ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾನುವಾರ ರಾತ್ರಿ ಯಾವುದೇ ಕ್ಷಣದಲ್ಲಿ ರಾಜ್‌ಕುಮಾರ್‌ ಬಿಡುಗಡೆ ?

By Staff
|
Google Oneindia Kannada News

ಬೆಂಗಳೂರು : ವೀರಪ್ಪನ್‌ ವಶದಲ್ಲಿರುವ ಕನ್ನಡದ ವರನಟ ಡಾ. ರಾಜ್‌ಕುಮಾರ್‌ ಅವರು ಭಾನುವಾರ ರಾತ್ರಿಯ ನಂತರ ಯಾವುದೇ ಕ್ಷಣದಲ್ಲಾದರೂ ಬಿಡುಗಡೆ ಆಗುವ ಸಾಧ್ಯತೆಗಳಿವೆ ಎಂಬ ಹೊಸ ವರ್ತಮಾನ ಬಂದಿದೆ. ಇದರೊಂದಿಗೆ 79 ದಿನಗಳ ರಾಜ್‌ ಅಪಹರಣ ಪ್ರಕರಣಕ್ಕೆ ಅಂತಿಮ ತೆರೆ ಬೀಳುವ ಲಕ್ಷಣಗಳು ಕಾಣುತ್ತಿವೆ.

ವೀರಪ್ಪನ್‌ನ ಅಧಿಕೃತ ಆಹ್ವಾನದ ಮೇರೆಗೆ ಸಂಧಾನಕಾರ ಗೋಪಾಲ್‌ ಅವರ ಜತೆ ತೆರಳಿರುವ ಪಳ ನೆಡುಮಾರನ್‌ ಅವರು ಕಾಡಿನಿಂದ ನಾಡಿಗೆ ಕಳುಹಿಸಿರುವ ಸಂದೇಶ, ಭಾನುವಾರ ರಾತ್ರಿಯೇ ರಾಜ್‌ಕುಮಾರ್‌ ಅವರು ಬಿಡುಗಡೆಯಾಗಿ ಚೆನ್ನೈಗೆ ಬರುವ ಸಾಧ್ಯತೆಗಳನ್ನು ಪುಷ್ಟೀಕರಿಸಿವೆ. ಈ ಮಧ್ಯೆ ತಾಳಮಲೈ ಅರಣ್ಯ ಪ್ರದೇಶದಲ್ಲಿ ಬೀಡುಬಿಟ್ಟಿರುವ ಆಂಬ್ಯುಲೆನ್ಸ್‌ ಕೂಡ ರಾಜ್‌ ಬಿಡುಗಡೆ ಸಾಧ್ಯತೆಯನ್ನು ಮತ್ತಷ್ಟು ಬಲಗೊಳಿಸಿವೆ. ಹೆಲಿಕಾಪ್ಟರ್‌ ಒಂದಕ್ಕೆ ಸಹ ತಾಳ ಮಲೆ ಅರಣ್ಯ ಪ್ರದೇಶಕ್ಕೆ ಬರುವ ಮಾಹಿತಿ ಇದ್ದು, ರಾಜ್‌ಕುಮಾರ್‌ ಅವರು ಭಾನುವಾರ ರಾತ್ರಿ ಸುರಕ್ಷಿತವಾಗಿ ಬಿಡುಗಡೆಯಾಗುತ್ತಾರೆ ಎಂಬ ಭರವಸೆ ಮೂಡಿದೆ.

ರಾಜ್‌ಕುಮಾರ್‌ ಅವರ ಬಿಡುಗಡೆಯ ಶುಭವಾರ್ತೆಗಾಗಿ ತಮಿಳುನಾಡು ಹಾಗೂ ಕರ್ನಾಟಕ ಸರ್ಕಾರಗಳೆರಡೂ ಕಾಯುತ್ತಿವೆ. ಈ ಮಧ್ಯೆ ಕರ್ನಾಟಕದ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಅವರು ಇಂದೇ ರಾಜ್‌ಕುಮಾರ್‌ ಬಿಡುಗಡೆ ಆಗುತ್ತದೆ ಎಂಬ ಬಗ್ಗೆ ಖಚಿತ ಮಾಹಿತಿ ದೊರಕಿಲ್ಲ ಎಂದೂ ಹೇಳಿದ್ದಾರೆ. ಆದಾಗ್ಯೂ ಕೃಷ್ಣ ಅವರು ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ ಅವರೊಂದಿಗೆ ಸತತ ಸಂಪರ್ಕ ಇಟ್ಟುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ರಾಜ್‌ಕುಮಾರ್‌ ಅವರನ್ನು ಬಹುತೇಕ ಕೊಯಮತ್ತೂರು ವಲಯದ ಕಾಡಿನ ಭಾಗದಿಂದ ಬಿಡುಗಡೆ ಮಾಡಿ ಚೆನ್ನೈಗೆ ಕರೆದುಕೊಂಡು ಹೋಗಲಾಗುತ್ತದೆ ಎಂದು ಅಧಿಕಾರಿಗಳು ಭಾವಿಸಿದ್ದಾರೆ. ನೆಡುಮಾರನ್‌ ಅವರ ಆಪ್ತರಿಂದ ಈ ಮಾಹಿತಿ ದೊರಕಿದ್ದು, ಪೊಲೀಸ್‌ ಅಧಿಕಾರಿಗಳಾದಿಯಾಗಿ ಪತ್ರಕರ್ತರು ರಾಜ್‌ಕುಮಾರ್‌ ಬರುವಿಕೆಯ ಸಂತಸದ ಕ್ಷಣಕ್ಕಾಗಿ ಕಾಯುತ್ತಿದ್ದಾರೆ.

