ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತ-ಲ-ಕಾ-ವೇ-ರಿ: ರಂಗ--ನಾ-ಥ-ನ ಮೈತೊ-ಳೆ-ವ-ವ-ಳ- ತವ-ರು

By Staff
|
Google Oneindia Kannada News

*ರಾಜ-ಲ-ಕ್ಷ್ಮಿ ಕೆ. ರಾವ್‌

ಮಡಿಕೇರಿ ನೋಡಬೇಕೆಂದು ನೀವು ಅಂದುಕೊಂಡಿದ್ದಲ್ಲಿ ತಲಕಾವೇರಿ ನೋಡಿಕೊಂಡೇ ನಿಮ್ಮ ಟೂರ್‌ ಮುಗಿಸಬೇಕು. ತಲಕಾವೇರಿಯಲ್ಲಿ ಏನು ವಿಶೇಷ ಅಂತ ಕೇಳುತ್ತೀರಾ ? ಕರ್ನಾಟಕ-ತಮಿಳುನಾಡು ಕಿತ್ತಾಡುವಂತೆ ಮಾಡಿದ ಕಾವೇರಿ ನದಿ ಹುಟ್ಟುವುದು ಮಡಿಕೇರಿಯಿಂದ ತುಸು ದೂರದಲ್ಲಿರುವ ತಲಕಾವೇರಿ ಕ್ಷೇತ್ರದಲ್ಲಿ.

ಅಲ್ಲಿ ಅಂತಹ ಆಕರ್ಷಕ ಪಾರ್ಕಾಗಲೀ, ಭವ್ಯ ಹೋಟೆಲಾಗಲೀ, ಅಮ್ಯೂಸ್‌ಮೆಂಟ್‌ ಪಾರ್ಕಾಗಲೀ ಇಲ್ಲ. ಸಮುದ್ರದಿಂದ ಸುಮಾರು 4,500 ಮೀಟರ್‌ ಎತ್ತರದಲ್ಲಿರುವ ಬ್ರಹ್ಮಗಿರಿ ಬೆಟ್ಟವೇರಿದರೆ ನೀವು ಎರಡು ಪುಟ್ಟ ದೇವಸ್ಥಾನ ನೋಡುತ್ತೀರಿ. ಒಂದು ಗಣೇಶನ ಗುಡಿ , ಇನ್ನೊಂದು ಶಿವಲಿಂಗ ಇರುವ ತುಸು ದೊಡ್ಡ ಗುಡಿ. ಮತ್ತೆ ಅಲ್ಲೊಂದು ಅಶ್ವತ್ಥ ಮರವಿದೆ. ಅಗಸ್ತ್ಯ ಮುನಿಗಳಿಗೆ ಬ್ರಹ್ಮ,ವಿಷ್ಣು, ಮಹೇಶ್ವರರು ದರ್ಶನ ನೀಡಿದ್ದು ಇಲ್ಲಿಯೇ ಅಂತೆ. ಈ ಎರಡು ಗುಡಿಗಳ ಮೆಟ್ಟಿಲುಗಳು ಮುಗಿಯುತ್ತಿದ್ದಂತೆಯೇ ಅಲ್ಲೊಂದು ಪುಟ್ಟ ಕೊಳವಿದೆ. ಅದನ್ನು ಕುಂಡಿಕೆ ಎನ್ನುತ್ತಾರೆ. ನೀವು ಮಡಿಯಲ್ಲಿ ಶಿವಲಿಂಗ ದರ್ಶನ ಮಾಡಬೇಕಾದರೆ ಈ ಕೊಳದಲ್ಲಿ ಒಂದು ಮುಳುಗು ಹಾಕಿ ಮಗುಟವುಟ್ಟುಕೊಂಡು ದೇವರಿಗೆ ಸಾಷ್ಟಾಂಗ ನಮಸ್ಕಾರ ಮಾಡಬಹುದು. ದೇವಸ್ಥಾನದ ಸುತ್ತ ವಾಯುಗಿರಿ, ಗಜರಾಜಗಿರಿ ಮತ್ತು ಅಗ್ನಿಗಿರಿ ಎಂಬ ಮೂರು ಬೆಟ್ಟಗಳಿವೆ. ನಡುವೆ ಪುಟ್ಟ ಕೆರೆ, ಪುಟ್ಟ ದೇವಸ್ಥಾನಗಳಿವೆ.

