ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಹಾ.. ನಡುಕ ! ಇದು ಭೂ ನಡುಕ !!

By Staff
|
Google Oneindia Kannada News

ಉತ್ತರಭಾರತದಲ್ಲಿ ಬೀಸುತ್ತಿರುವ ಶೀತಮಾರುತಕ್ಕೆ ಸಿಲುಕಿ ಸಾಯುತ್ತಿರುವವರ ಸಂಖ್ಯೆ ಮೂವತ್ತೆೈದರ ಗಡಿ ದಾಟಿ ಇನ್ನೂ ಮುಂದುವರಿಯುತ್ತಿದ್ದಂತೆಯೇ, ಇತ್ತ ದಕ್ಷಿಣದ ಕೇರಳದಲ್ಲಿ ಭೂಮಿ ನಡುಗಿ, ನಾಗರಿಕರು ಆತಂಕದಿಂದ ನಡುಗುತ್ತಿದ್ದಾರೆ.

ಅನೇಕರು ಭಾನುವಾರ ರಜಾದಿನದ ಮುಂಜಾನೆಯ ಸಕ್ಕರೆ ನಿದ್ದೆಯಿಂದ ಹೊರಗೆ ಬಂದಿರಲಿಲ್ಲ . ಬೆಳಿಗ್ಗೆ 8.25 ರ ಸುಮಾರಿಗೆ ಏಳೆಂಟು ಸೆಕೆಂಡುಗಳ ಕಾಲ ನಿಂತ ನೆಲವೇ ಅದುರಿದಂತಾಗಿ, ನಡೆದದ್ದೇನು ಎನ್ನುವುದು ಅವರ ಗಮನಕ್ಕೆ ಬರುವ ಹೊತ್ತಿಗೆ ಅನೇಕ ಮನೆಗಳು ಕುಸಿದಿದ್ದವು. ಸದ್ಯಕ್ಕೆ ಯಾವುದೇ ಜೀವಹಾನಿಯಾದ ಘಟನೆಗಳು ವರದಿಯಾಗಿಲ್ಲ . ಎರ್ನಾಕುಲಂ ಜಿಲ್ಲೆಯಲ್ಲಿ ಓರ್ವ ಮಹಿಳೆ ಗಾಯಗೊಂಡಿದ್ದಾಳೆ. ಭೂಕಂಪದ ತೀವ್ರತೆಯನ್ನು ರಿಕ್ಟರ್‌ ಮಾಪಕ 4.8 ಎಂದು ದಾಖಲಿಸಿದೆ.

ಮೊದಲ ಆಘಾತದ ನಡುಕ ಇನ್ನೂ ಚಾಲ್ತಿಯಲ್ಲಿರುವಾಗಲೇ ಕೆಲವೇ ನಿಮಿಷಗಳ ಅಂತರದಲ್ಲಿ , ಸುಮಾರು 8.57 ರ ಸುಮಾರಿಗೆ ಮತ್ತೊಮ್ಮೆ 3.3 ತೀವ್ರತೆಯ ಕಂಪನ ಸಂಭವಿಸಿದೆ. ಜನ ಮನೆಗಳಿಂದ ಹೊರಗೆ ಓಡಿ ಬಂದಿದ್ದಾರೆ. ಅತ್ತ ಶಬರಿಮಲೆಯ ಪಂಪಾ ಸನ್ನಿಧಾನದಲ್ಲಿ ಭೂ ನಡುಕದ ಅನುಭವವಾಗುತ್ತಿದ್ದಂತೆಯೇ ಸ್ವಾಮಿಯೇ ಶರಣಂ ಅಯ್ಯಪ್ಪ ಎನ್ನುವ ಸಾವಿರಾರು ಭಕ್ತರ ಘೋಷಣೆ ಮುಗಿಲು ಮುಟ್ಟಿತು.

ತಮಿಳುನಾಡಿನಲ್ಲೂ ಕಂಪನ : ಕೊಯಂಬತ್ತೂರು ಜಿಲ್ಲೆಯ ಅನೇಕ ಭಾಗಗಳಲ್ಲೂ ಭಾನುವಾರ ಬೆಳಿಗ್ಗೆ ಜನತೆಗೆ ಭೂಕಂಪದ ಅನುಭವವಾಗಿದೆ. ಮನೆಯ ಗೋಡೆಗಳು ಅದುರಿ ಬಿರುಕು ಬಿಡುತ್ತಿದ್ದಂತೆಯೇ ಭಯಭೀತರಾದ ಜನ ರಸ್ತೆಗಳಿಗೆ ಓಡಿ ಬಂದಿದ್ದಾರೆ. ಯಾವುದೇ ಜೀವಹಾನಿಯ ಘಟನೆಗಳು ವರದಿಯಾಗಿಲ್ಲ .

