ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋಲಾ ಕುಡಿದ ಕಾಂಗ್ರೆಸ್‌ ನಾಯಕರು ಕರ ಹೇರುವುದು ಮರೆತರೇ ?

By Staff
|
Google Oneindia Kannada News

ಬೆಂಗಳೂರು : ಹೌದು ಎನ್ನುತ್ತಿದ್ದಾರೆ ಬಿಜೆಪಿ ನಾಯಕರು. ಕೋಕಾಕೋಲ ಬಹು ರಾಷ್ಟ್ರೀಯ ಕಂಪನಿಗೆ 8 ವರ್ಷಗಳ ಮಾರಾಟ ತೆರಿಗೆ ವಿನಾಯ್ತಿ ನೀಡಿರುವುದರಿಂದ ರಾಜ್ಯದ ಬೊಕ್ಕಸಕ್ಕೆ ಸುಮಾರು 192 ಕೋಟಿ ರುಪಾಯಿ ನಷ್ಟವಾಗಿದೆ ಎಂದು ಬಿಜೆಪಿ ನಾಯಕರು ಆಪಾದಿಸಿದ್ದಾರೆ. ಕೃಷ್ಣ ಸರ್ಕಾರದ ಮೇಲೆ ಕೇಳಿಬಂದ ಮೊದಲ ಗುರುತರ ಆರೋಪ ಇದಾದ್ದರಿಂದ ಈ ಹೇಳಿಕೆ ಇನ್ನಿಲ್ಲದ ಮಹತ್ವ ಪಡೆದುಕೊಂಡಿದೆ.

ಬಿಡದಿಯಲ್ಲಿರುವ ಹಿಂದೂಸ್ತಾನ್‌ ಬಿವರೇಜ್‌ ಸಂಸ್ಥೆಯ ಉತ್ಪನ್ನಗಳ ಮಾರಾಟದ ಹಕ್ಕನ್ನು ಸಚಿವರ ಸಂಬಂಧಿಯಾಬ್ಬರು ಪಡೆದಿದ್ದು, ಅವರಿಗೆ ಲಾಭ ಮಾಡಿಕೊಡುವ ಹಿನ್ನೆಲೆಯಲ್ಲಿ ತೆರಿಗೆ ವಿನಾಯ್ತಿಯ ಕ್ರಮ ಕೈಗೊಳ್ಳಲಾಗಿದೆ ಎಂದು ಬಿಜೆಪಿ ನಾಯಕರಾದ ಬಿ.ಎಸ್‌. ಯಡಿಯಾರಪ್ಪ ಹಾಗೂ ಡಾ.ವಿ.ಎಸ್‌.ಆಚಾರ್ಯ ಗುರುವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಸರ್ಕಾರದ ಮೇಲೆ ನೇರ ಆಪಾದನೆ ಹೊರಿಸಿದ್ದಾರೆ.

ಮಾರಾಟ ತೆರಿಗೆ ವಿನಾಯ್ತಿ ಮಾತ್ರವಲ್ಲದೆ ಸಂಸ್ಥೆ ಆಮದು ಮಾಡಿಕೊಳ್ಳುವ ಯಂತ್ರೋಪಕರಣಗಳ ಮಾರಾಟ ತೆರಿಗೆ ಹಾಗೂ ಕೇಂದ್ರ ಮಾರಾಟ ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ. ಇದರಿಂದಾಗಿ ಬಹುರಾಷ್ಟ್ರೀಯ ಕಂಪನಿಗಳಿಗೆ ಅನಗತ್ಯ ಉತ್ತೇಜನ ನೀಡಿದಂತಾಗುತ್ತದೆ ಎಂದು ಅವರು ಆರೋಪಿಸಿದರು.

ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯು ತನ್ನ ವ್ಯಾಪ್ತಿಯ 87 ಬಸ್‌ ನಿಲ್ದಾಣಗಳು ಹಾಗೂ ಹಾದಿ ಬದಿ ತಂಗುದಾಣಗಳಲ್ಲಿ ಎಳನೀರು ಮತ್ತು ಇತರೆ ಪಾನೀಯಗಳ ಮಾರಾಟಕ್ಕೆ ನಿಷೇಧ ಹೇರಿದೆ. ಅಲ್ಲಿ ಬಹುರಾಷ್ಟ್ರೀಯ ಕಂಪನಿಗಳ ಉತ್ಪನ್ನಗಳಿಗೆ ಮಾತ್ರ ಅವಕಾಶ ಮಾಡಿಕೊಡಲಾಗಿದೆ ಎಂದು ಗಮನಾರ್ಹ ಆರೋಪ ಮಾಡಿದ ಬಿಜೆಪಿ ಜೋಡಿ, ಸ್ಥಳೀಯರನ್ನು ಶೋಷಿಸಿ ಬಹುರಾಷ್ಟ್ರೀಯ ಕಂಪನಿಗಳ ಜೇಬು ತುಂಬಲು ಹೊರಟಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಿದರು.

ರಾಜ್ಯ ಸರ್ಕಾರ ತುಘಲಕ್‌ ನೀತಿ ಅನುಸರಿಸುತ್ತಿದೆ. ಈ ಹಿಂದಿನ ಯಾವ ಸರ್ಕಾರಗಳೂ ಇಂಥಾ ಲಜ್ಜೆಗೆಟ್ಟ ಕ್ರಮ ಕೈಗೊಂಡಿರಲಿಲ್ಲ . ಹಣಕಾಸು ಖಾತೆ ಹೊತ್ತಿರುವ ಮುಖ್ಯಮಂತ್ರಿ ಕೃಷ್ಣ ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಯಡಿಯೂರಪ್ಪ ಹಾಗೂ ಆಚಾರ್ಯ ಒತ್ತಾಯಿಸಿದರು.

ಕೋಲಾ ಸ್ಪಷ್ಟನೆ : ಸರ್ಕಾರ ತನ್ನ ಕೈಗಾರಿಕಾ ನೀತಿಗೆ ಅನುಗುಣವಾಗಿಯೇ ಕಂಪನಿಗೆ ಮಾರಾಟ ತೆರಿಗೆ ವಿನಾಯ್ತಿ ನೀಡಿದೆ ಎಂದು ಕೋಕಾ ಕೋಲಾ ಕಂಪನಿಯ ಇಂಡಿಯಾ ಕಾರ್ಪೊರೇಟ್‌ ಅಫೇರ್ಸ್‌ನ ಉಪಾಧ್ಯಕ್ಷ ಇರ್ಫಾನ್‌ ಖಾನ್‌ ಸ್ಪಷ್ಟನೆ ನೀಡಿದ್ದಾರೆ. ಅವರು ಈ ಕುರಿತ ಸುದ್ದಿ ಪ್ರಕಟಣೆಯನ್ನು ಗುರುವಾರ ಸಂಜೆ ಹೊರಡಿಸಿದ್ದಾರೆ.

ಬಂಡವಾಳ ಆಕರ್ಷಿಸಲು ಅನೇಕ ರಾಜ್ಯಗಳು ಕೈಗಾರಿಕೆಗಳಿಗೆ ಮಾರಾಟ ತೆರಿಗೆ ವಿನಾಯ್ತಿ ನೀಡುವ ಆಕರ್ಷಕ ಕ್ರಮಗಳನ್ನು ಅನುಸರಿಸುತ್ತಿವೆ. ಕರ್ನಾಟಕವೂ ಈ ಕ್ರಮ ಅನುಸರಿಸುತ್ತಿದ್ದು , ಇದರಿಂದಾಗಿ ರಾಜ್ಯದಲ್ಲಿ ಸ್ಥಳೀಯ ಉದ್ಯೋಗಾವಕಾಶ ಹೆಚ್ಚಾಗುತ್ತದೆ. ಬಿಡದಿಯಲ್ಲಿ 110 ಕೋಟಿ ರುಪಾಯಿ ಬಂಡವಾಳ ತೊಡಗಿಸಿರುವ ತಮ್ಮ ಕಂಪನಿಯು ರಾಜ್ಯದ ಆರ್ಥಿಕ ವ್ಯವಸ್ಥೆಗೆ ಹಾಗೂ ಸ್ಥಳೀಯ ಅಭಿವೃದ್ಧಿಗೆ ಕೊಡುಗೆ ಸಲ್ಲಿಸುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.

(ಇನ್ಫೊ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X