ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸ ಸಾವಿರ ರುಪಾಯಿ ನೋಟು ನಕಲಿ ಹಾವಳಿಯಿಂದ ಮುಕ್ತವಾದೀತೇ?

By Staff
|
Google Oneindia Kannada News

New1000 rupees noteಬೆಂಗಳೂರು : ಒಂದು ಸಾವಿರ ರುಪಾಯಿಯ ನೋಟು ಮತ್ತೆ ಚಲಾವಣೆಗೆ ಬಂದಿದೆ. ಐನೂರು ರೂಪಾಯಿಯ ನಕಲಿ ನೋಟಿನ ಬಗೆಗೆ ಜನರಲ್ಲಿ ಹೆದರಿಕೆ ಅಚ್ಚಳಿಯದೇ ಉಳಿದಿರುವಾಗ ಸಾವಿರ ರೂಪಾಯಿಯ ನೋಟಿಗೂ ಅದೇ ಗತಿ ಬಾರದಿರಲಿ ಎನ್ನುವ ಮುನ್ನೆಚ್ಚರಿಕೆಯಿಂದ ರಿಸರ್ವ್‌ ಬ್ಯಾಂಕ್‌ ಇಂಡಿಯಾ ಪೊಲೀಸರ ಸಹಾಯ ಕೇಳಿದೆ.

ನಕಲಿ ನೋಟು ಹಂಚಿಕೆದಾರರ ಕೈಯಿಂದ ಸಾವಿರ ರೂಪಾಯಿಯ ನೋಟನ್ನು ರಕ್ಷಿಸುವಂತೆ ಆರ್‌ಬಿಐ ಪೊಲೀಸ್‌ ಇಲಾಖೆಯನ್ನು ಕೋರಿದ್ದು , ಹೊಸ ನೋಟಿನ ಸಾಚಾತನ ಮತ್ತು ನಕಲು ಸಾಧ್ಯತೆಗಳ ಕುರಿತು ಪೊಲೀಸರಿಗೆ ವಿವರಿಸಲಾಗುತ್ತಿದೆ. ಹಿಂದೆ ಎರಡು ಬಣ್ಣಗಳಲ್ಲಿ ಮಾತ್ರ ನೋಟನ್ನು ತಯಾರಿಸಲಾಗುತ್ತಿತ್ತು. ಆದರೆ ಈಗ ಬಹುವರ್ಣಗಳನ್ನು ಉಪಯೋಗಿಸಲಾಗುತ್ತಿದೆ. ಈ ತಂತ್ರಜ್ಞಾನವನ್ನು ಅಳವಡಿಸಿಕೊಂಡು ದುಷ್ಕರ್ಮಿಗಳು ಖೋಟಾ ನೋಟು ತಯಾರಿಸುವುದು ಸಾಧ್ಯವಿಲ್ಲ ಎಂದು ಪೊಲೀಸ್‌ ಇಲಾಖೆ ಹೇಳುತ್ತಿದೆ. ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ಆರ್‌ಬಿಐ ಸಾವಿರ ರೂಪಾಯಿ ನೋಟಿಗೆ ಪೊಲೀಸ್‌ ಕಾವಲಿಟ್ಟಿದೆ.

ಹೊಸದಾಗಿ ಬಿಡುಗಡೆಯಾಗಿರುವ ಸಾವಿರ ರೂಪಾಯಿಯ ನೋಟಿನ ಉದ್ದ 17.5 ಸೆಂಟಿ ಮೀಟರ್‌ ಇದ್ದು, ಅಗಲ 7.25 ಸೆಂಟಿ ಮೀಟರ್‌ ಇದೆ. ಮಹಾತ್ಮಾ ಗಾಂಧೀ ಅವರ ಚಿತ್ರವಿರುವ ನೋಟಿನ ಮೇಲೆ ಚಿನ್ನದ ಲೇಪನದ ಅಂಕೆಗಳಿವೆ. ಖೋಟಾನೋಟಿಗೂ ಅಸಲಿ ನೋಟಿಗೂ ನೋಡದ ಕೂಡಲೇ ವ್ಯತ್ಯಾಸ ತಿಳಿಯುವಂತೆ ವಿನ್ಯಾಸ ಮಾಡಲಾಗಿದೆ. ಕೆಂಪು, ಹಳದಿ, ಹಸಿರು, ಕಪ್ಪು, ಸುವರ್ಣ ವರ್ಣಗಳು 1000 ರು. ನೋಟಿಗೆ ಮೆರುಗು ನೀಡಿವೆ.

ಆದಾಗ್ಯೂ ಜನರ ಮನದಿಂದ ಆತಂಕವಂತೂ ದೂರವಾಗಿಲ್ಲ. ಈಗ 500 ರುಪಾಯಿ ನೋಟು ತೆಗೆದುಕೊಳ್ಳಲೂ ಜನ ಹೆದರುತ್ತಾರೆ. ಟೆಲಿಫೋನ್‌, ವಾಟರ್‌, ಎಲೆಕ್ಟ್ರಿಕ್‌ ಬಿಲ್‌ ಪಾವತಿಸಲು 500 ರುಪಾಯಿ ನೋಟು ನೀಡಿದರೆ, ನೋಟಿನ ಮೇಲೆ ಟೆಲಿಫೋನ್‌ ನಂಬರ್‌ ಅಥವಾ ಆರ್‌.ಆರ್‌. ನಂಬರ್‌ ದಾಖಲಿಸಿಕೊಂಡು 500 ರು ನೋಟು ಪಡೆಯಲಾಗುತ್ತದೆ. ಬ್ಯಾಂಕ್‌ಗಳಲ್ಲಿ ಖಾತೆ ಸಂಖ್ಯೆ ಬರೆದುಕೊಂಡೇ 500 ನೋಟು ಸ್ವೀಕರಿಸಲಾಗುತ್ತದೆ. ವ್ಯಾಪಾರಸ್ಥರಂತೂ ತಮಗೆ ವ್ಯಾಪಾರ ಆಗದಿದ್ದರೂ ಅಡ್ಡಿ ಇಲ್ಲ ಎಂದು 500 ರು. ನೋಟು ತೆಗೆದುಕೊಳ್ಳಲು ನಿರಾಕರಿಸುತ್ತಿದ್ದಾರೆ. ಇದೇ ಸ್ಥಿತಿ 1000 ರು. ನೋಟಿಗೂ ಬಂದರೆ, ತಮ್ಮ ವ್ಯಾಪಾರದ ಗತಿ ಏನು ಎಂಬುದು ವಣಿಕರ ಚಿಂತೆ.

(ಇನ್ಫೋ ವಾರ್ತೆ)

  • ಮುಖಪುಟ / ಇವತ್ತು... ಈ ಹೊತ್ತು...
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X