ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುಗ್ಗಿ ಕಾಲ ಬಂದೀತವ್ವ ದೋಣಿ ಉಳಿದಾವ ದಂಡ್ಯಾಗ

By Staff
|
Google Oneindia Kannada News

ಉಡುಪಿ : ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ನೂರಕ್ಕೂ ಹೆಚ್ಚು ಮೀನುಗಾರಿಕಾ ದೋಣಿಗಳು ಕೆಲಸವಿಲ್ಲದೆ ನಿಂತಿವೆ. ಕಳೆದ ಐದು ವರ್ಷಗಳಲ್ಲಿ ಕರಾವಳಿಯಲ್ಲಿ ಮೀನುಗಾರಿಕೆ ಕುಸಿಯುತ್ತಿರುವುದು ಸರಕಾರದ ಗಮನಕ್ಕೆ ಬಂದಿದ್ದರೂ ಆ ಸುದ್ದಿಯನ್ನು ಕಿವಿಗೇ ಹಾಕಿ ಕೊಳ್ಳದಿರುವ ಪರಿಣಾಮವಾಗಿ ಈ ವರ್ಷ ಸಮುದ್ರ ದಂಡೆಯ ಗೂಟದಿಂದ ದೋಣಿಗಳ ಹಗ್ಗ ಸಡಿಲವಾಗಿಲ್ಲ.

ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡದ ಕರಾವಳಿ ಪ್ರದೇಶದಲ್ಲಿ ಕಳೆದ ಒಂದು ತಿಂಗಳಿಂದ ಮೀನುಗಾರರು ಸಮುದ್ರ ಪ್ರವೇಶಿಸುವುದು ಸಾಧ್ಯವಾಗಿಲ್ಲ. ರಫ್ತಿಗಾಗಿ ಸಂಗ್ರಹಿಸುವ ಉತ್ತಮ ಗುಣಮಟ್ಟದ ಮೀನು ಕರಾವಳಿ ಪ್ರದೇಶದಲ್ಲಿ ಸಾಕಷ್ಟು ಪ್ರಮಾಣದಲ್ಲಿದ್ದರೂ ಮೀನುಗಾರಿಕೆ ನಡೆಸುವುದಕ್ಕೆ ಸಾಧ್ಯವಾಗಿಲ್ಲ. ಮೀನುಗಾರರ ಉತ್ಸಾಹಕ್ಕೆ ತಣ್ಣೀರೆರಚಿದ್ದು, ರಫ್ತಾಗುತ್ತಿದ್ದ ರಿಬ್ಬನ್‌ ಫಿಶ್‌ನ ಕ್ರಯ ಕೆ.ಜಿ.ಗೆ 12 ರೂಪಾಯಿಯಿಂದ ನಾಲ್ಕುವರೆ ರೂಪಾಯಿಗೆ ಇಳಿದಿರುವುದು ಎಂದು ಕರ್ನಾಟಕ ಕರಾವಳಿ ಮೀನುಗಾರ ಸಂಘಗಳ ಜಂಟಿ ಕ್ರಿಯಾ ಸಮಿತಿಯ ಅಧ್ಯಕ್ಷ ಪ್ರಮೋದ್‌ ಮಧ್ವ ರಾಜ್‌ ಹೇಳುತ್ತಾರೆ.

