ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೂರ್ಯನ ಹಬ್ಬದಿ ಚಂದಿರನ ನಾಚಿಸುವ ಚೆಲುವೆಯರ ಸಂಭ್ರಮ, ಸಡಗರ

By Staff
|
Google Oneindia Kannada News

ಬೆಂಗಳೂರು : ಧನುರ್ಮಾಸವಿಡೀ ವಿಶೇಷ ಪೂಜೆ ನಡೆದ ರಾಜ್ಯದ ದೇವಾಲಯಗಳಲ್ಲಿ ಸಂಕ್ರಾಂತಿಯ ಸಂಭ್ರಮ ರವಿವಾರ ಕಂಗೊಳಿಸುತ್ತಿತ್ತು. ಹಲವು ದೇವಾಲಯಗಳನ್ನು ವಿದ್ಯುತ್‌ ದೀಪ, ಪುಷ್ಪ ಮಾಲಿಕೆಗಳಿಂದ ಅಲಂಕರಿಸಿದ್ದರು. ಬಹುತೇಕ ಎಲ್ಲ ದೇವಾಲಯಗಳಲ್ಲೂ ಸಂಕ್ರಾಂತಿಯ ನಿಮಿತ್ತ ವಿಶೇಷ ಪೂಜೆಗಳು ನಡೆದವು. ಧಾರ್ಮಿಕ ಶ್ರದ್ಧಾ ಭಕ್ತಿ, ಸಡಗರದಿಂದ ನಾಡಿನ ಜನತೆ ಮಕರ ಸಂಕ್ರಾಂತಿಯನ್ನು ಆಚರಿಸಿದರು.

ಬೆಲೆ ಏರಿಕೆಯ ಬಿಸಿಯ ನಡುವೆಯೂ, ಮನೆಯ ಮಂದೆ ಸಂಕ್ರಾತಿ ಹಬ್ಬದ ಶುಭಾಶಯಗಳು ಎಂಬ ರಂಗೋಲಿ ರಾರಾಜಿಸುತ್ತಿತ್ತು. ಪುಣ್ಯ ಕ್ಷೇತ್ರಗಳಲ್ಲಿ ಹಾಗೂ ಕೃಷ್ಣ, ಕಾವೇರಿ, ಪಂಪಾ, ಶಿಂಶಾ, ತುಂಗ ಭದ್ರಾ, ಶರಾವತಿ, ನೇತ್ರಾವತಿ, ಹೇಮಾವತಿ ನದಿಗಳಲ್ಲಿ ಜನರು ಪವಿತ್ರ ಸ್ನಾನ ಮಾಡಿದರು.

ಹಿಂಗಾರು - ಮುಂಗಾರು ಕೃಷಿಯ ನಡುವೆ ದೊರಕುವ ಬಿಡುವಿನ ಸುಗ್ಗಿಯ ಸಂಕ್ರಾಂತಿಯ ದಿನ ರಾಜ್ಯದ ಎಲ್ಲ ಊರು - ಕೇರಿ - ಪಟ್ಟಣಗಳಲ್ಲಿ ರೈತರು ಹೊಸ ಬಟ್ಟೆಯ ತೊಟ್ಟು, ಸಿಹಿ ಪೊಂಗಲ್‌ ಸವಿದು, ಕಣಗಳ ಪೂಜೆ ಮಾಡಿ, ದನಗಳನ್ನು ಬೆಂಕಿಯ ಮೇಲೆ ಓಡಿಸುವ ಮುನ್ನ ಸಂಜೆ ನಡೆವ ದನಗಳ ಮೆರವಣಿಗೆಗೆ ತಮ್ಮ ಜಾನುವಾರುಗಳ ಮೈತೊಳೆದು, ಅಲಂಕರಿಸುತ್ತಿದ್ದರೆ, ಚಂದಿರನನ್ನೇ ನಾಚಿಸುವಂತೆ ಚೆಲುವೆಯರು, ಎಳ್ಳು ಬೀರುವ ತವಕದಲ್ಲಿ ತಮ್ಮನ್ನು ತಾವೇ ಸಿಂಗರಿಸಿಕೊಳ್ಳುತ್ತಿದ್ದರು.

