Get Updates
Get notified of breaking news, exclusive insights, and must-see stories!

ಸರಣಿ ಜೀವಂತವಾಗುಳಿಸಿದ ರೋಚಕ ಪಂದ್ಯದಲ್ಲಿ ನ ಜಿಂಬಾಬ್ವೆ ಗೆಲುವು

ಜೋಧ್‌ಪುರ್‌ : ಇಲ್ಲಿನ ಬರ್ಕತುಲ್ಲಾ ಖಾನ್‌ ಮೈದಾನದಲ್ಲಿ ಶುಕ್ರವಾರ ನಡೆದ ರೋಮಾಂಚಕಾರಿ ಪಂದ್ಯದಲ್ಲಿ ಇನ್ನೊಂದು ಚೆಂಡು ಬಾಕಿ ಇರುವಂತೆ ಗೆಲುವಿನ ರನ್ನನ್ನು ದಾಖಲಿಸಿದ ಜಿಂಬಾಬ್ವೆ ಸರಣಿಯನ್ನು ಜೀವಂತವಾಗಿರಿಸಿತು.

ಭಾರತದ 283 ರನ್‌ಗಳನ್ನು ಬೆನ್ನತ್ತಿದ ಜಿಂಬಾಬ್ವೆ ಆರಂಭದಲ್ಲಿಯೇ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತು. ನಾಲ್ಕನೇ ವಿಕೆಟ್‌ ಜೊತೆಯಾಟಕ್ಕೆ ಫ್ಲ್ಲಾವರ್‌ ಸೋದರರ 158 ರನ್‌ ಜೊತೆಯಾಟದಿಂದ ಜಿಂಬಾಬ್ವೆ ಗೆಲುವು ಸುಲಭ ಸಾಧ್ಯವಾಗಿದ್ದ ಸಂದರ್ಭದಲ್ಲಿ ಅನಿರೀಕ್ಷಿತ 3 ವಿಕೆಟ್‌ಗಳ ಪತನದಿಂದ ಭಾರತದ ಗೆಲುವಿನ ಆಸೆ ಮತ್ತೆ ಚಿಗುರಿತು. ಆದರೆ, ದಿಟ್ಟ ಆಟ ಪ್ರದರ್ಶಿಸಿದ ಬಾಲಂಗೋಚಿಗಳು ಭಾರತಕ್ಕೆ ಗೆಲುವನ್ನು ನಿರಾಕರಿಸಿದರು. ಅದ್ಭುತ ಆಟವಾಡಿದ ಕಾಲಾ 27 ಚೆಂಡುಗಳಲ್ಲಿ 1 ಸಿಕ್ಸರ್‌(ಜೋಶಿಗೆ) ಹಾಗೂ 4 ಬೌಂಡರಿಗಳಿದ್ದ 36 ರನ್‌ ಚಚ್ಚಿದರೆ, ನಾಯಕ ಹೀತ್‌ಸ್ಟ್ರೀಕ್‌ 17 ಚೆಂಡುಗಳಲ್ಲಿ 23 ರನ್‌ ಗಳಿಸಿದರು. ಇದರಿಂದಾಗಿ ಜಿಂಬಾಬ್ವೆ 49.5 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 284 ರನ್‌ ಗಳಿಸಿತು.

