ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೀರಪ್ಪನ್‌ ಆಹ್ವಾನದ ಮೇರೆಗೆ ಕಾಡಿಗೆ ಹೋದ ನೆಡುಮಾರನ್‌?

By Staff
|
Google Oneindia Kannada News

Nedumaran with M.Karunanidhi during 1983 Madras rallyಚೆನ್ನೈ : ಪಳ ನೆಡುಮಾರನ್‌ ತಮಿಳು ನ್ಯಾಷನಲ್‌ ಚಳವಳಿಯ ನಾಯಕ. ಈಗ ನೆಡುಮಾರನ್‌ ಅವರು ತಮಿಳುನಾಡಿನ ಕೆಲವು ಪತ್ರಕರ್ತರೊಂದಿಗೆ ವೀರಪ್ಪನ್‌ ಅಡಗುತಾಣವಿರುವ ಕಾಡನ್ನು ಹೊಕ್ಕಿದ್ದಾರೆ. ಮೊನ್ನೆಯಷ್ಟೇ ಅದೂ ಒತ್ತೆಯಾಳು ನಾಗಪ್ಪ ಕಾಡಿನಿಂದ ಪರಾರಿಯಾದ ಮಾರನೇ ದಿನ ವೀರಪ್ಪನ್‌ ಕ್ಯಾಸೆಟ್‌ ಬಿಡುಗಡೆ ಮಾಡಿ, ಸುದ್ದಿ ಮಾಡಿದ ನೆಡುಮಾರನ್‌ ಈಗೇಕೆ ಕಾಡಿಗೆ ಹೋದರು ?

ವೀರಪ್ಪನ್‌ ಹಾಗೂ ವೀರಪ್ಪನ್‌ ಅಡಗುತಾಣದಲ್ಲಿರುವ ತಮಿಳು ಉಗ್ರರು ಸಂಧಾನಕಾರ ನಕ್ಕೀರನ್‌ ಸಂಪಾದಕ ಆರ್‌.ಆರ್‌. ಗೋಪಾಲ್‌ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ್ದಾರೆ. (ಕರ್ನಾಟಕದಲ್ಲೂ ಗೋಪಾಲ ಸಂಧಾನದ ಬಗ್ಗೆ ಅಸಮಾಧಾನ ಇದೆ) ಮೊದಲ ಬಾರಿ ಗೋಪಾಲ್‌ ಕಾಡಿನಿಂದ ಕ್ಯಾಸೆಟ್‌ ತಂದ ಸಂದರ್ಭದಲ್ಲೇ ನೆಡುಮಾರನ್‌ ಅವರನ್ನು ಗೋಪಾಲ್‌ ಜತೆ ಕಾಡಿಗೆ ಕಳುಹಿಸುವಂತೆ ವೀರಪ್ಪನ್‌ ಸೂಚಿಸಿದ್ದ. ಆದರೆ, ಎರಡೂ ಸರಕಾರಗಳು ಈ ವಿಷಯವನ್ನು ಬಹಿರಂಗಪಡಿಸದೇ ಗೌಪ್ಯವಾಗಿಟ್ಟಿದ್ದವು. ಈಗ ವೀರಪ್ಪನ್‌ನ ಅಧಿಕೃತ ಆಹ್ವಾನದ ಮೇರೆಗೆ ನೆಡು ಮಾರನ್‌ ಕಾಡಿಗೆ ಹೋಗಿದ್ದಾರಂತೆ.

ನೆಡುಮಾರನ್‌ ಯಾರಿಗೂ ತಿಳಿಸದೇ, ಗೋಪಾಲ್‌ ನಾಡಿನಲ್ಲಿ ಇರುವಾಗಲೇ ಕಾಡಿಗೆ ತೆರಳಿದ್ದಾದರೂ ಏಕೆ? ಅದೂ ಕೆಲವು ಪತ್ರಕರ್ತರ ಜತೆ ಎಂಬ ಪ್ರಶ್ನೆಗೆ ತತ್‌ಕ್ಷಣಕ್ಕೆ ಸೂಕ್ತ ಉತ್ತರ ದೊರೆತಿಲ್ಲ. ಆದರೂ, ರಾಜ್‌ ಅಪಹರಣ ಬಿಕ್ಕಟ್ಟು ಈ ಮೂಲಕ ಹೊಸ ತಿರುವು ಪಡೆದಿದೆ.

