ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೇತರಿಸಿಕೊಂಡ ಅಡಿಕೆ ಮಾರುಕಟ್ಟೆ : ರೈತರ ಮುಖದಲ್ಲಿ ಕಿರುನಗೆ

By Staff
|
Google Oneindia Kannada News

ಮಂಗಳೂರು : ದೀಪಾವಳಿ ಸಂದರ್ಭದಲ್ಲಿ ನಿರೀಕ್ಷೆಯನ್ನು ಹುಸಿ ಮಾಡಿದರೂ ತುಳಸೀ ಪೂಜೆಯ ಸಂದರ್ಭದಲ್ಲಿ ಅಡಿಕೆ ಮಾರುಕಟ್ಟೆ ಕೊಂಚ ಚೇತರಿಸಿಕೊಂಡಿದೆ. ಈ ಬೆಳವಣಿಗೆ ತೀರಾ ಹತಾಶ ಸ್ಥಿತಿಯಲ್ಲಿದ್ದ ಅಡಿಕೆ ಬೆಳೆಗಾರರ ಮುಖದಲ್ಲಿ ಕಿರುನಗು ಮೂಡಿಸಿದೆ.

ಕಳೆದ ವರ್ಷ ದೀಪಾವಳಿ ಸಂದರ್ಭದಲ್ಲಿ ಅಡಿಕೆ ಬೆಲೆ ಕೆಜಿಯಾಂದಕ್ಕೆ 150ರಿಂದ 180 ರೂಗಳಷ್ಟಿದ್ದರೆ ಈ ಬಾರಿಯ ದೀಪಾವಳಿ ಸಂದರ್ಭದಲ್ಲಿ ಅಡಿಕೆ ದರ 50 ರೂಪಾಯಿ ಆಗಿತ್ತು. ಅಡಿಕೆ ಬೆಳೆಗಾರರ ಹಿತರಕ್ಷಕ ಸಂಸ್ಥೆಯಾಗಿರುವ ಕ್ಯಾಂಪ್ಕೋದ ಅಧಿಕಾರಿಗಳು ದೀಪಾವಳಿ ಸಂದರ್ಭದಲ್ಲಿ ಅಡಿಕೆ ಧಾರಣೆ ಚೇತರಿಸಿಕೊಳ್ಳಬಹುದೆಂಬ ನಿರೀಕ್ಷೆ ಹೊಂದಿದ್ದರೂ ಅದು ಈಡೇರಲಿಲ್ಲ. ಅಕ್ಟೋಬರ್‌ ಅಂತ್ಯಕ್ಕೆ 50 ರೂಪಾಯಿಗಳಿದ್ದ ಅಡಿಕೆ ಧಾರಣೆ ನವೆಂಬರ್‌ ಎರಡನೆ ವಾರದಲ್ಲಿ ರೂಪಾಯಿ 70- 80ಕ್ಕೇರಿದೆ. ಅಡಿಕೆ ವಹಿವಾಟಿನಲ್ಲಿ ಪ್ರಮುಖ ಪಾತ್ರ ವಹಿಸಿರುವ ಖಾಸಗಿ ವಲಯದ ವ್ಯಾಪಾರಸ್ಥರು ಅಡಿಕೆ ಖರೀದಿಯನ್ನು ಪುನರಾರಂಭಿಸಿದ್ದಾರೆ. ಅಕ್ಟೋಬರ್‌ನಲ್ಲಿ ಇವರೆಲ್ಲ ಅಡಿಕೆ ಖರೀದಿಯನ್ನು ಸ್ಥಗಿತ ಗೊಳಿಸಿದ್ದರು. ಇದರಿಂದ ಅಡಿಕೆ ವಹಿವಾಟಿನ ಪ್ರಮುಖ ಕೇಂದ್ರವಾಗಿರುವ ಪುತ್ತೂರು ಪೇಟೆಯಲ್ಲಿ ನೀರಸ ವಾತಾವರಣ ಇತ್ತು.

ದರ ಕುಸಿತದಿಂದಾಗಿ ಅಡಿಕೆ ಬೆಳೆಗಾರರಿಗೆ ಈ ಬಾರಿ ದೀಪಾವಳಿ ಹಿಂದಿನ ದೀಪಾವಳಿಗಳಷ್ಟು ಹರ್ಷದಾಯಕವಾಗಿರಲಿಲ್ಲ. 1995ರಲ್ಲಿ ಅಡಿಕೆಗೆ ಕೆಜಿಗೆ 50 ರೂಪಾಯಿ ಧಾರಣೆಯಿತ್ತು. 2000ನೇ ವರ್ಷದಲ್ಲಿ ಮತ್ತೆ ಅದೇ ಧಾರಣೆಗೆ ಅಡಿಕೆ ದರ ಇಳಿದುದರಿಂದ ರೈತರು ಸಾಲ ತೀರಿಸುವುದು ಹೇಗೆಂಬ ಚಿಂತೆಯಲ್ಲಿದ್ದರು.