ಕೊನೆಯ ಎರಡು ಓವರುಗಳಲ್ಲಿ ಗೆಲುವಿಗೆ 10 ರನ್‌ಗಳು ಬೇಕಿದ್ದವು. 49 ನೆಯ ಓವರ್‌ನಲ್ಲಿ 7 ರನ್‌ ಗಳಿಸಿದ ಜಿಂಬಾಬ್ವೆ ಕೊನೆಯ ಓವರ್‌ನಲ್ಲಿ ಮೂರು ರನ್ನುಗಳನ್ನು ಸಂಪಾದಿಸುವ ತುರುಸಿನಲ್ಲಿ ಎರಡು ವಿಕೆಟ್‌ ಕಳೆದುಕೊಂಡರೂ, ಅದರ ಗೆಲುವಿಗೆ ಅಡ್ಡಿಯಾಗಲಿಲ್ಲ . ಜಿಂಬಾಬ್ವೆ ಪರ ಆ್ಯಂಡಿ ಫ್ಲವರ್‌ 108 ಚೆಂಡುಗಳಲ್ಲಿ 77 ರನ್‌ ಗಳಿಸಿದರು. ಸೋದರ ಗ್ರ್ಯಾಂಟ್‌ ಫ್ಲಾವರ್‌ 94 ಎಸೆತಗಳಲ್ಲಿ 70 ರನ್‌ ಗಳಿಸಿದರು. ಭಾರತದ ಪರ ಪ್ರಸಾದ್‌ 3 ವಿಕೆಟ್‌ ಪಡೆದರೆ, ಜಹೀರ್‌, ಜೋಶಿ, ತೆಂಡೂಲ್ಕರ್‌ ಹಾಗೂ ಅಗರ್ಕರ್‌ ತಲಾ 1 ವಿಕೆಟ್‌ ಗಳಿಸಿದರು.

ಇದಕ್ಕೆ ಮೊದಲು ಸಚಿನ್‌ ತೆಂಡೂಲ್ಕರ್‌ ತಮ್ಮ 27 ನೇ ಶತಕ ಸಿಡಿಸಿದರು. ಅವರ ಅಮೋಘ 146 (153 ಎಸೆತ, 15 ಬೌಂಡರಿ,2 ಸಿಕ್ಸರ್‌) ರನ್‌ಗಳ ನೆರವಿನಿಂದ ಭಾರತ ಉತ್ತಮ ಎನ್ನುವ ಮೊತ್ತ ಸಂಪಾದಿಸಲು ಸಾಧ್ಯವಾಯಿತು. ಕೊನೆಯ ಓವರ್‌ನಲ್ಲಿ ಜಹೀರ್‌ಖಾನ್‌ ಸಿಡಿಸಿದ 4 ಅದ್ಭುತ ಸಿಕ್ಸರ್‌ಗಳು ತಂಡದ ಮೊತ್ತವನ್ನು ಉಬ್ಬಿಸಿದವು. ಉಳಿದಂತೆ ಭಾರತದ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ವಿಫಲರಾದರು. ದ್ರಾವಿಡ್‌ 30 ಗಳಿಸಿದರೆ, ಗಂಗೂಲಿ ಗಳಿಸಿದ್ದು 5ರನ್‌ ಮಾತ್ರ. ಭರವಸೆಯ ಯುವ ಆಟಗಾರ ಬದಾನಿ 1 ರನ್‌ ಗಳಿಸಿದರೆ, ಯುವರಾಜ್‌ 5 ರನ್‌ ಗಳಿಸಿದರು. ಪಿಂಚ್‌ ಹಿಟ್ಟರ್‌ ಜೋಶಿ 24 ಚೆಂಡುಗಳಲ್ಲಿ 25 ರನ್‌ ಗಳಿಸಿದರು. ಜಿಂಬಾಬ್ವೆ ಪರ ಜಿ. ಫ್ಲಾವರ್‌ 3 ವಿಕೆಟ್‌ ಗಳಿಸಿ ಯಶಸ್ವಿ ಬೌಲರ್‌ ಎನಿಸಿದರು.

ಆಲ್‌ರೌಂಡ್‌ ಪ್ರದರ್ಶನ ನೀಡಿದ ಗ್ರ್ಯಾಂಟ್‌ ಫ್ಲಾವರ್‌ ಪಂದ್ಯದ ಪುರುಷೋತ್ತಮ ಪ್ರಶಸ್ತಿ ಗಿಟ್ಟಿಸಿದರು. ಮುಂದಿನ ಪಂದ್ಯಗಳು ಡಿಸೆಂಬರ್‌ 11 ರಂದು ಕಾನ್ಪುರ್‌ನಲ್ಲಿ ಹಾಗೂ ಡಿ.14 ರಂದು ರಾಜ್‌ಕೋಟ್‌ನಲ್ಲಿ ನಡೆಯಲಿದೆ.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+