ದಕ್ಷಿಣ ಒಳನಾಡಿನಲ್ಲಿ ಚುರುಕಾದ ಮುಂಗಾರು
ಬೆಂಗಳೂರು : ಬೆಂಗಳೂರಿನಲ್ಲಿ ಶನಿವಾರ ಬಿಸಿಲು ಸುಳಿದಾಡುತ್ತಿದೆ. ಮಳೆ ಬಿಟ್ಟಂತೆ ತೋರುತ್ತಿದೆ. ರಾತ್ರಿ ಹೇಗೋ ಏನೋ ಗೊತ್ತಿಲ್ಲ. ಬೆಳಿಗ್ಗಿನಿಂದ ವರುಣದೇವ ರೆಸ್ಟ್ ತಗೊಂಡಿದ್ದಾನೆ. ಸಂಜೆಯ ನಂತರ ಗುಡಿಗಿದರೂ ಗುಡುಗ ಬಹುದು.
ಚಾಮರಾಜ ನಗರ ಜಿಲ್ಲೆಯಲ್ಲಂತೂ ಧಾರಾಕಾರವಾಗಿ ಸುರಿದ ಮಳೆಯಿಂದ ಅನೇಕ ಹಳ್ಳಿಗಳು ಜಲಾವೃತವಾಗಿವೆ. ರಸ್ತೆಗಳಲ್ಲಿ ನಾಲ್ಕಾರು ಅಡಿ ನೀರು ಹರಿಯುತ್ತಿದೆ. ಮನೆಗಳಿಗೆಲ್ಲಾ ನೀರು ನುಗ್ಗಿದೆ. ಮಳವಳ್ಳಿ, ಮದ್ದೂರುಗಳಲ್ಲೂ ಸಾಕಷ್ಟು ಮಳೆ ಬಿದ್ದಿದೆ.
ಅಂದಹಾಗೆ ಕಳೆದ 24 ಗಂಟೆಗಳ ಅವಧಿಯಲ್ಲಿ ದಕ್ಷಿಣ ಒಳನಾಡಿನಲ್ಲಿ ಮುಂಗಾರು ಚುರುಕಾಗಿದೆ. ಕರಾವಳಿಯ ಎಲ್ಲೆಡೆ ಹಾಗೂ ಉತ್ತರ ಒಳನಾಡಿನ ಕೆಲವೆಡೆ ಮಳೆ ಬಿದ್ದಿದೆ. ಬೆಳಗಾವಿ ವಿಮಾನ ನಿಲ್ದಾಣದಲ್ಲಿ 9 ಸೆಂಟಿ ಮೀಟರ್, ಚಿಕ್ಕಮಗಳೂರಿನಲ್ಲಿ 8, ಹೆಗ್ಗಡದೇವನ ಕೋಟೆ, ಅಜ್ಜಂಪುರ, ಹೊಳೆನರಸೀಪುರಗಳಲ್ಲಿ ತಲಾ 6, ಖಾನಾಪುರದಲ್ಲಿ 5, ಬ್ಯಾಡಗಿ, ಶೃಂಗೇರಿಗಳಲ್ಲಿ 4 ಸೆಂಟಿ ಮೀಟರ್, ಹೊನ್ನಂಪೇಟೆ, ತರೀಕೆರೆ, ಕಳಸ, ಶಿವಮೊಗ್ಗಗಳಲ್ಲಿ 3 ಸೆಂಟಿ ಮೀಟರ್ ಮಳೆಯಾಗಿದೆ.
ಮುಂದಿನ 48 ಗಂಟೆಗಳ ಅವಧಿಯಲ್ಲಿ ದಕ್ಷಿಣ ಒಳನಾಡಿನ ಎಲ್ಲೆಡೆ ಹಾಗೂ ಕರಾವಳಿ ಮತ್ತು ಉತ್ತರ ಒಳನಾಡಿನ ಕೆಲವೆಡೆ ಮಳೆಯಾಗುವ ನಿರೀಕ್ಷೆ ಇದೆ. ಸ್ಥಳೀಯ ಹವಾಮಾನ ಮುನ್ಸೂಚನೆಯಂತೆ ಬೆಂಗಳೂರು ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇದ್ದು, ಸಂಜೆ ಅಥವಾ ರಾತ್ರಿ ಒಂದೆರಡು ಬಾರಿ ಮಳೆ ಆಗುತ್ತದೆ ಎನ್ನುತ್ತದೆ ಹವಾಮಾನ ಇಲಾಖೆ.