ತಮಿಳುನಾಡಿಲ್ಲೇ ಬಿಡುಗಡೆ : ರಾಜ್‌ಕುಮಾರ್‌ ಹಾಗೂ ಇತರ ಮೂವರ ಆಪಹರಣವಾದದ್ದೂ ತಮಿಳುನಾಡಿನಲ್ಲೇ. ಹೀಗಾಗಿ ತಮಿಳುನಾಡಿನಲ್ಲೇ ರಾಜ್‌ಕುಮಾರ್‌ ಅವರ ಬಿಡುಗಡೆ ಮಾಡಿಸುವ ಮೂಲಕ ಆ ಖ್ಯಾತಿಯನ್ನು ತಾನೇ ಪಡೆಯುವುದು ತಮಿಳುನಾಡಿನ ಹೆಬ್ಬಯಕೆಯಾಗಿದೆ ಎಂದು ಉನ್ನತ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಒತ್ತೆಯಾಳು ನಾಗಪ್ಪ ಅವರು ವೀರಪ್ಪನ್‌ ವಶದಿಂದ ತಪ್ಪಿಸಿಕೊಂಡು ಬಂದಾಗ ತಮಿಳುನಾಡಿಗೆ ಕರೆದುಕೊಂಡು ಹೋಗಲು ಅವಕಾಶ ಕೊಡದೆ, ಅವರನ್ನು ಬೆಂಗಳೂರಿಗೆ ಕರೆತಂದ ಹಿನ್ನೆಲೆಯಲ್ಲಿ, ಗಾಜನೂರು ಅರಣ್ಯ ಪ್ರದೇಶದಲ್ಲಿ ರಾಜ್‌ಕುಮಾರ್‌ ಅವರನ್ನು ಬಿಡುಗಡೆ ಗೊಳಿಸದೆ, ಕೊಯಮತ್ತೂರು ಪ್ರದೇಶದಿಂದ ಬಿಡುಗಡೆ ಮಾಡಿಸಲು ನಿರ್ಧರಿಸಲಾಗಿದ್ದು, ಸರ್ವ ಪ್ರಯತ್ನಗಳೂ ನಡೆದಿವೆ ಎಂದೂ ತಿಳಿದುಬಂದಿದೆ.

ಶಾಂತಿ ಕಾಪಾಡುವ ಯತ್ನ : ರಾಜ್‌ಕುಮಾರ್‌ ಅವರು ಬಿಡುಗಡೆಯಾಗಿ ಬೆಂಗಳೂರಿಗೆ ಬಂದಲ್ಲಿ , ಈಗಾಗಲೇ ಕುಪಿತಗೊಂಡಿರುವ ರಾಜ್‌ಕುಮಾರ್‌ ಅಭಿಮಾನಿಗಳಿಂದ ಶಾಂತಿ ಭಂಗ ಆಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ, ಹಾಗೂ ಕರ್ನಾಟಕದಲ್ಲಿರುವ ತಮಿಳರಿಗೆ ತೊಂದರೆಯಾಗಬಹುದು ಎಂಬ ಭೀತಿಯಿಂದ ರಾಜ್‌ಕುಮಾರ್‌ ಅವರನ್ನು ಮೊದಲು ತಮಿಳುನಾಡಿಗೆ ಕರೆದುಕೊಂಡು ಹೋಗಿ, ಕರುಣಾನಿಧಿ ಅವರೊಂದಿಗೆ ಮಾಧ್ಯಮಗಳ ಮೂಲಕ ಶಾಂತಿ ಕಾಪಾಡುವಂತೆ ಕನ್ನಡಿಗರಲ್ಲಿ ಮನವಿ ಮಾಡಿಸಿದ ಬಳಿಕವೇ ಅವರನ್ನು ಬೆಂಗಳೂರಿಗೆ ಕಳುಹಿಸುವುದು ಸೂಕ್ತ ಎಂದೂ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆಂದು ಹೇಳಲಾಗಿದೆ. ಕಳೆದ 78 ದಿನಗಳ ವದಂತಿಗಳ ಸಾಮ್ರಾಜ್ಯದಲ್ಲಿ ಈ ಸುದ್ದಿಯೂ ಮತ್ತೊಂದು ವದಂತಿಯಾಗದೆ, ರಾಜ್‌ ಅವರು ಸುರಕ್ಷಿತವಾಗಿ ಬಿಡುಗಡೆಯಾಗಲಿ ಎಂದು ಹಾರೈಸೋಣ.

(ಇನ್‌ಫೋ ವರದಿ)

  • ಮುಖಪುಟ / ರಾಜ್‌ ಅಪಹರಣ
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X