ಸಂಜೆ ಸೂರ್ಯ ಪಶ್ಚಿಮದಲ್ಲಿ ಮುಳುಗುವ ಮುನ್ನವೇ, ದನಗಳ ಗೊರಸಿನಿಂದ ಎದ್ದ ಕೆಂಧೂಳು, ಆಗಸವನ್ನು ಕೆಂಪುವರ್ಣಕ್ಕೆ ತಿರುಗಿಸಿಬಿಟ್ಟಿತ್ತು. ಬಾಲೆಯರಿಂದ - ಮಾನಿನಿಯರವರೆಗೆ ಎಲ್ಲರೂ ಹೊಸ, ಲಂಗ, ಸೀರಿ, ರವಿಕೆ ತೊಟ್ಟು, ಎಳ್ಳು, ಕಬ್ಬು, ಸಕ್ಕರೆ ಅಚ್ಚು, ಮೊರದ ಬಾಗಿನದ ಜತೆ ಆಪ್ತೇಷ್ಟರ ಮನೆಗೆ ತೆರಳಿ ಎಳ್ಳು ಬೀರುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ದ್ವಿಚಕ್ರ ವಾಹನಗಳ ಹಿಂದೆ ರೇಷ್ಮೆ ಸೀರೆಯನುಟ್ಟು ಕುಳಿತ ಹೆಂಗಸರು, ಎಳ್ಳು, ಕಬ್ಬು ತುಂಬಿದ ಬುಟ್ಟಿಗಳನ್ನು ಕೈಯಲ್ಲಿ ಹಿಡಿದು, ದೂರದ ಗೆಳೆಯರ - ನೆಂಟರ ಮನೆಗೆ ಪ್ರಯಾಣ ಹೊರಟಿದ್ದರು. ಬೆಳಗ್ಗೆ ಎದ್ದು, ಸ್ನಾನ - ಸಂಧ್ಯಾದಿಗಳ ತರುವಾಯ, ಮನೆಯಲ್ಲಿ ದೇವರನ್ನು ಪೂಜಿಸಿ, ಎಳ್ಳಿನ ಮಿಶ್ರಣವನ್ನು ನೇವೇಧ್ಯ ಮಾಡಿ, ಬ್ರಾಹ್ಮಣರನ್ನು ಕರೆದು, ಎಳ್ಳು, ಕುಂಬಳಕಾಯಿಯ ದಾನ ಮಾಡಿ, ಮನೆ ಮಂದಿಗೆಲ್ಲಾ ಎಳ್ಳು ಕೊಟ್ಟು, ಒಳ್ಳೆಯ ಮಾತನಾಡಿ ಎನ್ನುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಸಂಜೆಯ ವೇಳೆಗಂತೂ ಎಳ್ಳು ಬೀರುವ ಸಂಭ್ರಮ ಸಡಗರ ಎಲ್ಲೆಡೆ ಕಾಣುತ್ತಿತ್ತು. ಹೊಸ ಬಗೆಯ ಜರಿ ಅಂಚಿನ ರಂಗಿನ ಲಂಗ ತೊಟ್ಟು, ಮಗ್ಗಿನ ಜಡೆ ಹಾಕಿಕೊಂಡು, ಇಲ್ಲವೆ ಜಡೆಗೆ ಮಲ್ಲಿಗೆ ದಂಡೆ ಮುಡಿದು, ಕುಚ್ಚು ಕಟ್ಟಿ, ಹಣೆಯ ಮೇಲೆ ತಿಲಕ ವಿಟ್ಟು ಸಡಗರದಿಂದ ಓಡಾಡುತ್ತಿದ್ದ ಬಾಲೆಯರು ಸಂಕ್ರಾಂತಿಯ ಹಬ್ಬಕ್ಕೆ ಸುಗ್ಗಿಯ ಸಂಭ್ರಮ ತಂದಿದ್ದರು.

ಶುಭಾಶಯ : ನಾಡಿನ ಜನತೆಗೆ ರಾಜ್ಯಪಾಲರಾದ ವಿ.ಎಸ್‌. ರಮಾದೇವಿ, ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಸೇರಿದಂತೆ ಸಚಿವ ಸಂಪುಟದ ಹಲವು ಗಣ್ಯರು ಶುಭ ಕೋರಿದ್ದರೆ, ರಾಷ್ಟ್ರದ ಜನತೆಗೆ ರಾಷ್ಟ್ರಪತಿ ಕೆ.ಆರ್‌. ನಾರಾಯಣ್‌, ಉಪರಾಷ್ಟ್ರಪತಿ ಕೃಷ್ಣಕಾಂತ್‌, ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ, ಗೃಹ ಸಚಿವ ಎಲ್‌.ಕೆ. ಆಡ್ವಾಣಿ ಸಂಕ್ರಾಂತಿಯ ಶುಭ ಹಾರೈಸಿದ್ದಾರೆ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X