ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಪೊಲೀಸರೇ ಜೀವನ್ಮುಖಿಗಳಾಗಿ, ಇಲಾಖೆಯ ಘನತೆ ಕಾಪಾಡಿ’

By Staff
|
Google Oneindia Kannada News

ಬೆಂಗಳೂರು : ಹೆಚ್ಚು ಹೆಚ್ಚು ನಾಗರಿಕ ಭಾಷೆಯನ್ನು ಬಳಸುವ ಮೂಲಕ ಪೊಲೀಸರು ಜನರ ಮೆಚ್ಚುಗೆ ಗಳಿಸಬೇಕು, ಜೀವನ್ಮುಖಿಗಳಾಗಬೇಕು ಎಂದು ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಪೊಲೀಸರಿಗೆ ಸಲಹೆ ನೀಡಿದ್ದಾರೆ.

ಪೊಲೀಸ್‌ ಅಧೀಕ್ಷಕರು ಆಗಾಗ ಹಳ್ಳಿಗಳಿಗೆ ಭೇಟಿ ನೀಡುವುದರಿಂದ ಜನರೊಂದಿಗೆ ಆತ್ಮೀಯ ಸಂಬಂಧ ಹೊಂದಬಹುದು ಎಂದು ಮುಖ್ಯಮಂತ್ರಿಗಳು ಅಭಿಪ್ರಾಯಪಟ್ಟರು. ಅವರು ಸೋಮವಾರ ಜರುಗಿದ ಹಿರಿಯ ಪೊಲೀಸ್‌ ಅಧಿಕಾರಿಗಳ ಸಮಾವೇಶವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಕಂಬಾಲಪಲ್ಲಿಯಲ್ಲಿ ನಡೆದ ದಲಿತರ ಸಜೀವ ದಹನ ಹಾಗೂ ಹಂಗರಹಳ್ಳಿಯ ಗಣಿಯಲ್ಲಿ ಸರಪಳಿಯಿಂದ ಬಂಧಿಸಿದ್ದ ಜೀತದಾಳುಗಳಂತಹ ಅಮಾನವೀಯ ಘಟನೆಗಳ ಬಗ್ಗೆ ಪೊಲೀಸರು ಸದಾ ಎಚ್ಚರಗಣ್ಣಾಗಿರಬೇಕು. ಬೆಳೆಯುತ್ತಿರುವ ಸಮಾಜ ಘಾತುಕ ಕೃತ್ಯಗಳು ಹಾಗೂ ಅಂತರರಾಷ್ಟ್ರೀಯ ಭಯೋತ್ಪಾದಕತೆಯನ್ನು ಹತ್ತಿಕ್ಕಲು ಪೊಲೀಸರು ಹೊಸ ತಂತ್ರಗಳನ್ನು ರೂಪಿಸಿಕೊಂಡು ಕಾರ್ಯೋನ್ಮುಖರಾಗಬೇಕು ಎಂದು ಮುಖ್ಯಮಂತ್ರಿ ಹೇಳಿದರು.

ರಾಜ್ಯ ಪೊಲೀಸ್‌ ಪಡೆಯನ್ನು ಆಧುನೀಕರಿಸಲು ಮತ್ತು ಪೊಲೀಸರಿಗೆ ಹೆಚ್ಚಿನ ಸವಲತ್ತುಗಳನ್ನು ಕಲ್ಪಿಸಲು ರಾಜ್ಯ ಸರ್ಕಾರ 750 ಕೋಟಿ ರುಪಾಯಿಗಳನ್ನು ಮುಂದಿನ 5 ವರ್ಷಗಳಲ್ಲಿ ಖರ್ಚು ಮಾಡಲಿದೆ. ಸಂಪರ್ಕ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸಲಾಗುವುದು. ಅಪರಾಧಗಳನ್ನು ಪತ್ತೆ ಹಚ್ಚಲು ಮೈಸೂರು, ಬೆಳಗಾವಿ ಹಾಗೂ ಗುಲ್ಬರ್ಗಾಗಳಲ್ಲಿ ಫೊರೆನ್ಸಿಕ್‌ ಪ್ರಯೋಗಾಲಯಗಳನ್ನು ತೆರೆಯಲಾಗುವುದು ಎಂದು ಕೃಷ್ಣ ಹೇಳಿದರು.

ಪೊಲೀಸರಿಗೆ 5100 ಮನೆ : ಇಲಾಖಾ ನೇಮಕಾತಿಯನ್ನು ನ್ಯಾಯಾಲಯದ ತಡೆಯಾಜ್ಞೆಯ ಕಾರಣ ಸ್ಥಗಿತಗೊಳಿಸಲಾಗಿದೆ. ತಡೆಯಾಜ್ಞೆಯನ್ನು ತೆರವುಗೊಳಿಸುವ ಪ್ರಯತ್ನಗಳನ್ನು ನಡೆಸಲಾಗುತ್ತಿದೆ. ಪೊಲೀಸರಿಗಾಗಿ ಹುಡ್ಕೋ ನೆರವಿನಲ್ಲಿ 5100 ವಸತಿಗೃಹಗಳನ್ನು ನಿರ್ಮಿಸಲಾಗುತ್ತಿದೆ ಎಂದು ಸಮಾರಂಭದಲ್ಲಿ ಮಾತನಾಡಿದ ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

2000 ವರ್ಷವನ್ನು ಸಂಘರ್ಷಗಳ ವರ್ಷ ಎಂದು ಸ್ವಾಗತ ಭಾಷಣ ಮಾಡಿದ ಪೊಲೀಸ್‌ ಮಹಾ ನಿರ್ದೇಶಕ ಸಿ. ದಿನಕರ್‌ ಬಣ್ಣಿಸಿದರು. ರಾಜ್‌ಕುಮಾರ್‌ ಅಪಹರಣ, ಬಾಬಾ ಬುಡೇನ್‌ಗಿರಿಯಲ್ಲಿನ ದತ್ತ ಜಯಂತಿ ಆಚರಣೆ, ಹೈಕೋರ್ಟ್‌ ಪೀಠಕ್ಕಾಗಿ ಹುಬ್ಬಳ್ಳಿ- ಧಾರವಾಡ ಅವಳಿ ನಗರಗಳಲ್ಲಿ ವಕೀಲರ ಪ್ರತಿಭಟನೆ ಮುಂತಾದ ಘಟನೆಗಳು ಪೊಲೀಸರನ್ನು ವರ್ಷ ಪೂರ್ತಿ ತುದಿಗಾಲಲ್ಲಿ ನಿಲ್ಲಿಸಿದವು ಎಂದು ದಿನಕರ್‌ ಹೇಳಿದರು.

(ಯುಎನ್‌ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X