ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಂಡಮಾರುತ: ತಮಿಳುನಾಡಿನಲ್ಲಿ ಆರು,ಪಾಂಡಿಚೇರಿಯಲ್ಲಿ ಒಬ್ಬ ಬಲಿ

By Staff
|
Google Oneindia Kannada News

ಚನ್ನೈ: ಚಂಡಮಾರುತಕ್ಕೆ ತಮಿಳುನಾಡಿನಲ್ಲಿ ಆರು ಮಂದಿ ಬಲಿಯಾಗಿದ್ದಾರೆ. ತೀರಪ್ರದೇಶದಲ್ಲಿ ಚಂಡಮಾರುತ ಹಾದು ಹೋದ ಸಂದರ್ಭದಲ್ಲಿ ಕನಿಷ್ಠ 48 ಮೀನುಗಾರರು ಕಾಣೆಯಾಗಿದ್ದಾರೆ ಎಂದು ಮೀನುಗಾರಿಕೆ ನಿರ್ದೇಶನಾಲಯದ ಅಧಿಕೃತ ಮೂಲಗಳು ತಿಳಿಸಿವೆ. ಸಾವಿರಾರು ಎಕರೆ ಪ್ರದೇಶದ ಭತ್ತದ ಬೆಳೆ ನೆಲ ಕಚ್ಚಿದ್ದು, ಅನೇಕ ಮರಗಳು ಮತ್ತು ನೂರಾರು ವಿದ್ಯುತ್‌ ಕಂಬಗಳು ಉರುಳಿ ಬಿದ್ದಿವೆ. ತಂಜಾವೂರಿನಲ್ಲಿ ಇಬ್ಬರು ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದಾರೆ. ನಾಗಪಟ್ಟಣ, ತಿರುವಾಯೂರುಗಳಲ್ಲಿ ತಲಾ ಒಬ್ಬರು ಚಂಡಮಾರುತಕ್ಕೆ ಬಲಿಯಾಗಿದ್ದಾರೆ. ಗೋಡೆ ಕುಸಿದು ವೃದ್ಧ ಮಹಿಳೆಯಾಬ್ಬರು ಮೃತಪಟ್ಟಿದ್ದಾರೆ. ಸಿರ್ಕಾಲಿ ಮತ್ತು ಪಾಪನಾಸಂ ಪ್ರದೇಶಗಳಲ್ಲಿ ಸಾವಿರಾರು ಎಕರೆ ಪ್ರದೇಶದ ಭತ್ತದ ಬೆಳೆ ನೀರಿನಲ್ಲಿ ಮುಳುಗಡೆಯಾಗಿದೆ. ಮರಗಳು ಬಿದ್ದಿರುವ ರಸ್ತೆಗಳನ್ನು ತೆರವುಗೊಳಿಸುವ ಕೆಲಸ ಭರದಿಂದ ಸಾಗುತ್ತಿದೆ.

ಕೊಲ್ಲೇರಾನ್‌ನಲ್ಲಿ 235 ಮಿಲಿ ಮೀಟರ್‌, ಸಿರ್ಕಾಲಿಯಲ್ಲಿ 201 ಮಿಲಿ ಮೀಟರ್‌ ಹಾಗೂ ನಾಗಪಟ್ಟಣಂನಲ್ಲಿ 87 ಮಿಲೀಮೀಟರ್‌ ಮಳೆಯಾಗಿದೆ. ಕುಡಲೂರು ಮೂಲಕ ಗಂಟೆಗೆ 180 ಕಿಲೋಮೀಟರ್‌ ವೇಗದಲ್ಲಿ ಹಾದು ಹೋದ ಚಂಡಮಾರುತ ಭಾರೀ ಮಳೆಗೆ ಕಾರಣವಾಗಿದೆ. ಚೆನ್ನೈ ಸೇರಿದಂತೆ ತೀರಪ್ರದೇಶದ ಅನೇಕ ಸ್ಥಳಗಳಲ್ಲಿ ಇನ್ನೂ ಮಳೆ ಸುರಿಯುತ್ತಲೇ ಇದೆ. ಜನರು ಎತ್ತರದ ಸ್ಥಳಗಳಿಗೆ ತೆರಳುತ್ತಿದ್ದಾರೆ. ಕೆಲವು ಪ್ರದೇಶಗಳಲ್ಲಿ ಆಹಾರ ಸರಬರಾಜು ಮಾಡಲಾಗುತ್ತಿದೆ.

