ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್‌ಕುಮಾರ್‌ ಬಿಡುಗಡೆಗೆ ಕೇಂದ್ರ ಸರ್ಕಾರದ ಮಧ್ಯಪ್ರವೇಶ

By Staff
|
Google Oneindia Kannada News

ಬೆಂಗಳೂರು : ಸಾರ್ವಜನಿಕರ ಹಿತರಕ್ಷಣೆಯ ಘನ ಉದ್ದೇಶದಿಂದ ನ್ಯಾಯಾಲಯದಲ್ಲಿ ಇರುವ ಮೊಕದ್ದಮೆಗಳನ್ನು ಹಿಂತೆಗೆದುಕೊಳ್ಳುವ ಇಲ್ಲವೆ ಕೈಬಿಡುವಂತೆ ಕೋರಲು ಕಾರ್ಯಾಂಗಕ್ಕೆ ಅಧಿಕಾರವಿದೆ ಎಂದು ಕೇಂದ್ರ ಸರಕಾರ ಶುಕ್ರವಾರ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಪ್ರತಿಪಾದಿಸಿದೆ.

ಕನ್ನಡದ ಮೇರು ನಟ ರಾಜ್‌ಕುಮಾರ್‌ ಹಾಗೂ ಮತ್ತಿತರ ಮೂವರನ್ನು ಆಪಹರಿಸಿದ ಕಾಡುಗಳ್ಳ ವೀರಪ್ಪನ್‌, ಒತ್ತೆಯಾಳುಗಳ ಬಿಡುಗಡೆಗೆ ಪ್ರತಿಯಾಗಿ ಮೈಸೂರುನಲ್ಲಿರುವ ಟಾಡಾ ಬಂದಿಗಳು ಹಾಗೂ ತಮಿಳು ನಾಡಿನಲ್ಲಿರುವ ಐವರು ತಮಿಳು ಉಗ್ರಗಾಮಿಗಳ ಬಿಡುಗಡೆಯ ಷರತ್ತು ವಿಧಿಸಿದ್ದ ಹಿನ್ನೆಲೆಯಲ್ಲಿ ರಾಜ್ಯದ ಹಿತದ ದೃಷ್ಟಿಯಿಂದ ಮೊಕದ್ದಮೆಗಳನ್ನು ಕೈಬಿಡಲು ರಾಜ್ಯ ಸರ್ಕಾರಗಳು ಕೈಗೊಂಡ ನಿರ್ಧಾರವನ್ನು ಪ್ರಶ್ನಿಸಿ ಬಿ.ಎಲ್‌. ವಡೇರಾ ಎಂಬುವವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಗೆ ಪ್ರತಿಯಾಗಿ ಕೇಂದ್ರ ಸರಕಾರವು ಈ ಪ್ರಮಾಣಪತ್ರ ಸಲ್ಲಿಸಿದೆ.

ಅಪರಾಧ ದಂಡ ಸಂಹಿತೆಯ 321ನೇ ವಿಧಿಯ ರೀತ್ಯ ಸಾರ್ವಜನಿಕ ಹಿತವನ್ನು ಲಕ್ಷ್ಯದಲ್ಲಿಟ್ಟುಕೊಂಡು ಮೊಕದ್ದಮೆಗಳನ್ನು ಹಿಂದಕ್ಕೆ ಪಡೆಯಲು ಸರಕಾರಕ್ಕೆ ಅಧಿಕಾರವಿದೆ. ಈ ಪ್ರಕರಣದಲ್ಲೂ ರಾಜ್ಯ ಸರಕಾರಗಳು ತಮಗೆ ದತ್ತವಾದ ಅಧಿಕಾರದ ಪರಿಧಿಯಲ್ಲೇ ಕಾರ್ಯನಿರ್ವಹಿಸಿವೆ ಎಂಬುದಕ್ಕೆ ಪುಷ್ಟಿ ನೀಡುವ ರೀತಿಯಲ್ಲಿ ಪ್ರಮಾಣ ಪತ್ರ ಸಲ್ಲಿಸಲಾಗಿದೆ.

ಮೊಕದ್ದಮೆಯ ಸಲುವಾಗಿ ರಾಜ್ಯದ ಶಾಂತಿ ಸುವ್ಯವಸ್ಥೆಗೆ ಭಂಗ ಬರುತ್ತದೆ ಎಂಬುದು ಮನವರಿಕೆಯಾದ ಸಂದರ್ಭದಲ್ಲಿಯೂ ಕೂಡ ಹಿಂಸಾಚಾರ ತಡೆಯಲು ಮತ್ತು ಶಾಂತಿ ಸ್ಥಾಪಿಸಲು ಮೊಕದ್ದಮೆಗಳನ್ನು ವಾಪಸು ಪಡೆಯಬಹುದಾಗಿದೆ. ಇದು ಕಾರ್ಯಾಂಗಕ್ಕೆ ದತ್ತವಾದ ಅಧಿಕಾರದ ದುರುಪಯೋಗವಾಗುವುದಿಲ್ಲ ಎಂದು ಪ್ರಮಾಣಪತ್ರದಲ್ಲಿ ತಿಳಿಸಲಾಗಿದೆ.

ರಾಜ್‌ಕುಮಾರ್‌ ಅವರ ಬಿಡುಗಡೆಗೆ ಸಹಕರಿಸುವಂತೆ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಲು ಗುರುವಾರ ಬೆಂಗಳೂರಿನಲ್ಲಿ ಚಲನಚಿತ್ರ ಕಾರ್ಮಿಕರು, ಕಲಾವಿದರು ಮೌನ ಮೆರವಣಿಗೆ ಮಾಡಿ ರಾಜ್ಯಪಾಲರಿಗೆ ಮನವಿ ಪತ್ರ ಅರ್ಪಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X