ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿನಿಮಾದಲ್ಲಿ ನಟಿಸುವ ಸರ್ಕಾರಿ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ

By Staff
|
Google Oneindia Kannada News

ಬೆಂಗಳೂರು : ಇನ್ನು ಮುಂದೆ ರಾಜ್ಯ ಸರಕಾರಿ ಅಧಿಕಾರಿಗಳು ಚಲನಚಿತ್ರಗಳಲ್ಲಿ ನಟಿಸುವುದಾಗಲೀ, ಚಲನಚಿತ್ರಗಳನ್ನು ನಿರ್ಮಿಸುವ ಕಾಯಕದಲ್ಲಾಗಲೀ ತೊಡಗುವಂತಿಲ್ಲ ಎಂದು ಕರ್ನಾಟಕದ ಮುಖ್ಯಕಾರ್ಯದರ್ಶಿ ಭಟ್ಟಾಚಾರ್ಯ ಶುಕ್ರವಾರ ಸೂಚನೆ ನೀಡಿದ್ದಾರೆ.

ರಾಜ್ಯ ಸರಕಾರದ ಪ್ರಧಾನ ಕಾರ್ಯದರ್ಶಿಗಳ, ವಿವಿಧ ಇಲಾಖೆಗಳ ಕಾರ್ಯದರ್ಶಿಗಳ, ಜಿಲ್ಲಾಧಿಕಾರಿಗಳ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಹಾಗೂ ವಿಭಾಗಾಧಿಕಾರಿಗಳ ಸಮ್ಮೇಳನವನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಅವರು, ಶುಕ್ರವಾರ ಬೆಳಗ್ಗೆ ವಿಧಾನಸೌಧದಲ್ಲಿ ಸಮ್ಮೇಳನ ಉದ್ಘಾಟಿಸಿದ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಸಮ್ಮುಖದಲ್ಲೇ ಈ ಆದೇಶ ಪ್ರಕಟಿಸಿದ ಬಿ.ಕೆ. ಭಟ್ಟಾಚಾರ್ಯ ಅವರು, ಪೂರ್ವಾನುಮತಿ ಇಲ್ಲದೆ ಕಿರುತೆರೆ ಅಥವಾ ರಜತಪರದೆಯ ಯಾವುದೇ ಚಟುವಟಿಕೆಯಲ್ಲಿ ತೊಡಗುವ ಅಧಿಕಾರಿಗಳ ವಿರುದ್ಧ ಕಾನೂನಿನ ಕ್ರಮ ಕೈಗೊಳ್ಳಲಾಗುವುದು ಎಂದರು. ಸರಕಾರಿ ಉದ್ಯೋಗದಲ್ಲಿದ್ದೂ ಸಿನಿಮಾದಲ್ಲಿ ನಟಿಸುತ್ತಿರುವ ಅಧಿಕಾರಿಗಳಲ್ಲಿ ಎದ್ದು ಕಾಣುವ ಹೆಸರುಗಳೆಂದರೆ ಬಾ ನಲ್ಲೆ ಮಧುಚಂದ್ರಕೆ ಖ್ಯಾತಿಯ ಶಿವರಾಂ (ಐಎಎಸ್‌) ಹಾಗೂ ಕೌರವ ಖ್ಯಾತಿಯ ಬಿ. ಸಿ. ಪಾಟೀಲ್‌ (ಪೊಲೀಸ್‌ ಅಧಿಕಾರಿ ).

ಸಾಂಸ್ಕೃತಿಕ ಚಟುವಟಿಕೆಗೆ ಅಡ್ಡಿ ಇಲ್ಲ : ಸರಕಾರಿ ನೌಕರರು, ಕತೆ, ಕಾದಂಬರಿ ಬರೆಯುವುದು, ಕಾವ್ಯ ರಚಿಸುವುದು, ನಾಟಕಗಳಲ್ಲಿ ಪಾಲ್ಗೊಳ್ಳುವುದಕ್ಕೆ ಯಾವುದೇ ವಿರೋಧವಿಲ್ಲ. ಆದರೆ, ಟೀವಿ ಸೀರಿಯಲ್‌ಗಳಲ್ಲಿ ಹಾಗೂ ಕಮರ್ಷಿಯಲ್‌ ಚಿತ್ರಗಳಲ್ಲಿ ನಟಿಸುವುದು ಸೂಕ್ತವಲ್ಲ. ಆದರೆ, ಕಲಾತ್ಮಕ ಚಿತ್ರಗಳಲ್ಲಿ ನಟಿಸಲು ಬಯಸಿದರೆ, ಪೂರ್ವಾನುಮತಿ ಪಡೆಯಲೇ ಬೇಕು ಎಂದರು.

ಈ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಕೃಷ್ಣ ಅವರು, ರಾಜ್ಯದಲ್ಲಿ ಆಡಳಿತ ಚುರುಕುಗೊಳಿಸಲು ಕೆಳ ಹಂತದಿಂದಲೇ ಕಾರ್ಯಪ್ರವೃತ್ತರಾಗಬೇಕು. ಆಡಳಿತ ಸುಧಾರಣೆ ಆಯೋಗ ಬಹುತೇಕ ಈ ತಿಂಗಳ ಅಂತ್ಯದಲ್ಲಿ ತನ್ನ ವರದಿ ನೀಡಲಿದ್ದು ಸರಕಾರ ಅದನ್ನು ಪರಿಶೀಲಿಸುವುದು ಎಂದರು.

ಮಾಹಿತಿಯ ಹಕ್ಕು ಮಸೂದೆ ಮತ್ತು ಕಂಪ್ಯೂಟರ್‌ ಅಳವಡಿಕೆಯಿಂದ ರಾಜ್ಯದ ಆಡಳಿತ ಪಾರದರ್ಶಕತೆ ಹೆಚ್ಚಿಸಲು ಉದ್ದೇಶಿಸಲಾಗಿದೆ ಎಂದ ಅವರು, ರಾಜ್ಯದ ಸರ್ವಾಂಗೀಣ ಪ್ರಗತಿಗೆ ಪ್ರಾಮಾಣಿಕವಾಗಿ ದುಡಿಯಲು ಅಧಿಕಾರಿಗಳಿಗೆ ಕರೆ ನೀಡಿದರು.

ಶಾಂತಿ - ಸುವ್ಯವಸ್ಥೆ : ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ಶಾಂತಿ ಹಾಗೂ ಸುವ್ಯವಸ್ಥೆ ಕಾಪಾಡಲು ನೆರವಾಗಬೇಕೆಂದು ಎಲ್ಲ ಅಧಿಕಾರಿಗಳಿಗೆ ಮನವಿ ಮಾಡಿದರು.

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X