ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಳ್ಳರ ಸ್ವರ್ಗ ಬೆಂಗಳೂರು

By Staff
|
Google Oneindia Kannada News

(ಇನ್ಫೋ ವಿಶೇಷ ವಾರ್ತೆ)

ಬೆಂಗಳೂರು : ಒಂದು ಕಾಲದಲ್ಲಿ ಸರಗಳ್ಳತನ ಪ್ರಕರಣಗಳಿಂದ ಸುದ್ದಿ ಮಾಡಿದ ಬೆಂಗಳೂರು ಈವತ್ತು ಹೈಟೆಕ್‌ ಚೋರರ ಸ್ವರ್ಗ. ನಗರ ಹೊಸ ರೂಪಿನೊಂದಿಗೆ ಸಿಲಿಕಾನ್‌ ಸಿಟಿ ಎಂದು ಬೀಗುತ್ತಿರುವ ಬೆನ್ನಿಗೇ ಅಪರಾಧ ಜಗತ್ತೂ ಬೆಂಗಳೂರಿನೊಂದು ಭಾಗವಾಗಿ ಬೆಳೆಯುತ್ತಿದೆ. ಯಬಡೇಶಿ ಕಳ್ಳರ ಜಾಗೆಗೆ ಮಾಸ್ಟರ್‌ ಮೈಂಡ್‌ ಜಾಕ್‌ಗಳು ಬಂದು ಬಿಟ್ಟಿದ್ದಾರೆ. ಕೈಗೆ ಸಿಕ್ಕ ಒಂದೋ ಎರಡೋ ಮಾಲು ಕದ್ದು, ಮರು ಕ್ಷಣವೇ ಸಿಕ್ಕ ಕಾಸಿಗೆ ಹರಾಜು ಹಾಕುವ ಜಾಯಮಾನದವರಲ್ಲ ಈ ಜಾಕ್‌ಗಳು. ಇಂಥ ಜಾಕ್‌ ಒಬ್ಬ ಬೆಂಗಳೂರಲ್ಲಿ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ.

ಹೆಸರು ವಿ.ಶ್ರೀನಿವಾಸ. ವಯಸ್ಸು 30. ಕೋಲಾರ ಜಿಲ್ಲೆಯ ಬಂಗಾರಪೇಟೆಯವ. ಕಳೆದ 2 ವರ್ಷಗಳಿಂದ ಕಂಪ್ಯೂಟರ್‌, ಲ್ಯಾಪ್‌ಟಾಪ್‌ ಹಾಗೂ ಸೆಲ್‌ಫೋನ್‌ ಕಳ್ಳತನ ಮಾಡುತ್ತಿದ್ದ ಈತನಿಂದ 20 ಲಕ್ಷ ರುಪಾಯಿ ಬೆಲೆಯ ಸರಕನ್ನು ಮಡಿವಾಳ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸದ್ಯ ಈತ ಪೊಲೀಸರ ಅತಿಥಿ.

ಶ್ರೀನಿವಾಸನಿಗೆ ಹೊಸ ವರ್ಷ ಹೇಳಿ ಮಾಡಿಸಿದಂತಿರಲಿಲ್ಲ. ಆವತ್ತೇ ಪೊಲೀಸರಿಗೆ ಸಿಕ್ಕಿಬಿದ್ದ. ಪೊಲೀಸರು ಇವನ ಬಾಯಿ ಬಿಡಿಸಿ, ಹೇಳಿದ ಜಾಗೆಗಳನ್ನೆಲ್ಲಾ ತಡಕಿದಾಗ 14 ಲ್ಯಾಪ್‌ಟಾಪ್‌ಗಳು, 2 ಪಾಲ್ಮ್‌ಟ್ಯಾಪ್‌ಗಳು ಹಾಗೂ 4 ಸೆಲ್‌ಫೋನ್‌ಗಳು ಪತ್ತೆಯಾದವು. ತಲಾಶು ಇನ್ನೂ ನಡೆದಿದೆ. ಅಂದರೆ ಸಿಗಬೇಕಾದ ಮಾಲು ಇನ್ನೂ ಇದೆ !

ವಿಪ್ರೋ, ಮೈಕೋ ಹಾಗೂ ಮೈಂಡ್‌ ಟ್ರೀ ಕಂಪನಿಗಳಲ್ಲಿ ನೌಕರರ ಗುರುತಿನ ಕಾರ್ಡ್‌ಗಳನ್ನು ಕಳವು ಮಾಡಿ, ಆ ಕಂಪನಿಗಳಲ್ಲಿ ಕೆಲಸಗಾರನಂತೆ ನಟಿಸಿ, ಸಮಯ ನೋಡಿ ಕಂಪ್ಯೂಟರುಗಳನ್ನು ಕದಿಯುತ್ತಾ ಬಂದ ಶ್ರೀನಿವಾಸ್‌, ನಡುನಡುವೆ ಸೆಲ್‌ಫೋನ್‌ಗಳನ್ನೂ ಉಡಾಯಿಸಿದ. ಈತ ಅದು ಹೇಗೆ ಕಂಪನಿ ಕಾವಲುಗಾರರ ಕಣ್ಣಿಗೆ ಮಣ್ಣೆರಚುತ್ತಾ ಬಂದ ಅನ್ನೋದು ಪೊಲೀಸರಿಗೆ ಇನ್ನೂ ಗೊತ್ತಾಗಿಲ್ಲ.

