ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿವಾದದ ಸುಳಿಯಲ್ಲಿ ಸಹಕಾರಿ ಕಾಯಿದೆ ತಿದ್ದುಪಡಿ ಪ್ರಸ್ತಾವ

By Staff
|
Google Oneindia Kannada News

ಬೆಂಗಳೂರು:ಸಹಕಾರಿ ಸಂಸ್ಥೆಗಳ ಆಡಳಿತ ಮಂಡಳಿಗಳನ್ನು ಯಾವುದೇ ನೋಟೀಸ್‌ ನೀಡದೆ ರದ್ದುಪಡಿಸಲು ಕಾಯಿದೆ ತಿದ್ದುಪಡಿ ತರಬೇಕೆಂಬ ಪ್ರಸ್ತಾವನೆಯನ್ನು ರಾಜ್ಯ ಸಚಿವ ಸಂಪುಟ ಅನುಮೋದಿಸಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.

ಈ ರೀತಿಯ ತಿದ್ದುಪಡಿ ತರುವುದು ಸಹಕಾರಿ ಕಾಯಿದೆಗೆ ಕೊಡುವ ಕೊಡಲಿಪೆಟ್ಟು ಎಂದು ವಿರೋಧಿ ಧುರೀಣರು ಹೇಳಿಕೆ ನೀಡುತ್ತಿದ್ದಾರೆ. ಪರಸ್ಪರ ಚರ್ಚೆ ನಡೆಸುತ್ತಿರುವ ವಿಪಕ್ಷ ನಾಯಕರು, ವಿಧಾನ ಪರಿಷತ್‌ನಲ್ಲಿ ತಮಗೆ ಬಹುಮತ ಇದ್ದು, ಕಾಯಿದೆ ಒಪ್ಪಿಗೆ ಪಡೆಯದಂತೆ ನೋಡಿಕೊಳ್ಳುತ್ತೇವೆ ಎನ್ನುತ್ತಿದ್ದಾರೆ. ಸಹಕಾರಿ ಕಾಯಿದೆ ತಿದ್ದುಪಡಿಗೆ ವಿರೋಧವಾಗಿರುವ ಕಾಂಗ್ರೆಸ್ಸಿಗರ ಸಹಕಾರ ಕೋರುವುದೂ ವಿರೋಧಿ ಧುರೀಣರ ಪ್ರಯತ್ನಗಳಲ್ಲಿ ಒಂದಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿದಿನ ಹೇಳಿಕೆಗಳು ಹೊರಬೀಳುತ್ತಲೇ ಇವೆ.

ಈ ಸಂಬಂಧ ಸೋಮವಾರ ಹುಬ್ಬಳ್ಳಿಯಲ್ಲಿ ಉಗ್ರ ಟೀಕೆ ಮಾಡಿರುವ ಪ್ರತಿಪಕ್ಷದ ನಾಯಕ ಜಗದೀಶ್‌ ಶಟ್ಟರ್‌, ಹಿರಿಯ ಸಚಿವರು ಸಂಪುಟದ ಸಭೆಯಲ್ಲಿ ಕಾಯಿದೆ ತಿದ್ದುಪಡಿಗೆ ವಿರೋಧಿಸಿ ಸುಮ್ಮನಾಗುವುದು ಸರಿಯಲ್ಲ. ನೈಜ ಕಳಕಳಿ, ಆತ್ಮಸಾಕ್ಷಿಯಿದ್ದರೆ ರಾಜೀನಾಮೆ ನೀಡಿ ಪ್ರತಿಭಟಿಸಲಿ ಎಂದಿದ್ದಾರೆ. ಸಹಕಾರ ಸಚಿವ ಡಿ.ಕೆ. ಶಿವಕುಮಾರ್‌ ಅವರ ವೈಯಕ್ತಿಕ ಹಿತಾಸಕ್ತಿಯೇ ಕಾಯಿದೆ ತಿದ್ದುಪಡಿ ನಿರ್ಧಾರಕ್ಕೆ ಕಾರಣ ಎಂದು ಹೇಳಿರುವ ಅವರು ಶಿವಕುಮಾರ್‌ ಅವರ ನಿರ್ಧಾರಗಳಿಗೆ ಕಡಿವಾಣ ಹಾಕುವಂತೆ ಮುಖ್ಯಮಂತ್ರಿಗಳಿಗೆ ಸಲಹೆಯನ್ನೂ ಮಾಡಿದ್ದಾರೆ.