ಪಾಂಡಿಚೇರಿ ವರದಿ: ಬುಧವಾರ ಸಂಜೆ ತಮಿಳುನಾಡಿನ ಕುಡಲೂರುನ್ನು ಹಾದು ಹೋಗಿರುವ ಚಂಡಮಾರುತ ಪಾಂಡಿಚೇರಿಯ ಇಡೀ ಪ್ರದೇಶದ ಜನಜೀವನದ ಅಸ್ತವ್ಯಸ್ತಕ್ಕೆ ಕಾರಣವಾಗಿದೆಯಲ್ಲದೆ ಒಬ್ಬನನ್ನು ಬಲಿ ತೆಗೆದುಕೊಂಡಿದೆ.

ಈ ಪ್ರದೇಶದಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಅನೇಕ ಜನರು ಗಾಯಗೊಂಡಿದ್ದಾರೆ. ಚಂಡಮಾರುತದಿಂದ ಹಾನಿಗೊಳಗಾದ ಪ್ರದೇಶಗಳಿಗೆ ಮುಖ್ಯಮಂತ್ರಿ ಪಿ. ಷಣ್ಮುಗಂ ಗುರುವಾರ ಭೇಟಿ ನೀಡಿದ್ದಾರೆ. ಸುರಿದ ಮಳೆ ಮತ್ತು ಬಿರುಗಾಳಿಗೆ ಅನೇಕ ಮರಗಳು ಉರುಳಿದ್ದು ರಸ್ತೆ ಮತ್ತು ರೈಲು ಸಂಚಾರ ಅಸ್ತವ್ಯಸ್ತಗೊಂಡಿದೆ. ರಸ್ತೆ ಮತ್ತು ರೈಲು ಹಳಿಗಳ ಮೇಲೆ ಬಿದ್ದಿರುವ ಮರಗಳನ್ನು ತೆಗೆಯುವ ಕಾರ್ಯ ಭರದಿಂದ ಸಾಗುತ್ತಿದೆ. ಗುರುವಾರ ಸಂಜೆಯಿಂದ ರೈಲು ಸಂಚಾರ ಪುನಾರಂಭಗೊಳ್ಳುವ ನಿರೀಕ್ಷೆ ಇದೆ. ಗ್ರಾಮೀಣ ಪ್ರದೇಶಗಳಲ್ಲಿ ನೀರು ಸರಭರಾಜು ಸಂಪೂರ್ಣ ನಿಂತು ಹೋಗಿದೆ.

ಹೈದರಾಬಾದ್‌ ವರದಿ : ಚಂಡಮಾರುತದಿಂದ ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ರಾಯಲಸೀಮೆ ಭಾಗದ ಅನೇಕ ಪ್ರದೇಶಗಳಲ್ಲಿ ವ್ಯಾಪಕ ಹಾನಿಯಾಗಿದೆ. ತಮಿಳುನಾಡಿನ ತೀರಪ್ರದೇಶಗಳನ್ನು ದಾಟಿದ ನಂತರ ದುರ್ಬಲಗೊಂಡಿರುವ ಚಂಡಮಾರುತದಿಂದ ರಾಜ್ಯದ ಇತರ ಭಾಗಗಳಲ್ಲಿಯೂ ಮಳೆಯಾಗಿದೆ. ತೆಲಂಗಾಣ ಸೇರಿದಂತೆ ಇತರ ತೀರಪ್ರದೇಶಗಳಲ್ಲಿ ಮುಂದಿನ 48 ಗಂಟೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ.

ಮೈಸೂರು ವರದಿ : ಬುಧವಾರ ರಾತ್ರಿಯಿಂದ ಮೈಸೂರು ಹಾಗು ಸುತ್ತಮುತ್ತಲಿನ ಪ್ರದೇಶದಲ್ಲಿ ಭಾರೀ ಮಳೆ ಸುರಿಯುತ್ತಿದೆ. ಕೆಳ ಹಂತದ ಪ್ರದೇಶಗಳಲ್ಲಿ ನೀರು ನಿಂತಿದೆ. ಕೊಳಚೆ ಪ್ರದೇಶಗಳಲ್ಲಿ ವಾಸಿಸುವ ಜನರು ಹೆಚ್ಚು ತೊಂದರೆಗೊಳಗಾಗಿದ್ದಾರೆ. ಬಂಗಾಳ ಕೊಲ್ಲಿಯಲ್ಲಿ ಆಗಿರುವ ವಾಯುಭಾರ ಕುಸಿತದಿಂದ ಈ ಅಕಾಲಿಕ ಮಳೆ ಸುರಿಯುತ್ತಿದೆ ಎಂದು ಹವಾಮಾನ ಇಲಾಖೆ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X