ಕೋರಮಂಗಲ, ಬಸವನಗುಡಿ, ಮಡಿವಾಳ ಹಾಗೂ ಆಡುಗೋಡಿ ಠಾಣೆಗಳಲ್ಲಿ ಈತನ ವಿರುದ್ಧ ಕೇಸುಗಳು ಬುಕ್ಕಾಗಿವೆ. ಈ ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ಅನೇಕ ಸಾಫ್ಟ್‌ವೇರ್‌ ಕಂಪನಿಗಳಿದ್ದು, ಆರೋಪಿಯ ಕಳ್ಳತನದ ಚಾವಡಿಗಳಾಗಿದ್ದವು ಎಂದು ಪೊಲೀಸರು ಹೇಳಿದ್ದಾರೆ. ಡಿಸಿಪಿ ಟಿ.ಸುನಿಲ್‌ ಕುಮಾರ್‌ ಹಾಗೂ ಮಡಿವಾಳ ಎಸಿಪಿ ಜಿ.ವಿ.ತಿಮ್ಮೇಗೌಡ ಅವರಿಗೆ ಸಾಫ್ಟ್‌ವೇರ್‌ ಕಂಪನಿಗಳು ಧನ್ಯವಾದ ಹೇಳಬೇಕು.

ಇನ್ನೆರಡು ದರೋಡೆ : ಮೂವರು ಸಿಕ್ಕರು, ಇಬ್ಬರು ಕಾಲುಕಿತ್ತರು, ಇನ್ನೈದು ಜನ ಪತ್ತೆಯೇ ಇಲ್ಲ

ಚೋಳರ ಕಾಲಕ್ಕೆ ಸೇರಿದ ಸುಮಾರು 700 ವರ್ಷಗಳಷ್ಟು ಹಳೆಯ ಪಂಚಲೋಹದ ಲಕ್ಷ್ಮಿ ವಿಗ್ರಹವನ್ನು ಸೆಂಟ್ರಲ್‌ ಠಾಣೆ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ.

ಮುನಿರಾಜ (35), ಶ್ರೀನಿವಾಸ ಅಲಿಯಾಸ್‌ ಶ್ರೀನಿವಾಸ ಗೌಡ (33) ಹಾಗೂ ರಾಮಮೂರ್ತಿ (23) ಇವರೇ ಬಂಧಿತರು. 3 ಅಡಿ ಎತ್ತರ, 18 ಕೆಜಿ ತೂಕದ ವಿಗ್ರಹವನ್ನು ಕೋಟೆ ಹೈಸ್ಕೂಲ್‌ ಆವರಣದಲ್ಲಿ ವಿದೇಶೀಯರಿಗೆ 45 ಲಕ್ಷ ರುಪಾಯಿ ಬೆಲೆಗೆ ಮಾರಲು ಯತ್ನಿಸುತ್ತಿದ್ದಾಗ ಪೊಲೀಸರು ಮೂವರನ್ನೂ ಬಂಧಿಸಿ, ವಿಗ್ರಹ ಹಾಗೂ ಒಂದು ರಿವಾಲ್ವರ್‌ ವಶಪಡಿಸಿಕೊಂಡಿದ್ದಾರೆ. ಇನ್ನೂ ಇಬ್ಬರು ತಪ್ಪಿಸಿಕೊಂಡಿದ್ದಾರೆ.

ಅಕ್ಕಿ ವ್ಯಾಪಾರಿಗಳಿಂದ 2.10 ಲಕ್ಷ ಲೂಟಿ : ಯಶವಂತಪುರ ನಿಯಂತ್ರಿತ ಮಾರುಕಟ್ಟೆಯ ಇಬ್ಬರು ಅಕ್ಕಿ ವ್ಯಾಪಾರಿಗಳಿಂದ 2.10 ಲಕ್ಷ ರುಪಾಯಿ ದೋಚಿರುವ ಎರಡು ಪ್ರತ್ಯೇಕ ಘಟನೆಗಳು ಸೋಮವಾರ ರಾತ್ರಿ ಮತ್ತು ಮಂಗಳವಾರ ಮಧ್ಯಾಹ್ನ ನಡೆದಿವೆ.

ಸಜ್ಜನ್‌ರಾವ್‌ ವೃತ್ತದ ನಿವಾಸಿ ಸುರೇಶ್‌ ಅವರು ಮಂಗಳವಾರ ಮಧ್ಯಾಹ್ನ ಕೋರಮಂಗಲದ ತಮ್ಮ ಗೆಳೆಯನ ಮನೆಗೆ ಹೋಗಿ ವಾಪಸ್ಸಾಗುತ್ತಿದ್ದಾಗ, ಹೊಸೂರು ರಸ್ತೆಯ ಐಟಿಐ ಬಳಿ ನಾಲ್ಕೈದು ಮಂದಿ ಅಡ್ಡಗಟ್ಟಿ, ಮಾರುತಿ ಕಾರಲ್ಲಿ ಕೂಡಿಸಿಕೊಂಡು ಸುಮಾರು ಮುಕ್ಕಾಲು ಗಂಟೆ ಸುತ್ತಾಡಿಸಿದ್ದಾರೆ. ನಂತರ 34,200ರುಪಾಯಿ ಕಸಿದುಕೊಂಡು ಬನ್ನೇರುಘಟ್ಟ ರಸ್ತೆಯ ನಿರ್ಜನ ಪ್ರದೇಶದಲ್ಲಿ ಬಿಟ್ಟು ಹೋಗಿದ್ದಾರೆ. ವಿಲ್ಸನ್‌ ಗಾರ್ಡನ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X