ಇದರಿಂದಾಗಿ 378 ಆಳ ಸಮುದ್ರ ಮೀನುಗಾರಿಕಾ ದೋಣಿಗಳೂ ಸೇರಿದಂತೆ, 650 ದೋಣಿಗಳು ಮತ್ತು 46 ಪರ್ಷಿಯನ್‌ ಬೋಟ್‌ಗಳು ಮಲ್ಪೆ ಬಂದರಿನಲ್ಲಿ ಸುಮ್ಮನಿವೆ. ಡೀಸೆಲ್‌ ಬೆಲೆ ಏರಿಕೆಯಿಂದಾಗಿ ಬೋಟ್‌ಗಳನ್ನು ಐದು ರಾತ್ರಿ ಹಗಲುಗಳ ಕಾಲ ನಡೆಸಿದ್ದಲ್ಲಿ 25 ಸಾವಿರ ರೂಪಾಯಿ ಖರ್ಚಾಗುತ್ತದೆ. ಆದರೆ ದಡ ಸೇರುವ ಮೀನಿನ ಬೆಲೆ 15ರಿಂದ 20 ಸಾವಿರ ದಾಟುವುದು ಕಷ್ಟ . ಮೀನುಗಾರಿಕೆಯಲ್ಲಿ, ಉಪಕರಣಗಳಿಗೆ ಮತ್ತಿತರ ಚಟುವಟಿಕೆಗಳಿಗೆ ಸರಕಾರ ನೀಡುವ 30 ಶೇಕಡಾ ರಿಯಾಯಿತಿ ಉತ್ತಮ ಯೋಜನೆ ಹೌದು ಆದರೆ, ಆ ಯೋಜನೆಗಳ್ಯಾವುವೂ ಕಾರ್ಯ ರೂಪಕ್ಕೆ ಬಂದಿಲ್ಲ. ಅಲ್ಲದೆ ಸಮುದ್ರ ನೀರು ಕಲುಷಿತಗೊಂಡಿರುವುದೂ ಮೀನುಗಾರಿಕೆ ಹಿಂದುಳಿಯುವುದಕ್ಕೆ ಮುಖ್ಯ ಕಾರಣ. ಎಂದು ಪ್ರಮೋದ್‌ ವಿವರಿಸುತ್ತಾರೆ.

ಇದೇ ಪರಿಸ್ಥಿತಿ ಮುಂದುವರೆದರೆ ...

ಕೇರಳ, ಗುಜರಾತ್‌ ಮತ್ತಿತರ ಕರಾವಳಿ ಪ್ರದೇಶದಲ್ಲಿ ನಿಷೇಧಿತ ಕೈಗಾರಿಕೆಗಳು ಇನ್ನೂ ಮುಚ್ಚದಿರುವುದು ಇನ್ನೊಂದು ಕಾರಣ ಎನ್ನುವ ಪ್ರಮೋದ್‌, ಇದೇ ಪರಿಸ್ಥಿತಿ ಮುಂದುವರೆದಲ್ಲಿ , ಇನ್ನೂ ಮೂರು ಸಾವಿರ ನಾಡದೋಣಿಗಳು ಕೆಲಸ ನಿರ್ವಹಿಸುವುದನ್ನು ನಿಲ್ಲಿಸಿ, ಒಂದು ಲಕ್ಷಕ್ಕೂ ಹೆಚ್ಚು ಮಂದಿ ನಿರುದ್ಯೋಗಿಗಳಾಗುತ್ತಾರೆ ಎಂದು ಭವಿಷ್ಯ ಹೇಳುತ್ತಾರೆ. ಕೇಂದ್ರ ಸರಕಾರವು ಸೀಮೆ ಎಣ್ಣೆಯನ್ನು 120 ಲೀಟರ್‌ನಿಂದ 500 ಲೀಟರ್‌ಗೆ ಹೆಚ್ಚಿಸಿ, ತೆರಿಗೆ ವಿನಾಯಿತಿ ನೀಡಬೇಕು. ಆಗ ಮೀನುಗಾರಿಕೆ ಉದ್ದಾರವಾದೀತು. ಈ ಬಗ್ಗೆ ಸರಕಾರಕ್ಕೆ ಮತ್ತೊಮ್ಮೆ ನೆನಪಿಸಲು ಜನವರಿಯಲ್ಲಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಮತ್ತು ಕೇಂದ್ರ ಸಚಿವರಾದ ನಿತಿಶ್‌ ಕುಮಾರ್‌ ಮತ್ತು ಧನಂಜಯ್‌ ಕುಮಾರ್‌ ಅವರನ್ನು ಜಂಟಿ ಕ್ರಿಯಾ ಸಮಿತಿ ಭೇಟಿ ಮಾಡಿ ಸಮಸ್ಯೆಯ ಬಗ್ಗೆ ಚರ್ಚಿಸಲಿದೆ ಎಂದು ಪ್ರಮೋದ್‌ ತಿಳಿಸಿದರು.

ಬಾಲಂಗೋಚಿ : ಮೀನುಗಾರಿಕೆಗೆ ಸೀಸನ್‌ ಬಂದರೂ ದೋಣಿಗಳು ದಡ ಬಿಟ್ಟಿಲ್ಲ ಅಂದಮೇಲೆ, ಮೀನು ಕರಿಗೆ ಸಂಚಕಾರ, ಬದನೆಕಾಯಿ ಸಾಂಬಾರೇ ಆಹಾರ.

(ಯುಎನ್‌ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X