ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೆಡುಮಾರನ್‌ ರಾಷ್ಟ್ರದ್ರೋಹಿಯಲ್ಲ , ಸಾತ್ವಿಕ ಮನಸ್ಸಿನ ಗಾಂಧಿವಾದಿ

By Staff
|
Google Oneindia Kannada News

ಬೆಂಗಳೂರು : ನೆಡುಮಾರನ್‌ ಅವರನ್ನು ರಾಷ್ಟ್ರದ್ರೋಹಿ ಎಂದು ಟೀಕಿಸುತ್ತಿರುವವರಿಗೆ, ಅವರ ರಾಷ್ಟ್ರೀಯ ಒಕ್ಕೂಟದ ಪರಿಕಲ್ಪನೆ ಅರ್ಥ ವಾಗಿಲ್ಲ . ಅವರೊಬ್ಬ ಗಾಂಧಿವಾದಿ, ರಾಷ್ಟ್ರದ್ರೋಹಿಯಲ್ಲ ಎಂದು ಅಗ್ನಿ ಪತ್ರಿಕೆಯ ಸಂಪಾದಕ ಶ್ರೀಧರ್‌ ಹಾಗೂ ಲೇಖಕ ಬಂಜಗೆರೆ ಜಯಪ್ರಕಾಶ್‌ ಹೇಳಿದ್ದಾರೆ.

ನೆಡುಮಾರನ್‌ ಅವರು ಕಾಡಿಗೆ ಹೋಗುವವರೆಗೆ ಸುಮ್ಮನಿದ್ದ ಟೀಕಾಕಾರರು, ಈಗ ಟೀಕಿಸುತ್ತಿರುವುದರಲ್ಲಿ ಅರ್ಥವಿಲ್ಲ . ನೆಡುಮಾರನ್‌ ಅವರು ಕಾಡಿಗೆ ಹೋಗುವ ಮುನ್ನವೇ ಅವರು ತಮ್ಮ ಅಭಿಪ್ರಾಯಗಳನ್ನು ಏಕೆ ವ್ಯಕ್ತಪಡಿಸಲಿಲ್ಲ ಎಂದು ಮಂಗಳವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು ಪ್ರಶ್ನಿಸಿದರು. ರಾಜ್‌ ಬಿಡುಗಡೆಯ ಮೂಲ ಪುರುಷರಾದ ನೆಡುಮಾರನ್‌ ಅವರಿಗೆ ಜನವರಿ 7 ರಂದು ನಗರದಲ್ಲಿ ಕೃತಜ್ಞತೆ ಸಲ್ಲಿಸುವ ಕಾರ್ಯಕ್ರಮದ ವಿವರಗಳನ್ನು ಅವರು ಸುದ್ದಿಗಾರರಿಗೆ ನೀಡಿದರು.

ರಾಷ್ಟ್ರದೊಳಗೆ ಎಲ್ಲಾ ರಾಜ್ಯಗಳ ಪ್ರಾಮುಖ್ಯತೆಯನ್ನು ರಕ್ಷಿಸುವುದು ಅವರ ನಿಲುವು. ಪ್ರತ್ಯೇಕ ರಾಜ್ಯದ ಕೂಗಿಗೆ ಅವರು ಯಾವತ್ತೂ ಬೆಂಬಲ ನೀಡಿಲ್ಲ ಎಂದು ಶ್ರೀಧರ್‌ ಸ್ಪಷ್ಟಪಡಿಸಿದರು. ಶ್ರೀಲಂಕಾದಲ್ಲಿ ತಮಿಳರ ಹಿತರಕ್ಷಣೆ ವಿಷಯದಲ್ಲಿ ರಾಜೀವ್‌ ಹತ್ಯೆಯ ಮುನ್ನ ಎಲ್ಲಾ ಬುದ್ಧಿಜೀವಿಗಳು ಬೆಂಬಲ ನೀಡಿದ್ದರು. ಆದರೆ, ರಾಜೀವ್‌ ಹತ್ಯೆಯ ನಂತರವಷ್ಟೇ ಪರಿಸ್ಥಿತಿ ಬದಲಾಯಿತು ಎನ್ನುವ ವಿಷಯವನ್ನು ಅವರು ನೆನಪಿಸಿದರು.

ನೆಡುಮಾರನ್‌ ಅವರು ರಾಷ್ಟ್ರ ವಿರೋಧಿಯಾಗಿದ್ದರೆ ಅವರನ್ನು ಯಾಕೆ ಜೈಲಿಗೆ ಹಾಕುತ್ತಿಲ್ಲ ಎಂದು ಪ್ರಶ್ನಿಸಿದ ಶ್ರೀಧರ್‌, ವಿಧ್ವಂಸಕ ಕೃತ್ಯಗಳಲ್ಲಿ ನೆಡುಮಾರನ್‌ ಅವರಿಗೆ ಮನಸ್ಸಿದ್ದರೆ ಅವರು ರಾಜ್‌ ಬಿಡುಗಡೆಗೆ ಮುಂದಾಗುತ್ತಿರಲಿಲ್ಲ . ಉಭಯ ರಾಜ್ಯಗಳಲ್ಲಿ ಸೌಹಾರ್ದಕರ ವಾತಾವರಣ ಉಂಟು ಮಾಡಲು ಪ್ರಯತ್ನಿಸುತ್ತಿರಲಿಲ್ಲ ಎಂದರು.

ಸೋಮವಾರ ನಗರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ ಅವರು ನೆಡುಮಾರನ್‌ರನ್ನು ರಾಷ್ಟ್ರದ್ರೋಹಿ ಎಂದು ಕರೆದಿದ್ದರು ಹಾಗೂ ಅವರಿಗೆ ಸನ್ಮಾನ ಮಾಡುವುದನ್ನು ವಿರೋಧಿಸಿದ್ದ ಹಿನ್ನೆಲೆಯಲ್ಲಿ ಶ್ರೀಧರ್‌ ಹಾಗೂ ಜಯಪ್ರಕಾಶ್‌ ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

ನಮ್ಮ ಹೋರಾಟ ನಮ್ಮವರ ಮೇಲಲ್ಲ : ನಮ್ಮ ನಮ್ಮೊಳಗೆ ಹೋರಾಟ ನಡೆಸುವಲ್ಲಿ ಅರ್ಥವಿಲ್ಲ . ಕನ್ನಡಿಗ ಮತ್ತು ತಮಿಳರು ವೈರಿಗಳಲ್ಲ . ಈರ್ವರ ನಡುವೆ ಕಲಹ ಹುಟ್ಟು ಹಾಕುತ್ತಿರುವವರನ್ನು ನಾವು ಮೊದಲು ಗುರ್ತಿಸಬೇಕಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಚಂದ್ರಶೇಖರ ಪಾಟೀಲ ಹೇಳಿದರು.

ನಮ್ಮ ನಿಜವಾದ ಹೋರಾಟ ವಸಾಹತುಶಾಹಿ, ಬಂಡವಾಳಶಾಹಿ ಹಾಗೂ ಬಹುರಾಷ್ಟ್ರೀಯ ಕಂಪನಿಗಳ ವಿರುದ್ಧ ನಡೆಯಬೇಕಿದೆ. ಈ ಕುರಿತು ನೆಡುಮಾರನ್‌ರ ಅಭಿಪ್ರಾಯ ನಮಗೆ ಮುಖ್ಯವಾಗಿದೆ ಎಂದು ಚಂಪಾ ಅಭಿಪ್ರಾಯ ಪಟ್ಟರು. ಸಾಹಿತಿ ಪಿ.ವಿ. ನಾರಾಯಣ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X