ಇತ್ತ ಕ್ಯಾಂಪ್ಕೋ ಕೂಡ ಅಡಿಕೆ ಬೆಳೆಯುವ ಪ್ರದೇಶಗಳ ಶಾಸಕರು, ಜನಪ್ರತಿನಿಧಿಗಳು, ರೈತ ಪ್ರತಿನಿಧಿಗಳ ಸಭೆ ಚರ್ಚಿಸಿದ್ದಲ್ಲದೆ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಅಡಿಕೆ ಬೆಳೆಗಾರರ ಸಂಕಷ್ಟದ ಬಗ್ಗೆ ಮಾಹಿತಿ ನೀಡಿತ್ತು. ಅಡಿಕೆ ಬೆಳೆಗಾರರ ಸಮಸ್ಯೆಯ ಬಗ್ಗೆ ಸಂಬಂಧಿತರ ಗಮನ ಸೆಳೆಯಲು ಅಡಿಕೆ ಬೆಳೆಗಾರರ ಹಿತರಕ್ಷಣಾ ವೇದಿಕೆ ಕೂಡ ಅಸ್ತಿತ್ವಕ್ಕೆ ಬಂದಿದೆ.

ಅಡಿಕೆ ಮೇಲೆ ವಿಧಿಸುತ್ತಿರುವ ಶೇ 4 ಮಾರಾಟ ತೆರಿಗೆ, ಮಾರುಕಟ್ಟೆ ಶುಲ್ಕ ವಹಿವಾಟು ತೆರಿಗೆಯನ್ನು ಪರಿಸ್ಥಿತಿ ಸುಧಾರಿಸುವತನಕ ಅಮಾನತುಗೊಳಿಸಬೇಕು. ಅಡಿಕೆಗೆ ಕಿಲೋ ಒಂದಕ್ಕೆ ಕನಿಷ್ಠ 100 ರೂಪಾಯಿ ಸಿಗುವಂತೆ ಬೆಂಬಲ ಬೆಲೆ ಘೋಷಿಸಬೇಕು. ಅಡಿಕೆ ಮಾರುಕಟ್ಟೆ ಸ್ಥಿರೀಕರಣಕ್ಕಾಗಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಿಂದ 100 ಕೋಟಿ ಹಣವನ್ನು ಕ್ಯಾಂಪ್ಕೋ ಬಿಡುಗಡೆ ಮಾಡಬೇಕು ಎಂದು ವೇದಿಕೆ ಆಗ್ರಹಿಸಿದೆ.

ಈ ಒತ್ತಾಯ ಆಗ್ರಹಗಳ ನಡುವೆಯೇ ಅಡಿಕೆ ಧಾರಣೆ ಆಶಾದಾಯಕವೆನ್ನುವಂತೆ ಸ್ವಲ್ಪ ಮಟ್ಟಿಗೆ ಚೇತರಿಕೆ ಕಂಡಿದೆ. ವಿಶ್ವ ವ್ಯಾಪಾರ ಸಂಘಟನೆಯಿಂದಾಗಿ ದೇಶದೊಳಗೆ 9 ಸಾವಿರ ಟನ್‌ ಅಡಿಕೆ ಬಂದಿದೆ ಎನ್ನುತ್ತವೆ ಅಧಿಕೃತ ಮೂಲಗಳು. ವಿಶ್ವ ಅಡಿಕೆ ಕಳ್ಳಸಾಗಾಣಿಕೆ ಮೂಲಕ ಹೊರಗಿನಿಂದ ದೇಶದೊಳಗೆ ಬರುತ್ತಿದೆ. ಇದರಿಂದಾಗಿ ಶೇ 111 ರಷ್ಟು ತೆರಿಗೆ ಹಾಕಿದರೂ ಪ್ರಯೋಜನ ಕಾಣುತ್ತಿಲ್ಲ ಎಂಬುದು ಮಾರುಕಟ್ಟೆ ಕುಸಿತದಿಂದ ಆತಂಕಗೊಂಡಿರುವ ದೂರು. ಇದಲ್ಲದೆ ಅಡಿಕೆಯನ್ನು ಡ್ರೆೃ ಪ್ರುಟ್‌ ಎಂಬ ಹಣೆ ಪಟ್ಟಿ ಕಟ್ಟಿ ಆಮದು ಮಾಡಲಾಗುತ್ತಿದೆ ಎಂಬ ಮತ್ತೊಂದು ಆರೋಪವಿದೆ.

ಅಡಿಕೆ ಕೃಷಿಯ ಹೆಚ್ಚಳ, ಉತ್ಪಾದನೆಯ ಹೆಚ್ಚಳ, ಬೇಡಿಕೆ ಕುಸಿತಗಳಿಂದ ಅಡಿಕೆ ಧಾರಣೆ ಮೇಲೆ ಪರಿಣಾಮವಾಗಿದೆ ಎನ್ನಲಾಗುತ್ತಿದೆ. ಅಡಿಕೆ ಮಾರುಕಟ್ಟೆಯನ್ನು ನಿಯಂತ್ರಿಸುವ ಶಕ್ತಿಗಳು ಅಡಿಕೆ ಖರೀದಿಗೆ ಹೆಚ್ಚು ಹಣ ಹೂಡಲು ಹಿಂದೇಟು ಹಾಕುತ್ತಿರುವುದರಿಂದ ಅಡಿಕೆ ಧಾರಣೆ ನಿರೀಕ್ಷಿತ ರೀತಿಯಲ್ಲಿ ಚೇತರಿಸಿಕೊಳ್ಳುತ್ತಿಲ್ಲ ಎನ್ನುತ್ತಾರೆ ಕ್ಯಾಂಪ್ಕೋ ಅಧಿಕಾರಿಗಳು.

(ಮಂಗಳೂರು ಪ್ರತಿನಿಧಿಯಿಂದ)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X