ಹಿಂದೂಗಳ ಸಪ್ತ ಸಿಂಧೂಗಳಲ್ಲಿ ಕಾವೇರಿ ನದಿಯೂ ಒಂದು. ಕಾವೇರಿ ಬ್ರಹ್ಮ ಗಿರಿಯ ಒಡಲಲ್ಲಿ ಹುಟ್ಟುತ್ತಾಳೆ. ಮತ್ತೆ ಒಂದಷ್ಟು ಫರ್ಲಾಂಗುಗಳ ವರೆಗೆ ಗುಪ್ತಗಾಮಿನಿಯಾಗಿ ಹರಿಯುತ್ತಾಳೆ. ಬ್ರಹ್ಮ ಗಿರಿಯ ತಪ್ಪಲಲ್ಲಿ ತ್ರಿವೇಣೀ ಸಂಗಮದ ಬಳಿಯೇ ಕಾವೇರಿಯ ಹರಿವು ಕಾಣುವುದು. ಇನ್ನೂ ಆನಂದಿಸಬಹುದಾದದ್ದು ಬ್ರಹ್ಮಗಿರಿಯ ಶೃಂಗವೇರಿದಾಗ ಕಾಣುವ ಪ್ರಕೃತಿ ಸೊಬಗು. ದೇವಸ್ಥಾನದ ಬಳಿಯೇ ಬೆಟ್ಟದೆತ್ತರಕ್ಕೆ ಇರುವ ಸಾಲು ಮೆಟ್ಟಿಲುಗಳು ಕಾಣುತ್ತವೆ. ಅದು ವ್ಯೂ ಪಾಯಿಂಟ್‌ಗೆ ಹೋಗಲು ದಾರಿ. ಅಲ್ಲಿ , ಎತ್ತರದಲ್ಲಿ , ಭರ್ರೋ... ಎಂದು ಬೀಸುವ ಗಾಳಿಯಲ್ಲಿ ಕೊಡಗು ಕಾಣುತ್ತದೆ. ಬೆಟ್ಟಗಳ ಸಾಲುಗಳು...ಬೋಳು ಬೆಟ್ಟಗಳು, ದಟ್ಟ ಮರಗಳಿರುವ ಕಡುಹಸಿರು ಬೆಟ್ಟಗಳು... ಮತ್ತೆ ಪಕ್ಕದ ಬೆಟ್ಟದಲ್ಲಿ ಕಾಣುವ ಗಾಳಿ ವಿದ್ಯುತ್‌ ಉತ್ಪಾದನೆಯ ಸೂಚಕವಾಗಿರುವ ದೊಡ್ಡ ದೊಡ್ಡ ಫ್ಯಾನ್‌ಗಳು.... ಇನ್ನೂ ದಿಗಂತದವರೆಗೆ ದಿಟ್ಟಿಸಿದರೆ ದೂರದಲ್ಲಿ ಅರಬ್ಬಿ ಸಮುದ್ರದ ಅಲೆಗಳು ಕಾಣುತ್ತವೆ ಸಾರ್‌... ಎನ್ನುತ್ತಾನೆ ದೇವಸ್ಥಾನದ ಬಳಿಯಿರುವ ಹಣ್ಣುಕಾಯಿ ಅಂಗಡಿಯಾತ.

