ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಸ್‌ಗಳ ಮೇಲೆ ಕಲ್ಲು ತೂರಾಟ : ಬೆಂಗಳೂರು ಕೆಲಕಾಲ ಪ್ರಕ್ಷುಬ್ಧ

By Staff
|
Google Oneindia Kannada News

ಬೆಂಗಳೂರು : ಬೆಂಗಳೂರಿನಲ್ಲಿ ಮೂರು ಬಿಎಂಟಿಸಿ ಬಸ್‌ಗಳ ಮೇಲೆ ಕಲ್ಲು ತೂರಾಟ ನಡೆದಿದೆ. ಬಸ್ಸಿನ ಕಿಟಕಿ ಗಾಜುಗಳು ಪುಡಿಪುಡಿಯಾಗಿವೆ. ಶೇಷಾದ್ರಿಪುರ ಹಾಗೂ ರಾಜಾಜಿನಗರದಲ್ಲಿ ನಡೆದ ಕಲ್ಲು ತೂರಾಟದಿಂದ ಕೆಲ ಕಾಲ ಪ್ರಕ್ಷುಬ್ಧ ಪರಿಸ್ಥಿತಿ ಇತ್ತು. ರಾಜಾಜಿನಗರ ಪ್ರದೇಶದಲ್ಲಿ ರಸ್ತೆಗಳಲ್ಲಿ ಟೈರ್‌ಗಳಿಗೆ ಬೆಂಕಿ ಹಚ್ಚಿ, ರಸ್ತೆ ಬಂದ್‌ ಮಾಡಿದ ಘಟನೆಗಳೂ ನಡೆದಿವೆ. ಉಳಿದಂತೆ ರಾಜ್ಯಾದ್ಯಂತ ಬಂದ್‌ ಶಾಂತಿಯುತವಾಗಿತ್ತು ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.

ವಿಮಾನಗಳ ಸಂಚಾರ ರದ್ದು : ರೈಲು ಸಂಚಾರ ಮಾಮೂಲಿನಂತಿತ್ತು ಆದರೆ, ಇಂಡಿಯನ್‌ ಏರ್‌ಲೈನ್ಸ್‌ ಮಾತ್ರ ಬೆಳಗ್ಗೆ 10ರಿಂದ ಸಂಜೆ 6 ಗಂಟೆಯವರೆಗಿನ ತನ್ನ ಸೇವೆಯನ್ನು ರದ್ದು ಪಡಿಸಿತ್ತು. ದೇಶದ ವಿವಿಧ ಭಾಗಗಳಿಗೆ ತೆರಳಬೇಕಿದ್ದ ಐದು ವಿಮಾನಗಳ ಯಾನವನ್ನು ಬಂದ್‌ ಹಿನ್ನೆಲೆಯಲ್ಲಿ ಅದು ರದ್ದು ಪಡಿಸಿತು. ಸಾರ್ವಜನಿಕ ಉದ್ದಿಮೆಗಳೂ ಸೇರಿದಂತೆ ನಗರದ ಅನೇಕ ಕಂಪನಿಗಳು ತಮ್ಮ ಕಾರ್ಯಾಲಯಕ್ಕೆ ರಜೆ ಘೋಷಿಸಿದ್ದವು. ಸಾಫ್ಟ್‌ ವೇರ್‌ ಕಂಪನಿಗಳು ಬಂದ್‌ ನಿಮಿತ್ತ ಇಂದು ರಜೆ ಘೋಷಿಸಿ, ಶನಿವಾರ ಕಾರ್ಯ ನಿರ್ವಹಿಸಲು ನಿರ್ಧರಿಸಿದ್ದವು.

ಬ್ಯಾಂಕ್‌ಗಳಲ್ಲಿ ಹಾಜರಾತಿ ಕ್ಷೀಣ : ಬಂದ್‌ ನಡುವೆಯೂ ಬಾಗಿಲು ತೆರೆದ ಬ್ಯಾಂಕ್‌ಗಳಲ್ಲಿ ಹಾಜರಾತಿ ಕ್ಷೀಣಿಸಿತ್ತು. ಬೆಳಗ್ಗೆ ತೆರೆದಿದ್ದ, ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ಹಾಗೂ ಜಲಮಂಡಲಿಯ ಕ್ಯಾಷ್‌ ಕೌಂಟರ್‌ಗಳು ಆನಂತರ ಬಾಗಿಲು ಮುಚ್ಚಿದವು. ಎಲ್ಲೆಡೆ ಪೊಲೀಸ್‌ ಬಂದೋಬಸ್ತ್‌ ಕಂಡು ಬಂತು.

