ಮತ್ತೊಮ್ಮೆ ಮುಂದಕ್ಕೆ ಹೋದ ರಾಜ್ಯ ಪತ್ರಕರ್ತರ 23ನೇ ಸಮ್ಮೇಳನ
ಬೆಂಗಳೂರು : ರಾಜ್‌ಕುಮಾರ್ ಅಪಹರಣ ಹಿನ್ನೆಲೆಯಲ್ಲಿ ಮುಂದಕ್ಕೆ ಹೋಗಿದ್ದ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ 23ನೇ ರಾಜ್ಯ ಸಮ್ಮೇಳನ ಕಾಗವಾಡ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಮತ್ತೊಮ್ಮೆ ಮುಂದಕ್ಕೆ ಹೋಗಿದೆ.
ಬೆಳಗಾವಿಯ ಪ್ರಭುದೇವ ಕಲ್ಯಾಣ ಮಂಟಪದಲ್ಲಿ ಸಮ್ಮೇಳನವನ್ನು ಮುಖ್ಯಮಂತ್ರಿಗಳು ಶುಕ್ರವಾರ ಉದ್ಘಾಟಿಸಬೇಕಿತ್ತು. ಆದರೆ, ಜಿಲ್ಲೆಯ ಕಾಗವಾಡ ಶಾಸಕರ ನಿಧನದಿಂದ ತೆರವಾಗಿರುವ ಸ್ಥಾನಕ್ಕೆ ಉಪಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳೂ ಸೇರಿದಂತೆ ಹಲವು ಸಚಿವರು, ಶಾಸಕರು, ಸಂಸದರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದರಿಂದ ಚುನಾವಣೆ ನೀತಿ ಸಂಹಿತೆಯ ಉಲ್ಲಂಘನೆ ಆಗುತ್ತದೆ ಎಂಬ ಕಾರಣದ ಮೇಲೆ ಸಮ್ಮೇಳನವನ್ನು ಅಕ್ಟೋಬರ್ 20 ಮತ್ತು 21ಕ್ಕೆ ಮುಂದೂಡಲು ತೀರ್ಮಾನಿಸಲಾಗಿದೆ.
ಸೋಮವಾರ ಜಿಲ್ಲಾಕಚೇರಿ ಆವರಣದಲ್ಲಿರುವ ಪತ್ರಕರ್ತರ ಸಂಘದ ಸಭಾಂಗಣದಲ್ಲಿ ಬಿ.ವಿ. ಮಲ್ಲಿಕಾರ್ಜುನಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕಾರಿ ಸಮಿತಿಯ ತುರ್ತು ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಮುನ್ನ ಆಗಸ್ಟ್ ತಿಂಗಳಿನಲ್ಲೇ ಸಮ್ಮೇಳನ ನಡೆಸಲು ಸಿದ್ಧತೆಗಳು ನಡೆದಿದ್ದವು. ರಾಜ್ ಅಪಹರಣದ ಕಾರಣ ಸಮ್ಮೇಳನ ಒಂದು ತಿಂಗಳು ಮುಂದಕ್ಕೆ ಹೋಗಿತ್ತು. ಈಗ ಚುನಾವಣೆ ನೀತಿ ಸಂಹಿತೆಯ ಉಲ್ಲಂಘಟನೆಯ ಕಾರಣದಿಂದ ಮತ್ತೊಮ್ಮೆ ಮುಂದಕ್ಕೆ ಹೋಗಿದೆ. ಇದರಿಂದಾಗಿ ಪತ್ರಕರ್ತರ ಸಂಘಕ್ಕೆ ಹತ್ತಿರ ಹತ್ತಿರ ಒಂದು ಲಕ್ಷ ರುಪಾಯಿಗಳ ನಷ್ಟ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಮುಖ್ಯಮಂತ್ರಿಗಳಿಗೇ ನೋಟಿಸ್ : ಸೆ.22ರಂದು ಬೆಳಗಾವಿಯಲ್ಲಿ ಪತ್ರಕರ್ತರ ಸಮ್ಮೇಳನ ಉದ್ಘಾಟಿಸಬೇಕಿದ್ದ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಸೇರಿದಂತೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದ ಎಲ್ಲ ಸಚಿವರು ಹಾಗೂ ಶಾಸಕರಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದಂತೆ ಬೆಳಗಾವಿ ಜಿಲ್ಲಾಧಿಕಾರಿ ನಿಲಯ್ ಮಿತ್ತಲ್ ಫ್ಯಾಕ್ಸ್ ಸಂದೇಶ ಕಳಿಸಿದ್ದಾರೆ.
ಜಿಲ್ಲೆಯ ಕಾಗವಾಡದಲ್ಲಿ ಉಪ ಚುನಾವಣೆ ನಡೆಯುತ್ತಿದ್ದು, ಮುಖ್ಯಮಂತ್ರಿಗಳಾಗಲೀ, ಸಚಿವರಾಗಲೀ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳುವುದು, ಖಾಸಗಿ ಸಾರ್ವಜನಿಕ ಸಮಾರಂಭಗಳಲ್ಲಿ ಪಾಲ್ಗೊಳ್ಳುವುದು ಚುನಾವಣೆ ನೀತಿ ಸಂಹಿತೆಯ ಉಲ್ಲಂಘನೆ ಆಗುತ್ತದೆ ಎಂದು ಅವರು ಮುಖ್ಯಮಂತ್ರಿಗಳಿಗೆ ಹಾಗೂ ಇತತರರಿಗೆ ಬರೆದಿರುವ ಪತ್ರದಲ್ಲಿ ಸಲಹೆ ಮಾಡಿದ್ದಾರೆ.
ಸಮ್ಮೇಳನವನ್ನು ಚುನಾವಣೆ ಮುಗಿಯುವ ತನಕ ಮುಂದೂಡುವಂತೆ ಬೆಳಗಾವಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೂ ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಚಿವರು, ಮುಖ್ಯಮಂತ್ರಿಗಳು ಸರಕಾರಿ ವಾಹನಗಳನ್ನೇ ಬಳಸಬೇಕಾಗುತ್ತದೆ, ಅವರಿಗೆ ಸರ್ಕಾರಿ ರಕ್ಷಣೆ ನೀಡಬೇಕಾಗುತ್ತದೆ ಇದು ಚುನಾವಣೆ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆ ಆಗುವುದರಿಂದ ತಾವು ಈ ಸಲಹೆ ಮಾಡಿರುವುದಾಗಿ ತಿಳಿಸಿದ್ದಾರೆ. ಇತ್ತೀಚೆಗೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್ ಅವರ ಕಾರನ್ನು ವಶಪಡಿಸಿಕೊಂಡಿದ್ದನ್ನೂ ಅವರು ಸ್ಮರಿಸಿದ್ದಾರೆ.