ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೃಷ್ಣಾ ಮೇಲ್ದಂಡೆ ಯೋಜನೆ ಪೂರೈಸಲು ಅವಧಿ ಕಡಿತ

By Staff
|
Google Oneindia Kannada News

ಬೆಂಗಳೂರು : ಉದ್ದೇಶಿತ ಕೃಷ್ಣಾ ಮೇಲ್ದಂಡೆ ಯೋಜನೆಯನ್ನು 2002ನೇ ಇಸವಿ ಮೇ ತಿಂಗಳೊಳಗೆ ಮುಗಿಸಲು ನಿರ್ಧರಿಸಲಾಗಿದೆ ಎಂದು ಬೃಹತ್‌ ಮತ್ತು ಮಧ್ಯಮ ನೀರಾವರಿ ಸಚಿವ ಎಚ್‌. ಕೆ. ಪಾಟೀಲ್‌ ಗುರುವಾರ ವಿಧಾನ ಪರಿಷತ್‌ನಲ್ಲಿ ತಿಳಿಸಿದ್ದಾರೆ.

ಈ ಮೊದಲು ಯೋಜನಾ ಗುರಿಯನ್ನು ಮಾರ್ಚ್‌ 2003ಕ್ಕೆ ಮುಗಿಸಲು ನಿಗಧಿಪಡಿಸಲಾಗಿತ್ತು ಎಂದು ಪ್ರಶ್ನೋತ್ತರ ವೇಳೆಯಲ್ಲಿ ಯೋಜನೆ ಕುರಿತ ಪ್ರಶ್ನೆಗಳಿಗೆ ಅವರು ಉತ್ತರಿಸುತ್ತಿದ್ದರು. ಬಚಾವತ್‌ ವರದಿಯ ಎ ಸ್ಕೀಂನಲ್ಲಿ 6ಲಕ್ಷ 22 ಸಾವಿರದ 23 ಹೆಕ್ಟೇರು ಭೂಮಿಗೆ ನೀರಾವರಿ ಸೌಲಭ್ಯ ದೊರೆಯಲಿದೆ. ಇದಕ್ಕಾಗಿ ಸರಕಾರ 5940 ಕೋಟಿ ರುಪಾಯಿಗಳನ್ನು ತೆಗೆದಿರಿಸಿದೆ ಎಂದು ಸಚಿವರು ತಿಳಿಸಿದ್ದಾರೆ. ಬಾಕಿ ಇರುವ ಕಾಮಗಾರಿಗೆ ತೆಗೆದಿರಿಸಲಾಗಿದ್ದ ಹಣಕ್ಕಿಂತ ಕಡಿಮೆ ಹಣ ಖರ್ಚಾಗಲಿದೆ ಏಕೆಂದರೆ ಗುತ್ತಿಗೆದಾರರು ತೆಗೆದಿರಿಸಿದ ಹಣಕ್ಕಿಂತ ಕಡಿಮೆ ಮೊತ್ತಕ್ಕೆ ಟೆಂಡರ್‌ ಸಲ್ಲಿಸಿದ್ದಾರೆ. ಯೋಜನೆಗೆ ಹಣದ ಕೊರತೆ ಇಲ್ಲ ಎಂದು ತಿಳಿಸಿರುವ ಅವರು ಅಗತ್ಯ ಬಿದ್ದರೆ ಕೃಷ್ಣಾ ಭಾಗ್ಯ ಜಲ ನಿಗಮ ಮತ್ತು ನೀರಾವರಿ ನಿಗಮಗಳು ಮೂಲಕ ಹಣ ಸಂಗ್ರಹಿಸಲಾಗುವುದು ಎಂದು ತಿಳಿಸಿದ್ದಾರೆ.

ಕೆರೆಗಳ ದುರಸ್ತಿ : ನೆರೆ ಹಾವಳಿಯಿಂದ ಹಾನಿಗೊಳಗಾಗಿರುವ ಕೆರೆಗಳ ದುರಸ್ತಿ ಬಗ್ಗೆ ಸರಕಾರ ಗಂಭೀರವಾಗಿ ಪರಿಶೀಲಿಸುತ್ತಿದೆ ಎಂದು ಸಣ್ಣ ನೀರಾವರಿ ಸಚಿವ ಕುಮಾರ್‌ ಬಂಗಾರಪ್ಪ ವಿಧಾನಪರಿಷತ್ತಿನಲ್ಲಿ ತಿಳಿಸಿದ್ದಾರೆ.