ಕಾವೇರ ಸಂಕ್ರಾಂತಿ : ಸೌರಮಾನ ದಿನಗಣಿತದ ಪ್ರಕಾರ ಬರುವ ತುಲ ಸಂಕ್ರಮಣವನ್ನು ಕಾವೇರ ಸಂಕ್ರಾಂತಿ ಎಂದೇ ಕರೆಯುತ್ತಾರೆ. ಇತರ ದಿನಗಳಲ್ಲಿ ಗಿಂಡಿಯಿಂದ ಬೀಳುವ ತೀರ್ಥದಂತೆ ಕೊಳದಲ್ಲಿ ಒಸರುವ ಕಾವೇರಿ ಅಂದು ಉಕ್ಕುಕ್ಕಿ ಹರಿಯುತ್ತಾಳೆ. ಪ್ರತಿ ಬಾರಿಯೂ ಮುಂಜಾನೆ ತೀರ್ಥೋದ್ಭವವಾದರೆ, ಪ್ರತಿ ಹತ್ತು ವರ್ಷಗಳಿಗೊಮ್ಮೆ ನಡು ಮಧ್ಯಾಹ್ನ ತೀಥೋದ್ಭವವಾಗುತ್ತದೆ. ಈ ಬಾರಿ ಭಕ್ತರಿಗೆ ಮಧ್ಯಾಹ್ನ ತೀಥೋದ್ಭವ ನೋಡುವ ಅವಕಾಶವಿದೆ. ತೀರ್ಥೋದ್ಭವ ಪ್ರತಿವರ್ಷ ಸಂಕ್ರಾಂತಿಯಂದೇ ಹೇಗಾಗುತ್ತದೆ, ನಿತ್ಯಕ್ಕಿಂತ ಹೆಚ್ಚು ನೀರು ಅಂದು ಉಕ್ಕುವುದು ಹೇಗೆ ಎನ್ನುವುದರ ಬಗ್ಗೆ ಯಾವುದೇ ಅಧ್ಯಯನಗಳು ಈವರೆಗೆ ನಡೆದಿಲ್ಲ. ಭೂವಿಜ್ಞಾನಿಗಳೂ ಆ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿಲ್ಲ. ಈ ಉದ್ಭವ ತೀರ್ಥವನ್ನು ಭಕ್ತರು ತಮ್ಮಲ್ಲಿದ್ದ ಪಾತ್ರೆ, ಬಾಟಲಿಗಳಲ್ಲೆಲ್ಲಾ ತುಂಬಿಕೊಂಡರೂ ಕೊಳದ ನೀರು ಖಾಲಿಯಾಗುವುದಿಲ್ಲ.

ಆ ದಿನ ತ-ಲ-ಕಾ-ವೇ-ರಿ-ಯ-ಲ್ಲಿ ವಿಶೇಷ ಪೂಜೆ. ಜನ ಜಾತ್ರೆಯೇ ಅಲ್ಲಿ ನೆರೆಯುತ್ತದೆ. ಹಿಂದಿನ ದಿನಗಳಲ್ಲಿ, ಅಂದರೆ ಬ್ರಹ್ಮ ಗಿರಿ ಬೆಟ್ಟ ಕೊರೆದು ರಸ್ತೆ ನಿರ್ಮಿಸುವುದಕ್ಕೂ ಹಿಂದಿನ ಜಮಾನದಲ್ಲಿ , ಭಕ್ತರು ತಲಕಾವೇರಿಗೆ ಹೋಗುವ ಹರಕೆ ಹೊರುತ್ತಿದ್ದರಂತೆ. ಈಗ ಶಬರಿ ಮಲೆಗೆ ಹೋಗುವ ಮುಂಚೆ ನಲ್ವತ್ತೆಂಟು ದಿನಗಳ ಕಾಲ ವ್ರತ ಹಿಡಿಯುವುದಿಲ್ಲವೇ ? ಹಾಗೆಯೇ ತಲಕಾವೇರಿಗೆ ಹೋಗುವ ಮುಂಚೆ 48 ದಿನ ವ್ರತ ಆಚರಿಸುತ್ತಿದ್ದರಂತೆ. ಚಪ್ಪಲಿ ಮೆಟ್ಟದೇ, ಒಪ್ಪೊತ್ತು ಉಂಡು, ಮದ್ಯ ಮಾಂಸ ತ್ಯಜಿಸಿ, ವ್ರತ ನಡೆಸಿ, ತಲಕಾವೇರಿಯ ದರ್ಶನಕ್ಕಾಗಿ ಬ್ರಹ್ಮಗಿರಿಯ ಕಾಲು ಹಾದಿಯನ್ನು ಬರಿಗಾಲಲ್ಲಿ ತುಳಿಯುತ್ತಿದ್ದರಂತೆ. ಈಗ ಕಾಲ ಬದಲಾಗಿದೆ. ಬಸ್‌ ಏರುದನಿ ಮಾಡಿಕೊಂಡು ಬೆಟ್ಟವೇರುತ್ತದೆ. ಗಂಟೆಗಳ ಅಂತರದಲ್ಲಿ ನೀವು ತಲಕಾವೇರಿಯ ಕುಂಡಿಕೆಯಲ್ಲಿ ಪಾದಗಳನ್ನು ಇಳಿ ಬಿಟ್ಟು, ಬೆಟ್ಟದ ಸೆರಗಿನಲ್ಲಿರುವ ಹಸಿರ ಸವಿಯುತ್ತಿರುತ್ತೀರಿ.

ಮುಖಪುಟ / ನೋಡು ಬಾ ನಮ್ಮೂರ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X