚು. ಕಸುಬುದಾರರೆಲ್ಲರಿಗೂ ಮೊಗೆದಷ್ಟೂ ಕೆಲಸ, ಹಣ. ಆದರೆ ಇದು ಹೀಗೇ ಇರದು. ಮುಂದೊಂದು ದಿನ ಈಗ ಯಾರು ಐಟಿ ಕಸುಬುದಾರರಾಗಿದ್ದಾರೋ, ಅವರೆಲ್ಲಾ ಜೈವಿಕ ತಂತ್ರಜ್ಞಾನಕ್ಕೆ ಹಾರಲಿದ್ದಾರೆ. ಆಗ ಐಟಿ ಕ್ಷೇತ್ರದಲ್ಲಿ ಜನಶಕ್ತಿ ಕಡಿಮೆಯಾಗಲಿದೆ ಎಂಬ ಆಶ್ಚರ್ಯಕರ ವಿಷಯವನ್ನು ಮೆಸಾಚ್ಯುಸೆಟ್ಸ್‌ ತಾಂತ್ರಿಕ ಸಂಸ್ಥೆ (ಎಂಐಟಿ) ಯ ಪ್ರೊ. ಚಾರ್ಲ್ಸ್‌ ಎಲ್‌.ಕೂನಿ ಹೇಳಿದ್ದಾರೆ.

ಸೋಮವಾರ ನಗರದಲ್ಲಿ ಪ್ರಾರಂಭವಾದ 3 ದಿನಗಳ ಕಾಲದ ಜೈವಿಕ ತಂತ್ರಜ್ಞಾನ ಹಾಗೂ ವಂಶಾವಳಿ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತಾಡುತ್ತಿದ್ದರು. ಔಷಧಿ ತಯಾರಿಕೆಯಲ್ಲಿನ ವೇಗ, ಸಂಪ್ರದಾಯದಿಂದ ಹೊರ ಬಂದು ಈಗ ಅಧಿಕವಾಗುತ್ತಿದೆ. ಮುಂದೊಂದು ದಿನ ಈ ವೇಗ ನಮ್ಮೆಲ್ಲರ ನಿರೀಕ್ಷೆಗಿಂತ ಅದೆಷ್ಟೋ ಪಾಲು ಹೆಚ್ಚಿರುತ್ತದೆ. ಆಗ ಜೈವಿಕ ತಂತ್ರಜ್ಞಾನ ಕ್ಷೇತ್ರಕ್ಕೂ ಪರಿಣತರು ಹೆಚ್ಚು ಹೆಚ್ಚಾಗಿ ಬೇಕಾಗುತ್ತಾರೆ ಎಂದರು.

ಪ್ರಸ್ತುತ ಜೈವಿಕ ತಂತ್ರಜ್ಞಾನ ಕುರಿತ ಅಂಕಿಅಂಶಗಳ ಬಗೆಗೆ ಅಮೆರಿಕ ಮತ್ತು ಯೂರೋಪ್‌ನ ಕೆಲ ರಾಷ್ಟ್ರಗಳು ಮಾತ್ರ ತಲೆ ಕೆಡಿಸಿಕೊಳ್ಳುತ್ತಿವೆ. ಇನ್ನು ಕೆಲವೇ ವರ್ಷಗಳಲ್ಲಿ ಔಷಧಿ ತಯಾರಿಸುವ ಕಂಪನಿಗಳೆಲ್ಲಾ ಇದರ ಬಗ್ಗೆ ಗಂಭೀರವಾಗಿ ಯೋಚಿಸಲಿವೆ. ಜೈವಿಕ ತಂತ್ರಜ್ಞಾನದಿಂದ ತಯಾರಿಸಲಾಗುವ ಮೊದಲ ಔಷಧ ಇನ್ನೈದು ವರ್ಷಗಳಲ್ಲಿ ಮಾರುಕಟ್ಟೆಗೆ ಬರಲಿದೆ. ಸಂಶೋಧನೆ ಕೆಲಸದಲ್ಲಿ ಈವರೆಗೆ ಯಾವುದೇ ಅಡಚಣೆಯಾಗಿಲ್ಲ. ನಾವು ನಿರೀಕ್ಷಿಸಿದ ವೇಗದಲ್ಲೇ ಕ್ಷೇತ್ರದ ಎಲ್ಲಾ ಕೆಲಸಗಳೂ ನಡೆಯುತ್ತಿವೆ ಎಂದು ಕೂನಿ ಹೇಳಿದರು.

ಬೆಂಗಳೂರಿನಲ್ಲಿ ಮಾಹಿತಿ ತಂತ್ರಜ್ಞಾನ ಪರಿಣತರು ಅಧಿಕ ಸಂಖ್ಯೆಯಲ್ಲಿದ್ದು, ಜೈವಿಕ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಮಾಹಿತಿ ಹುಡುಕಿ, ಕಲೆ ಹಾಕುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ದೇಶಗಳ ಕಣ್ಣು ಈಗ ಇತ್ತ ಹರಿದಿದೆ. ಜೀವಶಾಸ್ತ್ರ, ಮಾಹಿತಿ ತಂತ್ರಜ್ಞಾನ ಹಾಗೂ ರಸಾಯನಿಕ ತಂತ್ರಜ್ಞಾನ ಇವೆಲ್ಲಾ ಒಂದಕ್ಕೊಂದು ಸಂಬಂಧ ಹೊಂದಿವೆ ಎಂದು ಕೂನಿ ವಿವರಿಸಿದರು.

ಕ್ಯಾನ್ಸರ್‌- ಏಡ್ಸ್‌ ಓಡಿಸಲೂ ಯತ್ನ : ಜೈವಿಕ ತಂತ್ರಜ್ಞಾನದಿಂದ ತಯಾರಿಸುವ ಔಷಧಿಗಳು ಅಗ್ಗದ ಬೆಲೆಗೆ ಕೈಗೆಟುಕಲಿವೆ ಎಂದು ಹೇಳಲಾಗದು. ಆದರೆ ಆರೋಗ್ಯ ಸಂರಕ್ಷಣೆಯ ವಿಷಯದಲ್ಲಿ ದೇಶದ ಒಟ್ಟಾರೆ ಹೊರೆಯನ್ನು ಸಾಕಷ್ಟು ಇಳಿಸಬಲ್ಲುದು. ಸ್ತನ ಕ್ಯಾನ್ಸರ್‌ ಹಾಗೂ ಏಡ್ಸ್‌ನಂಥ ರೋಗಗಳಿಗೆ ಔಷಧಿ ಕಂಡು ಹಿಡಿದಲ್ಲಿ, ಆ ಔಷಧಿಯ ವೆಚ್ಚ ಕಡಿಮೆಯಾಗದಿದ್ದರೂ, ಆರೋಗ್ಯ ಸಂರಕ್ಷಣೆಗೆ ವಿವಿಧ ಯೋಜನೆಗಳಡಿ ಸರ್ಕಾರ ಖರ್ಚು ಮಾಡುತ್ತಿರುವ ಹಣದಲ್ಲಿ ಸಾಕಷ್ಟು ಉಳಿತಾಯ ಸಾಧ್ಯ ಎಂದು ತಿಳಿಸಿದರು.

(ಯುಎನ್‌ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X