ಶೂನ್ಯಕ್ಕೆ ಸಂದ ತಾಪಮಾನ : ಭಾನುವಾರ ಬೆಳಿಗ್ಗೆ ಕಾನ್ಪುರದಲ್ಲಿನ ತಾಪಮಾನ 0.6 ಡಿಗ್ರಿ ಸೆಲ್ಷಿಯಸ್‌ನಷ್ಟಿದ್ದು , ಜನತೆ ಅತ್ಯಂತ ಕನಿಷ್ಠ ತಾಪಮಾನದಿಂದ ನಡುಗಿದರು. ಶನಿವಾರ ರಾತ್ರಿ 4.6 ಡಿಗ್ರಿ ಸೆಲ್ಷಿಯಸ್‌ನಷ್ಟಿದ್ದ ತಾಪಮಾನ ಬೆಳಿಗ್ಗಿನ ಹೊತ್ತಿಗೆ 3.6 ಡಿಗ್ರಿ ಸೆಲ್ಷಿಯಸ್‌ನಷ್ಟು ಕುಸಿಯಿತು . ನಗರದ ಕನಿಷ್ಠ ತಾಪಮಾನದಿಂದಾಗಿ ಕನಿಷ್ಠ ಒಬ್ಬ ವ್ಯಕ್ತಿ ಮೃತನಾಗಿದ್ದಾನೆಂದು ಅಧಿಕೃತ ಮೂಲಗಳು ತಿಳಿಸಿವೆ.

ಕರ್ನಾಟಕದಲ್ಲಿ ಸರ್ವೇ ಜನೋ ಸುಖಿನೋಭವಂತು : ನೆರೆಯ ರಾಜ್ಯಗಳಲ್ಲಿ ಪ್ರಕೃತಿ ಮುನಿಸಿನಿಂದ ಜನತೆ ನಡುಗುತ್ತಿದ್ದರೆ, ಅದರ ಸುದ್ದಿ ಕರ್ನಾಟಕದಲ್ಲಿ ಅನೇಕರಿಗೆ ಗೊತ್ತೇ ಇರಲಿಲ್ಲ . ಇಲ್ಲಿ ನೆಡುಮಾರನ್‌ ಸನ್ಮಾನ ಪ್ರಕರಣದ ಆಜುಬಾಜುಗಳ ಚರ್ಚೆ ನಡೆಯುತ್ತಿತ್ತು . ಬೆಳಿಗ್ಗೆ ಚಳಿ, ಹತ್ತರ ನಂತರ ಬಲಿಯುತ್ತಾ ಹೋಗುವ ಬಿಸಿಲು, ಸಂಜೆ ತಂಪು, ರಾತ್ರಿ ಚೆಂದದ ನಿದ್ದೆ ತರುವ ಹವಾ.. ಕನ್ನಡಿಗರು ಪುಣ್ಯಶಾಲಿಗಳು ಎಂದು ಅನೇಕರು ಹೇಳುವುದು ಹವೆಯ ದೃಷ್ಟಿಯಿಂದ ಸುಳ್ಳೇನಲ್ಲ .

ಮಳೆ ರಾಜ್ಯದಿಂದ ಗುಳೆ ಹೊರಟಿರುವುದು ಸ್ಪಷ್ಟವಾಗಿದೆ. ಎಲ್ಲೂ ಮಳೆಯ ಸುದ್ದಿಯಿಲ್ಲ . ಇನ್ನು ತಾಪಮಾನದಲ್ಲೂ ಅಲ್ಪ ಸ್ವಲ್ಪ ಬದಲಾವಣೆಗಳಷ್ಟೇ. ನಾಳೆ ನಾಳಿದ್ದೂ ಒಣಹವೆ ಎನ್ನುತ್ತಿದೆ ಟೇಬಲ್ಲಿನ ಮೇಲಿರುವ ಹವಾಮಾನ ಇಲಾಖೆಯ ವರದಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X