ರಾಜ್ಯದ ಅನೇಕ ಭಾಗಗಳಲ್ಲಿ ಕೆರೆಗಳು ಒಡೆದು ಜಮೀನುಗಳು ಹಾಳಾಗಿವೆ ಆದ್ದರಿಂದ ಜಮೀನುಗಳನ್ನೂ ಸರಿಪಡಿಸಬೇಕೆಂದು ಜಾತ್ಯತೀತ ಜನತಾದಳದ ಬಿ. ವಿ. ಕರೀಗೌಡ ಪ್ರಶ್ನೋತ್ತರ ವೇಳೆಯಲ್ಲಿ ಒತ್ತಾಯಿಸಿದರು. ರಾಷ್ಟ್ರೀಯ ಕೃಷಿ ವಿಮಾ ಯೋಜನೆ ಜಾರಿಗೆ ಬಂದಿರುವುದರಿಂದ ಜಮೀನಿಗಾಗಲಿ, ಬೆಳೆಗಳಿಗಾಗಲಿ ಹಾನಿಯಾದರೆ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ಕುಮಾರ್‌ ಬಂಗಾರಪ್ಪ ತಿಳಿಸಿದ್ದಾರೆ.

ಸರ್ವಪಕ್ಷ ಸಭೆ : ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ನಡೆಸುತ್ತಿರುವ ಸಂಧಾನ ಮಾರ್ಗಕ್ಕೆ ಬೆಂಬಲ ವ್ಯಕ್ತವಾಗಿದೆ. ಮುಂದಿನ ಕ್ರಮ ಕೈಗೊಳ್ಳಲು ಶುಕ್ರವಾರ ಸರ್ವಪಕ್ಷಗಳ ಸಭೆ ಕರೆಯಲಾಗಿದ್ದು, ಪ್ರತಿಪಕ್ಷಗಳೊಂದಿಗೆ ಚರ್ಚಿಸಲಾಗುವುದೆಂದು ಗೃಹ ಸಚಿವ ಖರ್ಗೆ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.

ಈ ಕುರಿತು ಸಂಯುಕ್ತ ಜನತಾದಳದ ನಾಯಕ ಪಿ.ಜಿ.ಆರ್‌. ಸಿಂಧ್ಯಾ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಿದ್ದ ಖರ್ಗೆ, ಸರಕಾರಕ್ಕೆ ಬಂದಿರುವ ಮಾಹಿತಿ ಪ್ರಕಾರ, ರಾಜ್‌ಕುಮಾರ್‌ ಆರೋಗ್ಯವಾಗಿದ್ದಾರೆ. ಸಂಧಾನ ವಿಷಯಕ್ಕೆ ಸಂಬಂಧಿಸಿದಂತೆ ತಮಿಳುನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರ ಜೊತೆ ಸತತ ಸಂಪರ್ಕವಿಟ್ಟುಕೊಳ್ಳಲಾಗಿದೆ. ಟಾಡಾ ಬಂಧಿಗಳ ಬಿಡುಗಡೆ ಬಗ್ಗೆ ಸುಪ್ರೀಂಕೋರ್ಟ್‌ ನೀಡಿರುವ ತೀರ್ಪಿನ ಅಧಿಕೃತ ಪ್ರತಿ ಸರಕಾರಕ್ಕೆ ಬಂದಿದ್ದು, ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸರ್ವಪಕ್ಷ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ತಿಳಿಸಿದ್ದಾರೆ.

