ಲಾಕಪ್ ಸಾವು : 2 ಲಕ್ಷ ರು. ಮಧ್ಯಂತರ ಪರಿಹಾರ ನೀಡಲು ಆದೇಶ
ನವದೆಹಲಿ : ಕೋಲಾರ ಜಿಲ್ಲೆಯ ಪೊಲೀಸರ ವಶದಲ್ಲಿದ್ದ ಆರೋಪಿಯಾಬ್ಬ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ, ಮೃತನ ಹತ್ತಿರದ ಸಂಬಂಧಿಕರಿಗೆ ತತ್‌ಕ್ಷಣವೇ ಮಧ್ಯಂತರ ಪರಿಹಾರವಾಗಿ 2 ಲಕ್ಷ ರುಪಾಯಿಗಳನ್ನು ನೀಡುವಂತೆ ಕರ್ನಾಟಕ ಸರ್ಕಾರಕ್ಕೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಆದೇಶಿಸಿದೆ.
ಈ ಪ್ರಕರಣದ ತನಿಖೆಯನ್ನು ರಾಜ್ಯ ಪೊಲೀಸ್ ತನಿಖಾದಳಕ್ಕೆ ವಹಿಸುವಂತೆ ಸಹ ಅದು ಸೂಚಿಸಿದೆ. ಮುಳಬಾಗಲು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪೊಲೀಸ್ ಕಸ್ಟಡಿಯಲ್ಲಿದ್ದ ತಿಮ್ಮಯ್ಯ ಎಂಬ ವ್ಯಕ್ತಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಸಂಬಂಧಿತ ಪೊಲೀಸ್ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುವಂತೆ ಕೂಡ ರಾಜ್ಯ ಸರ್ಕಾರಕ್ಕೆ ಆಯೋಗ ಆದೇಶಿಸಿದೆ.
ಸಾಕ್ಷಿಗಳನ್ನು ನಾಶ ಮಾಡಲು ಯತ್ನಿಸಿದ ಆರೋಪದ ಮೇರೆಗೆ ಮೃತ ವ್ಯಕ್ತಿಯ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರ ವಿರುದ್ಧವೂ ಕೂಡ ಮೊಕದ್ದಮೆ ದಾಖಲಿಸುವಂತೆ ಆಯೋಗ ತಿಳಿಸಿದೆ. ಈ ಪ್ರಕರಣದಲ್ಲಿ ಭಾಗಿಗಳು ಎಂದು ಬಹಿರಂಗಗೊಂಡಿರುವ ವ್ಯಕ್ತಿಗಳಿಂದ ಪರಿಹಾರದ ಮೊತ್ತವನ್ನು ವಸೂಲಿ ಮಾಡಲು ರಾಜ್ಯ ಸರ್ಕಾರ ಕಾನೂನು ಕ್ರಮ ಜರುಗಿಸಬಹುದು ಎಂದೂ ಆಯೋಗ ಅಭಿಪ್ರಾಯಪಟ್ಟಿದೆ.
ಮೃತ ತಿಮ್ಮಯ್ಯನು ಪೊಲೀಸ್ ಠಾಣೆಯ ಶೌಚಗೃಹದ ಕಿಟಕಿಗೆ ಕಟ್ಟಲಾಗಿದ್ದ ನೈಲಾನ್ ದಾರವನ್ನು ಬಳಸಿ ಆತ್ಮಹತ್ಯೆ ಮಾಡಿಕೊಂಡಿದ್ದನೆಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದರು. ನಾಗರಿಕ ಹಕ್ಕುಗಳ ಜನಸಂಘಟನೆ ಈ ಪ್ರಕರಣದ ಬಗ್ಗೆ ಆಯೋಗಕ್ಕೆ ದೂರು ಸಲ್ಲಿಸಿತ್ತು.