Get Updates
Get notified of breaking news, exclusive insights, and must-see stories!

ರಾಜ್‌ ಕಾಡಿಗೆ ಹೋದ ಮೇಲೆ ಕಂಗಾಲಾದ ಕರ್ನಾಟಕದ ಕಾರ್ಯಕ್ರಮಗಳು

ಬೆಂಗಳೂರು : ರಾಜ್‌ಕುಮಾರ್‌ ಅಪಹರಣದಿಂದ ರಾಜ್ಯ ಸರರ್ಕಾರಕ್ಕೆ ಉಂಟಾದ ತೊಂದರೆ ಅಷ್ಟಿಷ್ಟಲ್ಲ. ಮೊದಲ 15 ದಿನ ಶಾಲೆ - ಕಾಲೇಜುಗಳೆಲ್ಲಾ ಮುಚ್ಚಿದ್ದವು. ಲಾಲ್‌ಭಾಗ್‌ನ ಗಾಜಿನ ಮನೆಯಲ್ಲಿ ಪ್ರತಿವರ್ಷ ಸ್ವಾತಂತ್ರ್ಯ ದಿನಾಚರಣೆಯ ನಿಮಿತ್ತ ನಡೆಯುತ್ತಿದ್ದ ವಿಶ್ವವಿಖ್ಯಾತ ಫಲಪುಷ್ಪ ಪ್ರದರ್ಶನವೂ ಸೇರಿದಂತೆ ಸರ್ಕಾರ ನೂರಾರು ಕಾರ್ಯಕ್ರಮಗಳು ರದ್ದಾದವು.

ಅತ್ಯುತ್ತಮವಾಗಿ ಉದ್ಯಾನಗಳನ್ನು ಸಂರಕ್ಷಿಸುವ ಸಂಘ ಸಂಸ್ಥೆಗಳಿಗೆ ಕೊಡಮಾಡುವ ಪ್ರಶಸ್ತಿಗಳ ಪ್ರಕಟಣೆಯೂ ಇನ್ನೂ ಹೊರಬಿದ್ದಿಲ್ಲ. ಆಗಸ್ಟ್‌ 16ರಿಂದ 22ರವರೆಗೆ ರಾಜ್ಯ ಸರಕಾರ ನಡೆಸಲುದ್ದೇಶಿಸಿದ್ದ ಅಂತಾರಾಷ್ಟ್ರೀಯ ಪುಷ್ಪ ಪ್ರದರ್ಶನಕ್ಕೂ ಅಪಹರಣದಿಂದ ಭಾರಿ ಪೆಟ್ಟು ಬಿತ್ತು.

ಸ್ವಾತಂತ್ರ್ಯ ಯೋಧರಿಗೆ ಕೃತಜ್ಞತೆ ಅರ್ಪಿಸಲು ಸಾಂಪ್ರದಾಯಿಕವಾಗಿ ರಾಜಭವನದಲ್ಲಿ ಆಗಸ್ಟ್‌ 9ರಂದು ನಡೆಯುತ್ತಿದ್ದ ಕಾರ್ಯಕ್ರಮವೂ ರದ್ದಾಯಿತು. ವಾರ್ತಾ ಇಲಾಖೆಯ ಅಧಿಕಾರಿಗಳ ರೀತ್ಯ ತಿಂಗಳೊಂದರಲ್ಲಿ ರಾಜ್ಯದಲ್ಲಿ ಸುಮಾರು 350 ಕಾರ್ಯಕ್ರಮಗಳು ನಡೆಯುತ್ತವೆ. 28 ಜಿಲ್ಲೆಗಳಲ್ಲಿ ದಿನಕ್ಕೊಂದು ಕಾರ್ಯಕ್ರಮ ನಡೆಯುತ್ತದೆ ಎಂದರೂ ತಿಂಗಳಿಗೆ 800ಕ್ಕೂ ಹೆಚ್ಚು ಕಾರ್ಯಕ್ರಮಗಳು ನಡೆಯಬೇಕು. ಈ ಎಲ್ಲ ಕಾರ್ಯಕ್ರಮಗಳೂ ಕಳೆದ ತಿಂಗಳು ರದ್ದಾಗಿವೆ.