ತಮಿಳುನಾಡು ವಿಧಾನಸಭೆಯಲ್ಲಿ ತೀವ್ರ ಟೀಕೆ ವ್ಯಕ್ತವಾಗಿರುವುದರಿಂದ ಸಂಧಾನಕಾರರಲ್ಲಿ ಒಬ್ಬರಾದ ನೆಡುಮಾರನ್‌ ಅವರು ಸಂಧಾನಕ್ಕೆ ಹೋಗಲು ನಿರಾಕರಿಸಿರುವುದರಿಂದ ಚರ್ಚೆ ಅಗತ್ಯವಾಗಿದೆ ಎಂದ ಸಿಂಧ್ಯಾ, ರಾಜ್‌ ಬಿಡುಗಡೆ ಕಾರ್ಯತಂತ್ರ ಬದಲಿಸುವಂತೆ ಕೇಂದ್ರ ಸಚಿವ ವೆಂಕಯ್ಯನಾಯ್ಡು ಸಲಹೆ ಮಾಡಿದ್ದಾರೆ ಈ ಹಿನ್ನಲೆಯಲ್ಲಿ ಸರಕಾರಕ್ಕೆ ಪತ್ರ ಬಂದಿದೆಯೆ? ಎಂದು ಪ್ರಶ್ನಿಸಿದರು.

ರಾಜ್‌ ಬಿಡುಗಡೆಗೆ ಸರಕಾರ ಎಲ್ಲ ಪ್ರಯತ್ನಗಳನ್ನೂ ಮುಂದುವರಿಸಿದೆ ಅದನ್ನು ಸದನದಲ್ಲಿ ವಿವರಿಸಲು ಸಾಧ್ಯವಿಲ್ಲ ಎಂದು ಖರ್ಗೆ ಉತ್ತರಿಸಿದರು.

ಕಾಮಗಾರಿ ತನಿಖೆಗೆ ನಕಾರ, ಸಭಾತ್ಯಾಗ : 160 ಕೋಟಿ ರುಪಾಯಿ ಎಡಿಬಿ ನೆರವಿನಿಂದ ಮೈಸೂರಿನಲ್ಲಿ ನಡೆಯುತ್ತಿರುವ ಕಾಮಗಾರಿಗಳಲ್ಲಿ ನಡೆಯುತ್ತಿರುವ ಅವ್ಯವಹಾರಗಳ ಬಗ್ಗೆ ಸಾರ್ವಜನಿಕ ಲೆಕ್ಕಪತ್ರ ಸಮಿತಿಯಿಂದ ತನಿಖೆ ನಡೆಸಬೇಕೆಂದು ಬಿಜೆಪಿ ಶಾಸಕರ ಒತ್ತಾಯಕ್ಕೆ ಸರಕಾರ ಮಣಿಯದಿದ್ದುದರಿಂದ ಬಿಜೆಪಿ ಸದಸ್ಯರು ವಿಧಾನಸಭೆಯಲ್ಲಿ ಸಭಾತ್ಯಾಗ ಮಾಡಿದರು.

ಸಹಕಾರ ತಿದ್ದುಪಡಿ ಮಸೂದೆ : ಸಹಕಾರ ಮಸೂದೆಯ ಸರಕಾರ ತಿದ್ದುಪಡಿ ವಿದೇಯಕವನ್ನು ಸದನದಲ್ಲಿ ಮಂಡಿಸಿದಾಗ ಪಕ್ಷದ ಎಲ್ಲ ಶಾಸಕರೂ ಹಾಜರಿದ್ದು ಮಸೂದೆ ಅಂಗೀಕಾರಗೊಳ್ಳಲು ಸಹಕರಿಸಬೇಕೆಂದು ಸಹಕಾರ ಸಚಿವ ಡಿ.ಕೆ. ಶಿವಕುಮಾರ್‌ ಕಾಂಗ್ರೆಸ್‌ ಶಾಸಕರಲ್ಲಿ ಮನವಿ ಮಾಡಿದ್ದಾರೆ.

ತಿದ್ದುಪಡಿ ವಿರೋಧಿಸಲು ಪ್ರತಿಪಕ್ಷದ ಶಾಸಕರು ನಿರ್ಧರಿಸಿರುವ ಹಿನ್ನೆಲೆಯಲ್ಲಿ ಸಚಿವರು ಈ ಮನವಿ ಮಾಡಿದ್ದಾರೆ. ಅಕ್ರಮ ನಡೆಯುವ ಸಂಘ ಸಂಸ್ಥೆಗಳಿಗೆ ನೋಟೀಸ್‌ ನೀಡದೆ ಅವುಗಳನ್ನು ವಶಪಡಿಸಿಕೊಳ್ಳುವ ಅಧಿಕಾರವನ್ನು ಸರಕಾರಕ್ಕಗೆ ಈ ವಿಧೇಯಕ ನೀಡಲಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X