ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಥಮ ಬಾರಿಗೆ ಗ್ರಾಮೀಣ ಪ್ರದೇಶದಲ್ಲಿ ವಿದ್ಯುನ್ಮಾನ ಮತಯಂತ್ರ

By Staff
|
Google Oneindia Kannada News

ಬೆಂಗಳೂರು : ರಾಜ್ಯದಲ್ಲಿ ಪ್ರಥಮ ಬಾರಿಗೆ ಗ್ರಾಮಾಂತರ ಪ್ರದೇಶದ ಮತಗಟ್ಟೆಯಲ್ಲಿ ವಿದ್ಯುನ್ಮಾನ ಮತಯಂತ್ರದ ಬಳಕೆ ಆಗುತ್ತಿದೆ. ಶಾಸಕರ ನಿಧನದಿಂದಾಗಿ ತೆರವಾಗಿರುವ ಕಾಗವಾಡ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಈ ಪ್ರಯೋಗ ನಡೆಯುತ್ತಿದೆ ಎಂದು ರಾಜ್ಯದ ಜಂಟಿ ಚುನಾವಾಣಾಧಿಕಾರಿ ನೊಣವಿನಕೆರೆ ಕ್ಷೇತ್ರಪಾಲ್‌ ತಿಳಿಸಿದ್ದಾರೆ.

ಈ ಕ್ಷೇತ್ರದಲ್ಲಿ 1ಲಕ್ಷ 36 ಸಾವಿರ ಮತದಾರರಿದ್ದು, ಪ್ರತಿಶತ 80ರಷ್ಟು ಮತದಾರರಿಗೆ ಗುರುತಿನ ಚೀಟಿ ನೀಡಲಾಗಿದೆ. ಈ ಚುನಾವಣೆಗಾಗಿ 2 ಲಕ್ಷ ಮತಪತ್ರಗಳನ್ನು ಮುದ್ರಿಸಬೇಕಾಗಿತ್ತು, ಆದರೆ, ಈ ಬಾರಿ ವಿದ್ಯುನ್ಮಾನ ಮತಯಂತ್ರಗಳನ್ನು ಬಳಸುತ್ತಿರುವ ಹಿನ್ನೆಲೆಯಲ್ಲಿ ಚುನಾವಣೆ ವೆಚ್ಚದಲ್ಲಿ ಭಾರಿ ಉಳಿತಾಯ ಆಗಿದೆ ಎಂದು ಅವರು ಹೇಳಿದರು.

ಕ್ಷೇತ್ರದ 158 ಮತಗಟ್ಟೆಗಳಲ್ಲಿ 250 ಮತಯಂತ್ರಗಳನ್ನು ಅಳವಡಿಸಲಾಗುವುದು. ವಿದ್ಯುನ್ಮಾನ ಮತಯಂತ್ರಗಳ ಬಗ್ಗೆ ಮತಗಟ್ಟೆ ಅಧಿಕಾರಿಗಳಿಗೆ ಹಾಗೂ ಸ್ಥಳೀಯ ಚುನಾವಣೆ ಅಧಿಕಾರಿಗಳಿಗೆ ತರಬೇತಿ ನೀಡಲಾಗಿದೆ. ಮತಗಟ್ಟೆಯ ಏಜೆಂಟರುಗಳಿಗೆ ತಿಳಿವಳಿಕೆ ನೀಡುವ ಸಂಬಂಧ ಭಾನುವಾರ ಸಭೆ ಕರೆಯಲಾಗಿತ್ತು ಎಂದು ಅವರು ಹೇಳಿದರು.

ಸೆಪ್ಟೆಂಬರ್‌ 29ರಂದು ಶುಕ್ರವಾರ ಕ್ಷೇತ್ರದಲ್ಲಿ ಚುನಾವಣೆ ನಡೆಯಲಿದ್ದು, 3ರಂದು ಮತ ಎಣಿಕೆ ಕಾರ್ಯ ನಡೆಯಲಿದೆ. 29ರ ಬೆಳಗ್ಗೆ 7 ಗಂಟೆಯಿಂದ ಸಂಜೆ 5ರವರೆಗೆ ಮತದಾನ ನಡೆಯಲಿದೆ. ಮತದಾರರ ಗುರುತನ್ನು ಮತಗಟ್ಟೆ ಪ್ರವೇಶಿಸುವ ಮೊದಲೆ ದೃಢಪಡಿಸಿಕೊಳ್ಳಲಾಗುವುದು ಎಂದರು.

ಮತದಾರರು ವಿದ್ಯುನ್ಮಾನ ಮತಯಂತ್ರಗಳಲ್ಲಿ ಹಸಿರು ದೀಪ ಉರಿಯುತ್ತಿದೆ ಎಂಬುದನ್ನು ಖಾತ್ರಿ ಪಡಿಸಿಕೊಂಡು ಆನಂತರ ತಮ್ಮ ಆಯ್ಕೆಯನ್ನು ನಮೂದಿಸಬೇಕು. ತಾವು ಆಯ್ಕೆ ಮಾಡಿದ ಅಭ್ಯರ್ಥಿಯ ಹೆಸರಿನ ಮುಂದಿರುವ ಗುಂಡಿ ಒತ್ತಿದಾಗ ಕೆಂಪು ದೀಪ ಮಿನುಗುತ್ತದೆ. ಆನಂತರ ಬೀಪ್‌ ಶಬ್ದ ಬಂದುದನ್ನು ಖಾತ್ರಿ ಪಡಿಸಿಕೊಳ್ಳಬೇಕು ಎಂದು ಹೇಳಿದರು.

ಮತದಾರರಿಗೆ ವಿದ್ಯುನ್ಮಾನ ಮತಯಂತ್ರದ ಬಗ್ಗೆ ಮಾಹಿತಿ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜಾಹೀರಾತುಗಳ ಮೂಲಕ ಮತದಾರರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಅವರು ಹೇಳಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X