ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನಲ್ಲಿ ಭರದಿಂದ ನಡೆಯುತ್ತಿರುವ ಆಪ್ಟಿಕ್‌ ಫೈಬರ್‌ ಜೋಡಣೆ

By Staff
|
Google Oneindia Kannada News

ಬೆಂಗಳೂರು : 2001ರ ಆಗಸ್ಟ್‌ ತಿಂಗಳಿನೊಳಗೆ ಸೆಲ್ಯುಲರ್‌ ದೂರವಾಣಿ ಸೌಲಭ್ಯವನ್ನು ತನ್ನ ಗ್ರಾಹಕರಿಗೆ ಒದಗಿಸಲು ಭಾರತ್‌ ಸಂಚಾರ ನಿಗಮ ಕಾರ್ಯೋನ್ಮುಖವಾಗಿದೆ. ಖಾಸಗಿ ಸೆಲ್ಯುಲರ್‌ ದೂರವಾಣಿ ಸಂಸ್ಥೆಗಳ ದರಕ್ಕಿಂತಲೂ ಸುಲಭವಾದ ದರದಲ್ಲಿ ಗ್ರಾಹಕರಿಗೆ ಅನುಕೂಲ ಒದಗಿಸಲು ತಾನೂ ಮೊಬೈಲ್‌ ಸೇವಾ ಕ್ಷೇತ್ರಕ್ಕೆ ಧುಮುಕಲು ಸಂಸ್ಥೆ ನಿರ್ಧರಿಸಿದೆ.

ರಾಜ್ಯದ ನಾನಾ ಕಾರ್ಯಕ್ರಮಗಳಲ್ಲಿ ಕರ್ನಾಟಕ ದೂರ ಸಂಪರ್ಕ ವಲಯದ ಮುಖ್ಯ ಮಹಾಪ್ರಬಂಧಕ ಟಿ. ರಾಮಮೂರ್ತಿ ಅವರು, ಈ ವಿಷಯವನ್ನು ಪ್ರಕಟಿಸಿದ್ದಾರೆ. ಇದಕ್ಕೆ ಪೂರಕವಾಗಿ ಬೆಂಗಳೂರು ನಗರದಲ್ಲಿ ಮೊಬೈಲ್‌ ಫೋನ್‌ ಸೇವೆಗೆ ಅಗತ್ಯವಾದ ಕೇಬಲ್‌ ಮಾರ್ಗಗಳ ಜೋಡಣೆಯ ಪೂರ್ವಭಾವಿ ಸಿದ್ಧತೆಗಳು ನಡೆದಿವೆ.

ಬೆಂಗಳೂರಿನ ಪ್ರಮುಖ ಬಡಾವಣೆಗಳಲ್ಲಿ ನೆಲವನ್ನು ತೋಡಿ, ಪಿ.ವಿ.ಸಿ. (ಆಪ್ಟಿಕ್‌ ಫೈಬರ್‌) ಕೊಳವೆ ಸುರಳಿಗಳನ್ನು ಅಳವಡಿಸುವ ಕಾರ್ಯ ನಡೆದಿದೆ. ಇದಕ್ಕಾಗಿ ಟೆಂಡರ್‌ ಕರೆದು ಪ್ರತಿಷ್ಠಿತ ಸಂಸ್ಥೆಗಳಿಗೆ ಗುತ್ತಿಗೆ ನೀಡಲಾಗಿದೆ. ಗುತ್ತಿಗೆ ಪಡೆದಿರುವ ಸಂಸ್ಥೆಗಳು ತುಂಡು ಗುತ್ತಿಗೆ ನೀಡಿ ಕೊಳವೆ ಪೈಪ್‌ಗಳ ಜೋಡಣೆಕಾರ್ಯದಲ್ಲಿ ತೊಡಗಿವೆ.

ಒಂದು ಮೀಟರ್‌ ಉದ್ದದ ಗುಳಿ ತೆಗೆಯಲು 70 ರುಪಾಯಿ ನೀಡುತ್ತಾರೆ ಎಂದು ಚಂದ್ರಶೇಖರ್‌ ಎಂಬ ಗುತ್ತಿಗೆದಾರರ ಬಳಿ ಒಂದೂವರೆ ತಿಂಗಳಿನಿಂದ ಬಿಟಿಎಂ ಲೇಔಟ್‌ನಲ್ಲಿ ಕೆಲಸ ಮಾಡುತ್ತಿರುವ ಮೇಸ್ತ್ರಿ ವೆಂಕಟರಾಮ್‌ ಹೇಳುತ್ತಾರೆ. ಈಗ ಕೇವಲ 6 ಕೊಳವೆಗಳನ್ನು ಮಾತ್ರ ಬಳಸುತ್ತಾರೆ, ಆದರೂ ನಮಗೆ 12 ಪೈಪ್‌ ಹಾಕಲು ತಿಳಿಸಿದ್ದಾರೆ ಎನ್ನುವ ಅವರು, ಮೆಟೀರಿಯಲ್‌ ಸರಿಯಾಗಿ ಬಂದರೆ, ಇಷ್ಟು ಹೊತ್ತಿಗೆ ಇನ್ನೂ ಹೆಚ್ಚು ಕೆಲಸ ಆಗುತ್ತಿತ್ತೆಂದರು.

