ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಡಿಸ್‌ಪೋಸೆಬಲ್‌ ಸಿರಿಂಜ್‌ ಪುನರ್ಬಳಕೆ ಮಾಡಿದರೆ ಕಠಿಣ ಕ್ರಮ’

By Staff
|
Google Oneindia Kannada News

ಉಡುಪಿ : ಏಡ್ಸ್‌ ರೋಗ ನಿಯಂತ್ರಿಸಲು ರಾಜ್ಯ ಸರಕಾರ ವ್ಯಾಪಕ ಕ್ರಮ ಕೈಗೊಂಡಿದ್ದರೂ ನಿರೀಕ್ಷಿತ ಫಲ ದೊರಕಿಲ್ಲ ಎಂದು ರಾಜ್ಯ ಆರೋಗ್ಯ ಸಚಿವ ಎ.ಬಿ. ಮಲಕರೆಡ್ಡಿ ವಿಷಾದ ವ್ಯಕ್ತಪಡಿಸಿದ್ದಾರೆ. ಮಂಗಳವಾರ ಇಲ್ಲಿ ಏರ್ಪಡಿಸಿದ್ದ ಏಡ್ಸ್‌ ನಿಯಂತ್ರಣ - ಜನಜಾಗೃತಿ ಸಮಾವೇಶ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಈ ಹಿಂದೆ ಮಹಾನಗರಗಳ ಪ್ರದೇಶಕ್ಕೆ ಮಾತ್ರ ಸೀಮಿತವಾಗಿದ್ದ ಈ ರೋಗ ಹಳ್ಳಿ ಹಳ್ಳಿಗಳಿಗೂ ಹಬ್ಬುತ್ತಿದೆ. ಏಡ್ಸ್‌ ನಿಯಂತ್ರಣಕ್ಕೆ ಸರಕಾರ ವೆಚ್ಚ ಮಾಡುತ್ತಿರುವ ಹಣದ ಪ್ರಮಾಣವೂ ಏರುತ್ತಿದೆ. ಆದರೆ, ಏಡ್ಸ್‌ ನಿಯಂತ್ರಣಕ್ಕೆ ಬರುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

ಏಡ್ಸ್‌ ತಡೆಗೆ ವ್ಯಾಪಕ ಜನಾಂದೋಲನ ನಡೆಯಬೇಕು. ಸರಕಾರದ ಜತೆ ಈ ಕಾರ್ಯದಲ್ಲಿ ಸರಕಾರೇತರ ಸಂಸ್ಥೆಗಳೂ ಕೈಜೋಡಿಸಬೇಕು ಎಂದೂ ಅವರು ಮನವಿ ಮಾಡಿದರು. ಗ್ರಾಮೀಣ ಪ್ರದೇಶಗಳಲ್ಲಿ ದಾದಿಯರು ಒಮ್ಮೆ ಮಾತ್ರ ಬಳಸಿ ಬಿಸಾಡುವ ಸಿರಿಂಜ್‌ಗಳ ಮರು ಬಳಕೆ ಮಾಡುತ್ತಿರುವ ಬಗ್ಗೆ ದೂರುಗಳಿದ್ದು , ಅಂತಹವರ ವಿರುದ್ಧ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದರು.

ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ರಾಷ್ಟ್ರೀಯ ಏಡ್ಸ್‌ ಪ್ರಿವೆನ್‌ಷನ್‌ ಸೊಸೈಟಿಗಳು ಸಂಯುಕ್ತವಾಗಿ ಈ ಸಮಾವೇಶ ಏರ್ಪಡಿಸಿದ್ದವು. ಕಾರ್ಯಕ್ರಮದಲ್ಲಿ ಉಡುಪಿ ಶಾಸಕ ಸಭಾಪತಿ, ಶಾಸಕರಾದ ಗೋಪಾಲ ಪೂಜಾರಿ, ಗೋಪಾಲ ಭಂಡಾರಿ, ಉಡುಪಿ ಜಿ.ಪಂ. ಅಧ್ಯಕ್ಷೆ ಸರಸು ಬಂಗೇರ ಪಾಲ್ಗೊಂಡಿದ್ದರು.

ಇದಕ್ಕೂ ಮುನ್ನ ರಾಜ್ಯ ಸಭಾ ಸದಸ್ಯ ಆಸ್ಕರ್‌ ಫರ್ನಾಂಡಿಸ್‌ ಏಡ್ಸ್‌ ಕುರಿತ ಜನಜಾಗೃತಿ ಜಾಥಾ ಉದ್ಘಾಟಿಸಿದರು. ಉಡುಪಿ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು.

(ಮಂಗಳೂರು ಪ್ರತಿನಿಧಿಯಿಂದ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X