ಕೆಟ್ಟ ನಿರ್ಧಾರ: ದೇಶದ ಯಾವುದೇ ರಾಜ್ಯದಲ್ಲಿ ಸಹಕಾರಿ ಕಾಯಿದೆ ಇಂಥ ತಿದ್ದುಪಡಿ ತರುವಾಗ ನಡೆದಿರುವ ಪ್ರಯತ್ನಗಳಲ್ಲಿ ಇದು ಕರಾಳವಾದುದು. ಕಾಂಗ್ರೆಸ್‌ ಪಕ್ಷ ತನ್ನ ಚುನಾವಣೆ ಪ್ರಣಾಳಿಕೆಯಲ್ಲಿ ಸಪಕಾರಿ ಸಂಘಗಳನ್ನು ಸ್ವಾಯತ್ತ ಸಂಸ್ಥೆಗಳನ್ನಾಗಿ ಬೆಳಸಲಾಗುವುದು ಎಂದು ತಿಳಿಸಿದೆ. ಇಷ್ಟಲ್ಲದೆ ಎಐಸಿಸಿ ಅಧ್ಯಕ್ಷೆ ಸೋನಿಯಾಗಂಧಿ ಅವರು ಪಕ್ಷ ಅಧಿಕಾರದಲ್ಲಿರುವ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಸಹಕಾರಿ ಸಂಸ್ಥೆಗಳನ್ನು ಬೆಳಸುವ ಆಶಯ ವ್ಯಕ್ತಪಡಿಸಿರುವುದನ್ನು ಉಲ್ಲೇಖಿಸಿರುವ ವಿರೋಧಿ ನಾಯಕರು, ಈಗ ತರಲು ಉದೇಶಿಸಿರುವ ತಿದ್ದುಪಡಿ ಈ ಆಶಯಗಳಿಗೆ ವಿರುದ್ಧವಾಗಿದೆ ಎಂದು ವಾದಿಸಿದ್ದಾರೆ. ಈ ಬಗ್ಗೆ ವಿವರಿಸಿ ಎಐಸಿಸಿ ಅಧ್ಯಕ್ಷರಿಗೆ ಪತ್ರ ಬರೆಯುವುದಾಗಿಯೂ ಹೇಳಿದ್ದಾರೆ.

ಸೌಹಾರ್ದ ಕಾಯಿದೆಗೆ ವಿದಾಯ: ಜನತಾದಳ ಅಧಿಕಾರದಲ್ಲಿದ್ದಾಗ ಅಂದಿನ ಸಚಿವ ಎಸ್‌. ಎಸ್‌. ಪಾಟೀಲ್‌ ರೂಪಿಸಿದ್ದ ಸಹಕಾರಿ ಸೌಹಾರ್ದ ಕಾಯಿದೆಗೆ ರಾಷ್ಟ್ರಪತಿಗಳ ಅಂಗೀಕಾರ ದೊರೆತಿದ್ದರೂ ಜಾರಿಗೆ ತರದೆ ಹಸ್ತಕ್ಷೇಪ ಮಾಡಲು ಯತ್ನಿಸಲಾಗುತ್ತಿದೆ ಎಂದೂ ಆಪಾದಿಸಿದ್ದಾರೆ. ತಮ್ಮ ವಾದಗಳನ್ನು ಸಮರ್ಥಿಸಲು ಅಂಕಿಅಂಶಗಳನ್ನು ಬಳಸಿಕೊಂಡಿದ್ದಾರೆ. ಆ ಪ್ರಕಾರ 1996ರ ಮಾರ್ಚ್‌ ಅಂತ್ಯಕ್ಕೆ ಸರಕಾರಿ ಸ್ವಾಮ್ಯದ ಉದ್ದಿಮೆಗಳು 55 ಕೋಟಿ ರುಪಾಯಿ ನಷ್ಟ ಅನುಭವಿಸಿದ್ದರೆ, ಸಹಕಾರಿ ಸಂಸ್ಥೆಗಳು 146 ಕೋಟಿ ರುಪಾಯಿ ಲಾಭ ಗಳಿಸಿವೆ ಹಾಗಾಗಿ ಸಹಕಾರಿ ಸಂಸ್ಥೆಗಳ ಕಾರ್ಯವೈಖರಿಯಲ್ಲಿ ಸರಕಾರ ಹಸ್ತಕ್ಷೇಪ ಮಾಡಬಾರದೆಂದು ಒತ್ತಾಯಿಸಿದ್ದಾರೆ.