ತಮಿಳನ್‌ ಎಕ್ಸ್‌ಪ್ರೆಸ್‌ನ ಧರ್ಮರಾಜನ್‌, ಪಿ.ಯು.ಸಿ.ಎಲ್‌. ಪ್ರತಿನಿಧಿ ಸೈಯದ್‌, ಡಾಟ್‌ಕಾಂ ಒಂದರ ವರದಿಗಾರ ಸುಕುಮಾರನ್‌ ಹಾಗೂ ಪತ್ರಿಕಾ ಛಾಯಾಗ್ರಾಹಕ ಡೈಸ್‌ ಕಳೈಚೆಲ್ವನ್‌ ಅವರೊಂದಿಗೆ ನೆಡುಮಾರನ್‌ ಅವರು ವೀರಪ್ಪನ್‌ ಅಡಗುತಾಣಕ್ಕೆ ಹೋಗಿದ್ದಾರೆ ಎಂದು ಮಾಲೈ ಚೂಡರ್‌ ಎಂಬ ಸಂಜೆ ದಿನಪತ್ರಿಕೆ ಬುಧವಾರ ವರದಿ ಮಾಡಿದೆ.

ಕಾರ್ಯಕ್ರಮದಲ್ಲಿ ಮುತ್ತು ಲಕ್ಷ್ಮೀ : ಇತ್ತೀಚೆಗಷ್ಟೇ ನೆಡುಮಾರನ್‌ ಮದುರೈನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕಾಡುಗಳ್ಳ ವೀರಪ್ಪನ್‌ನ ಪತ್ನಿ ಮುತ್ತುಲಕ್ಷ್ಮೀ ಹಾಗೂ ವೀರಪ್ಪನ್‌ ಸಂಬಂಧಿ ಒಬ್ಬರು ಪಾಲ್ಗೊಂಡಿದ್ದರು. ನೆಡುಮಾರನ್‌ಗೆ ವೀರಪ್ಪನ್‌ ಜತೆ ನೇರ ಸಂಪರ್ಕ ಇದೆ ಎಂಬುದನ್ನು ಮುತ್ತುಲಕ್ಷ್ಮೀಯ ಪಾಲ್ಗೊಳ್ಳುವಿಕೆ ನಿರೂಪಿಸಿತ್ತು.

ಗೋಪಾಲ್‌ ಇನ್ನೆರಡು ದಿನದಲ್ಲಿ ಕಾಡಿಗೆ : ಈ ಮಧ್ಯೆ ಸರ್ವೋನ್ನತ ನ್ಯಾಯಾಲಯದ ತೀರ್ಪು ಬರುವ ತನಕ ಕಾಡಿಗೆ ಹೋಗುವುದಿಲ್ಲ ಎನ್ನುತ್ತಿದ್ದ ಗೋಪಾಲ್‌ ಇಂದೋ ನಾಳೆಯೋ ಕಾಡಿಗೆ ಹೋಗುವ ಸೂಚನೆಗಳು ದೊರಕಿವೆ. ಉನ್ನತ ಮೂಲಗಳ ರೀತ್ಯ ಬಹುತೇಕ ಗುರುವಾರ ಇಲ್ಲವೇ ಶುಕ್ರವಾರ ಗೋಪಾಲ್‌ ಮತ್ತೆ ಕಾಡಿಗೆ ಹೋಗಲಿದ್ದಾರೆ ಎಂಬ ವಿಷಯವನ್ನು ತಮಿಳುನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರು, ಕರ್ನಾಟಕದ ಮುಖ್ಯಮಂತ್ರಿ ಎಸ್‌. ಎಂ. ಕೃಷ್ಣ ಅವರಿಗೆ ತಿಳಿಸಿದ್ದಾರೆ. ಬುಧವಾರ ಈ ಸಂಬಂಧ ಮುಖ್ಯಮಂತ್ರಿಗಳಿಬ್ಬರೂ ದೂರವಾಣಿಯಲ್ಲಿ ಬಹಳಹೊತ್ತು ಮಾತುಕತೆ ನಡೆಸಿದ್ದಾರೆ.

ಗೋಪಾಲ್‌ ಏಕಾಏಕಿ ಸರ್ವೋನ್ನತ ನ್ಯಾಯಾಲಯದ ತೀರ್ಪು ಹೊರ ಬೀಳುವ ಮೊದಲೇ ಕಾಡಿಗೆ ಹೊರಟಿರುವ ಸುದ್ದಿ, ನೆಡುಮಾರನ್‌ ಕಾಡಿಗೆ ಹೋಗಿದ್ದಾರೆ ಎಂಬುದನ್ನು ಪುಷ್ಟೀಕರಿಸುವಂತಿದೆ. ಒಂದೆರಡು ದಿನದಲ್ಲೇ ಫಲಶ್ರುತಿ ಹೊರ ಬಿದ್ದೀತು. ಕಾದು ನೋಡೋಣ.

ಮುಖಪುಟ / ರಾಜ್‌ ಅಪಹರಣ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X