ಬಂದ್‌ ಶೇ.80 ಯಶಸ್ವಿ : ಕರ್ನಾಟಕ ಬಂದ್‌ ಶೇಕಡಾ 80ರಷ್ಟು ಯಶಸ್ವಿಯಾಗಿದೆ. ಉತ್ತರ ಕರ್ನಾಟಕದಲ್ಲಿಯೂ ಕೂಡ ಚಿತ್ರಮಂದಿರಗಳು ಪ್ರದರ್ಶನ ರದ್ದು ಪಡಿಸಿವೆ. ಉಳಿದಂತೆ ಉತ್ತರ ಕರ್ನಾಟಕದಲ್ಲಿ ಜನಜೀವನ ಮಾಮೂಲಿನಂತಿತ್ತು. ಬೆಂಗಳೂರು, ಹಾಸನ, ಶಿವಮೊಗ್ಗ, ಮಂಡ್ಯ, ಚಾಮರಾಜನಗರ ಜಿಲ್ಲೆಗಲ್ಲಿ ಸಂಪೂರ್ಣ ಹಾಗೂ ದಾವಣಗೆರೆ, ಚಿತ್ರದುರ್ಗಗಳಲ್ಲಿ ಭಾಗಶಃ ಬಂದ್‌ ನಡೆದಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಂದ್‌ಗೆ ಬೆಂಬಲ ಕಂಡು ಬಂದಿಲ್ಲ. ಉಡುಪಿ ಜಿಲ್ಲೆಯಲ್ಲಿ ಬಂದ್‌ ಯಾವುದೇ ಪರಿಣಾಮ ಬೀರಿಲ್ಲ. ಬಸ್‌ ಸಂಚಾರ ಮಾಮೂಲಿನಂತಿತ್ತು. ಮುಖ್ಯರಸ್ತೆಯಲ್ಲಿ ಮಾತ್ರ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ದಕ್ಷಿಣಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಶಾಲೆ - ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಹೊರ ಜಿಲ್ಲೆಗಳ ಬಂದ್‌ ಸಂಚಾರ ಸ್ತಬ್ಧವಾಗಿತ್ತು. ಬೆಂಗಳೂರು - ಮಂಗಳೂರು ನಡುವಣ ಬಸ್‌ ಸಂಚಾರ ಬುಧವಾರ ರಾತ್ರಿಯಿಂದಲೇ ಸ್ತಬ್ಧವಾಗಿದೆ. ಅವಳಿ ಜಿಲ್ಲೆಗಳ ಗ್ರಾಮಾಂತರ ಪ್ರದೇಶದಲ್ಲಿ ಶಾಲೆಗಳು ತೆರೆದಿದ್ದವು. ಸರಕಾರಿ ಕಚೇರಿಗಳಲ್ಲಿ ಹಾಜರಾತಿ ಎಂದಿನಂತಿತ್ತು.

ರಾಜ್ಯಾದ್ಯಂತ ಶೇಕಡಾ 20ರಿಂದ ಶೇ.80ರಷ್ಟು ಬಂದ್‌ಗೆ ಬೆಂಬಲ ದೊರೆತಿದೆ. ದಸರೆಯ ಹಿನ್ನೆಲೆಯಲ್ಲಿ ಬಂದ್‌ನಿಂದ ಮೈಸೂರಿಗೆ ವಿನಾಯಿತಿ ನೀಡಲಾಗಿತ್ತು.

ಬಂದ್‌ ಯಶಸ್ವಿ - ಕೆಸಿಎನ್‌ : ಈ ಮಧ್ಯೆ ರಾಜ್ಯಾದ್ಯಂತ ಶಾಂತಿಯುತವಾಗಿ ಬಂದ್‌ ಸಂಪೂರ್ಣ ಯಶಸ್ವಿಯಾಗಿದೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಕೆ.ಸಿ.ಎನ್‌. ಚಂದ್ರು ತಿಳಿಸಿದ್ದಾರೆ. ಜನರು ಸ್ವಯಂ ಪ್ರೇರಿತರಾಗಿ ಬಂದ್‌ಗೆ ಬೆಂಬಲ ನೀಡಿದ್ದಾರೆ ಎಂದೂ ಅವರು ಹೇಳಿದ್ದಾರೆ. ಬಂದ್‌ ಬೆಂಬಲಿಸಿದ ಕನ್ನಡ ಜನತೆಗೆ ಅವರು ಧನ್ಯವಾದಗಳನ್ನು ಅರ್ಪಿಸಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X