ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಗಾತಿಯನ್ನು ಕಾನೂನು ಬದ್ಧವಾಗಿ ಕೊಲ್ಲುವುದು ಹೇಗೆ ?

By Staff
|
Google Oneindia Kannada News

ಬೆಂಗಳೂರು : ಇತ್ತೀಚೆಗೆ ಜನಪ್ರಿಯ ನಟನೊಬ್ಬನನ್ನು ಅಪಹರಿಸಿ ಎರಡು ರಾಜ್ಯಗಳನ್ನು ಕಕ್ಕಾಬಿಕ್ಕಿಗೊಳಿಸಿದ ವ್ಯಕ್ತಿ ಯಾರು ಅನ್ನುವ ಪ್ರಶ್ನೆಯನ್ನು ನಮ್ಮ ದಾವಣಗೆರೆ ಕಡೆಯ ಯಾರೊ ಒಬ್ಬ ಮೇಡಮ್ಮು ಕಿರು ಪರೀಕ್ಷೆಯಲ್ಲಿ ಮಕ್ಕಳನ್ನು ಕೇಳಿದ್ದು , ಮಕ್ಕಳಿಗೆ ಅಂಥಾ ಪ್ರಶ್ನೆ ಕೇಳಿದ ಆಕೆಯ ನಡವಳಿಕೆಯ ಬಗ್ಗೆ ಯಾರೊ ಓದುಗರು ಪತ್ರಿಕೆಯಲ್ಲಿ ಆಕ್ಷೇಪ ಎತ್ತಿದ್ದು ಇಲ್ಲಿ ಅಷ್ಟೇನೂ ದೊಡ್ಡ ಸುದ್ದಿಯಾಗಲಿಲ್ಲ . ಶಿಕ್ಷಣಕ್ಕೆ ಯಾವತ್ತೂ ಎರಡನೇ ಆದ್ಯತೆಯಿರುವ ಪ್ರಗತಿ ಶೀಲ ರಾಷ್ಟ್ರಗಳಲ್ಲಿ ಇಂಥಾ ವಿಷಯಗಳಿಗೆ ಮಹತ್ವವೇ ಇಲ್ಲ . ಆದರೆ ಮುಂದುವರಿದ ರಾಷ್ಟ್ರಗಳ ನಡಾವಳಿಗಳೇ ಬೇರೆ.

ಇಲ್ಲಿನ ಸುದ್ದಿ ಜಪಾನಿನದು. ಘಟನೆ ನಡೆದದ್ದು ಒಂದೊಮ್ಮೆ ದೇಶದ ಶ್ರೀಮಂತ ನಗರಗಳಲ್ಲಿ ಒಂದೆನಿಸಿಕೊಂಡಿದ್ದ ನಾರಾ ಪಟ್ಟಣದಲ್ಲಿ. ಸಂಗಾತಿಯನ್ನು ಕಾನೂನು ಬದ್ಧವಾಗಿ ಕೊಲ್ಲುವುದು ಹೇಗೆ- ಪೆಡಗೊಗ್ವ್‌ (51) ಅನ್ನುವ ಶಿಕ್ಷಕ ಪರೀಕ್ಷೆಯಲ್ಲಿ ಮಕ್ಕಳಿಗೆ ಕೇಳಿದ ಈ ಪ್ರಶ್ನೆ ಅಲ್ಲಿ ಭಾರೀ ಚರ್ಚೆಯನ್ನು ಹುಟ್ಟುಹಾಕಿದೆ. ತನ್ನ ವಿದ್ಯಾರ್ಥಿಗಳಲ್ಲಿ ಆರೋಗ್ಯದ ಜಾಗೃತಿಯನ್ನು ಮೂಡಿಸುವುದು ಪ್ರಶ್ನೆಯ ಉದ್ದೇಶ ಎನ್ನುವ ಶಿಕ್ಷಕನ ಸಮಜಾಯಿಷಿ ಪೋಷಕರಿಗೆ ಇಷ್ಟವಾಗಿಲ್ಲ . ಇಂಥಾ ಪ್ರಶ್ನೆಗಳು ಮಕ್ಕಳ ನೈತಿಕತೆಯ ಮೇಲೆ ಬೀರಬಹುದಾದ ಪರಿಣಾಮದ ಬಗ್ಗೆ ಅವರಿಗೆ ಆತಂಕ.

ಪೋಷಕರ ಪ್ರತಿಭಟನೆ ಜಪಾನಿನ ಸುದ್ದಿ ಪತ್ರಿಕೆಗಳಲ್ಲಿ ದೊಡ್ಡದಾಗಿ ಪ್ರಕಟವಾಗಿದೆ. ಶಾಲಾಡಳಿತವೂ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಯೋಚನಾರಹಿತವಾಗಿ ಪ್ರಶ್ನೆ ಕೇಳಿದ ಶಿಕ್ಷಕನ ಪರವಾಗಿ ಪೋಷಕರಲ್ಲಿ ಕ್ಷಮೆ ಕೋರಿರುವ ಶಾಲಾಡಳಿತ, ಪ್ರಶ್ನೆ ಕೇಳಿದ ಶಿಕ್ಷಕನ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಇಂಗಿತವನ್ನು ವ್ಯಕ್ತಪಡಿಸಿದೆ.

ಪ್ರಕರಣವನ್ನು ಬೆಳಕಿಗೆ ತಂದಿರುವ ಪತ್ರಿಕೆಗಳೇ ಪ್ರಶ್ನೆಗೆ ಉತ್ತರವನ್ನೂ ಪ್ರಕಟಿಸಿವೆ. ಮಿತಿ ಮೀರಿದ ಧೂಮಪಾನ, ಮದ್ಯಪಾನ ಹಾಗೂ ಹೊಟ್ಟೆ ಬಾಕತನಗಳಿಗೆ ಸಂಗಾತಿ ಒಳಗಾಗಿರುವುದನ್ನು ಖಚಿತಪಡಿಸಿಕೊಳ್ಳುವುದೇ(ಪರೋಕ್ಷ ಪ್ರೋತ್ಸಾಹ) ಪ್ರಶ್ನೆಯ ಉತ್ತರ ಎಂದು ಮಾಧ್ಯಮಗಳು ಪ್ರಕಟಿಸಿವೆ.

ಬಾಲಂಗೋಚಿ : ಸಂಗಾತಿಯನ್ನು ಕಾನೂನು ಬದ್ಧವಾಗಿ ಕೊಲ್ಲುವ ಪ್ರಶ್ನೆಗೆ ಸಂಬಂಧಿಸಿದ ಉತ್ತರವನ್ನು ಸರಿ ಎಂದು ಒಪ್ಪುವುದಾದರೆ, ಪಂಚ ಪತಿವ್ರತೆಯರ ನಾಡು ಭಾರತದಲ್ಲಿ ಬಹಳಷ್ಟು ಹೆಂಡತಿಯರು ತಮ್ಮ ಗಂಡಂದಿರ ಸಾವಿಗೆ ಹೊಣೆಯಾಗುತ್ತಿದ್ದಾರೆ ಅನ್ನುವುದನ್ನೂ ಒಪ್ಪಬೇಕು. ಇಲ್ಲವೆನ್ನುವಿರಾ?

(ಡಿಪಿಎ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X