ಬೆಂಗಳೂರಿನಾದ್ಯಂತ ಸಮರೋಪಾದಿಯಲ್ಲಿ ಕೊಳವೆ ಅಳವಡಿಕೆ ಕಾರ್ಯ ನಡೆಯುತ್ತಿದೆ. ಪದೇ ಪದೇ ರಸ್ತೆಗಳನ್ನು ಅಗೆದು ಹಾಳು ಮಾಡಬಾರದು ಎಂಬ ಮುಂದಾಲೋಚನೆಯೂ ಈ ಬಾರಿ ಪ್ರಾಮುಖ್ಯತೆ ಪಡೆದಿದೆ. ಈ ನಿಟ್ಟಿನಲ್ಲಿ ರಸ್ತೆಯಂಚಿನ ಪಾದಚಾರಿ ರಸ್ತೆಗಳಲ್ಲಿ ಅಳವಡಿಸಲಾಗುತ್ತಿರುವ ಸುರುಳಿ ಪೈಪ್‌ಗಳ ಸಂಖ್ಯೆ 12. ರಸ್ತೆಯಂಚಿನಲ್ಲಿ ತೋಡಲಾಗಿರುವ ಕಾಲುವೆಗಳಲ್ಲಿ 12 ಕೊಳವೆ ಮಾರ್ಗಗಳನ್ನು ಹಾಕಲಾಗುತ್ತಿದೆ. ಪ್ರತಿ 200 ಮೀಟರ್‌ಗೆ ಒಂದು ಛೇಂಬರ್‌ ಕಟ್ಟಲಾಗಿದೆ.

ಈ ಛೇಂಬರ್‌ಗಳ ಮೂಲಕ ಕೊಳವೆ ಜೋಡಣೆ ಕಾರ್ಯ ಮುಗಿದ ಬಳಿಕ ಕೇಬಲ್‌ಗಳನ್ನು ಅಳವಡಿಸಲಾಗುತ್ತದೆ. ಮೊಬೈಲ್‌ ಫೋನ್‌ಗೆ ಅಗತ್ಯವಾದ ಕೇಬಲ್‌ ಅಳವಡಿಸಿದ ನಂತರವೂ ಇಲ್ಲಿ ಕೆಲವು ಕೊಳವೆಗಳು ಖಾಲಿ ಉಳಿಯುತ್ತವೆ. ವಿಸ್ತರಣೆ ಅಥವಾ ಅತ್ಯಾಧುನಿಕ ಹಾಗೂ ಹೆಚ್ಚಿನ ಸಾಮರ್ಥ್ಯದ ಕೇಬಲ್‌ ಹಾಕುವಾಗ ಖಾಲಿ ಉಳಿದಿರುವ ಕೊಳವೆಗಳನ್ನು ಬಳಸಿಕೊಳ್ಳುವುದು ಉದ್ದೇಶವಾಗಿದೆ.

ಅಡ್ಡರಸ್ತೆಗಳು ಬರುವ ಕಡೆಗಳಲ್ಲಿ ಸಿಮೆಂಟ್‌ ಪೈಪ್‌ಗಳನ್ನು ಹಾಕಿ ಆ ಪೈಪ್‌ಗಳ ಒಳಗೆ ಸುರುಳಿ ಪೈಪ್‌ ಅಳವಡಿಸಲಾಗಿದೆ. ಇದರಿಂದ ಪೈಪ್‌ಗಳು ಒಡೆಯದಂತೆ ಎಚ್ಚರ ವಹಿಸಲಾಗಿದೆ. ಪೈಪ್‌ಗಳ ಮೇಲೆ ಕಡಪಾ ಕಲ್ಲುಗಳನ್ನು ಕೆಲವೆಡೆ ಹಾಕಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಯಾವುದೇ ತೊಂದರೆ ಆಗದಂತೆ ಎಚ್ಚರಿಕೆ ವಹಿಸಲಾಗಿದೆ.

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X