ಸಮರ್ಥನೆ: ಈ ನಡುವೆ ಸಂಪುಟದ ನಿಲುವನ್ನು ಸಮರ್ಥಿಸಿಕೊಂಡಿರುವ ಕಾಂಗ್ರೆಸ್‌, ತಿದ್ದುಪಡಿ ನಿರ್ಧಾರನ್ನು ತೆಗೆದುಕೊಳ್ಳುವಾಗ ಹಿರಿಯ ಸಚಿವರು, ಸಹಕಾರಿ ಧುರೀಣರ ಸಲಹೆ ಮತ್ತು ಒಪ್ಪಿಗೆ ಪಡೆಯಲಾಗಿದೆ. ತಿದ್ದುಪಡಿ ಸಹಾಕಾರಿ ವಲಯದ ಅಭಿವೃದ್ಧಿಗಾಗಿಯೇ ಹೊರತು ಕಾಂಗ್ರೆಸ್‌ನ ಅಭಿವೃದ್ಧಿಗಲ್ಲ ಎಂದು ಕಟುವಾಗಿ ಪ್ರತಿಕ್ರಿಯಿಸಿದೆ.

ಈ ಬಗ್ಗೆ ಜಂಟಿ ಹೇಳಿಕೆ ನೀಡಿರುವ ಕಾಂಗ್ರಸ್‌ ಸಮಿತಿಯ ಪ್ರಧಾನ ಕಾರ್ಯದರ್ಶಿ ಬಿ. ಎ. ಹಸನಬ್ಬ ಹಾಗೂ ಸಿ. ಆರ್‌. ನಾರಾಯಣಪ್ಪ ಅವರು ಸಹಕಾರಿ ರಂಗದಲ್ಲಿ ನಡೆಯುತ್ತಿರುವ ಅವ್ಯವಹಾರ, ಸ್ವಜನಪಕ್ಷಪಾತಕ್ಕೆ ಕಡಿವಾಣ ಹಾಕಲು ಈ ಕ್ರಮ ಅನಿವಾರ್ಯ. ಇಂದಿಗೂ ಅನೇಕ ಸಹಕಾರಿ ಸಂಸ್ಥೆಗಳು ಒಂದು ಕುಟುಂಬದ ಇಲ್ಲವೇ ಗುಂಪಿನ ಸ್ವಾದೀನದಲ್ಲಿವೆ ಇದು ತಪ್ಪಬೇಕೆಂದು ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

ತಿದ್ದುಪಡಿಗೆ ಸಚಿವ ಶಿವಕುಮಾರ್‌ ಮಾತ್ರ ಕಾರಣರಲ್ಲ ಆದ್ದರಿಂದ ಅವರ ರಾಜೀನಾಮೆ ಕೇಳುವುದು ಸರಿಯಲ್ಲ. ಬದಲಾಗಿ ಕಾಯಿದೆ ಜಾರಿಯಾದ ನಂತರ ಅದರಿಂದಾಗುವ ತಪ್ಪು-ಒಪ್ಪುಗಳನ್ನು ವಿಶ್ಲೇಷಿಸಿ ಕಾಯಿದೆ ತಿದ್ದುಪಡಿಯನ್ನು ಹಿಂತೆಗೆದುಕೊಳ್ಳಲು ಒತ್ತಾಯಿಸಲಿ ಎಂದು ಹೇಳಿದ್ದಾರೆ.

(ಇನ್ಫೋ ವರದಿ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X