ರಾಜ್ಯ ವಾರ್ತಾ ಇಲಾಖೆಯ ನಿರ್ದೇಶಕರ ರೀತ್ಯ ಆಗಸ್ಟ್‌ ತಿಂಗಳಲ್ಲಿ ಸಾಮಾನ್ಯವಾಗಿ ಮಳೆ ಬೀಳುವ ಕಾರಣ ಆ ತಿಂಗಳಲ್ಲಿ ಹೆಚ್ಚು ಸಾರ್ವಜನಿಕ ಸಮಾರಂಭಗಳು ಇರುವುದಿಲ್ಲ. ಆದರೆ, ಆಗಸ್ಟ್‌ 15 ಸ್ವಾತಂತ್ರ್ಯ ದಿನವಾದ ಕಾರಣ ಆ ದಿನ ರಾಜ್ಯದ ಎಲ್ಲ ಜಿಲ್ಲೆಯ, ಎಲ್ಲ ತಾಲೂಕಿನ ಎಲ್ಲ ಹಳ್ಳಿಹಳ್ಳಿಗಳಲ್ಲೂ ಕಾರ್ಯಕ್ರಮಗಳು ನಡೆದೇ ತೀರುತ್ತವೆ. ಈ ಬಾರಿ ಅಂತಹ ನೂರಾರು ಕಾರ್ಯಕ್ರಮಗಳು ರದ್ದಾಗಿವೆ. ಖಾಸಗಿ ವಲಯದ ಕಂಪನಿಗಳು ಹಾಗೂ ಸಂಘ - ಸಂಸ್ಥೆಗಳು ರದ್ದು ಮಾಡಿದ ಕಾರ್ಯಕ್ರಮಗಳ ಸಂಖ್ಯೆ ಅಸಂಖ್ಯಾತ.

ಇದೆಲ್ಲಕ್ಕಿಂತಲೂ ಮಿಗಿಲಾಗಿ ಆಗಸ್ಟ್‌ ತಿಂಗಳಿನಲ್ಲಿ ರಾಜ್ಯಕ್ಕೆ ಭೇಟಿ ನೀಡಬೇಕಾಗಿದ್ದ ನೇಪಾಳದ ಪ್ರಧಾನಿ ಗಿರಿಜಾ ಪ್ರಸಾದ್‌ ಕೊಯಿರಾಲ ಅವರ ಕಾರ್ಯಕ್ರಮ ರದ್ದಾಗಿದ್ದು. ಆಗಸ್ಟ್‌ ಮೂರರಂದು ಅವರು ಅನೇಕ ಸಾಫ್ಟ್‌ವೇರ್‌ ಒಡಂಬಡಿಕೆಗಳಿಗೆ ಅಂತಿಮ ರೂಪ ನೀಡಲು ಬೆಂಗಳೂರಿಗೆ ಆಗಮಿಸುವ ಕಾರ್ಯಕ್ರಮ ಇತ್ತು. ಮೂರು ದಿನದ ಆ ಭೇಟಿಯ ಕಾಲದಲ್ಲಿ ಅವರು ರಾಜ್ಯದ ಸಾಫ್ಟ್‌ವೇರ್‌ ದಿಗ್ಗಜರೊಂದಿಗೆ ಮಾತುಕತೆ ನಡೆಸಬೇಕಿತ್ತು.

ರದ್ದಾದ ಕಾರ್ಯಕ್ರಮಗಳ ಪಟ್ಟಿಯಲ್ಲಿ ಕರ್ನಾಟಕ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ನಿಗಮದ ಕಾರ್ಯಕ್ರಮವೂ ಸೇರಿದೆ. ಮೊದಲು ಈ ಕಾರ್ಯಕ್ರಮವನ್ನು ಮುಂದೂಡಲಾಯಿತು. ಮುಂದುವರಿದ ಅಪಹರಣ ಪ್ರಕರಣದ ಉದ್ವಿಘ್ನತೆಯಿಂದ ಆ ಕಾರ್ಯಕ್ರಮ ರದ್ದಾಯಿತು. ಸಾಮಾನ್ಯವಾಗಿ ಇಂತಹ ಪ್ರಮುಖ ಕಾರ್ಯಕ್ರಮಗಳಿಗೆ ಸಾವಿರಾರು ಸಂಖ್ಯೆಯಲ್ಲಿ ಆಹ್ವಾನ ಪತ್ರಿಕೆಗಳನ್ನು ಅಚ್ಚು ಮಾಡಲಾಗುತ್ತದೆ. ಇವುಗಳು ಅಂಚೆಯ ಮೂಲಕ ಆಹ್ವಾನಿತರನ್ನು ತಲುಪುತ್ತದೆ. ಕಾರ್ಯಕ್ರಮಗಳು ಮುಂದೂಡಲ್ಪಟ್ಟಾಗ ಅವರಿಗೆಲ್ಲ ವಿಷಯ ತಿಳಿಸುವುದು ಅನಿವಾರ್ಯ. ಆನಂತರ ಮತ್ತೆ ದಿನಾಂಕ ನಿಗದಿಯಾದಾಗ ವಾರದ ಮುಂಚೆಯೇ ಮತ್ತೆ ಹೊಸ ಆಹ್ವಾನ ಪತ್ರಿಕೆ ಸಿದ್ಧಪಡಿಸಿ ರವಾನಿಸಲೇ ಬೇಕು.

ಜಪಾನ್‌ ಪ್ರಧಾನಿಯ ಯಶಸ್ವಿ ಭೇಟಿ : ಈ ಎಲ್ಲ ಅಡ್ಡಿ ಆತಂಕಗಳ ನಡುವೆಯೂ ಸುಸೂತ್ರವಾಗಿ ಜರುಗಿದ ಕಾರ್ಯಕ್ರಮ ಎಂದರೆ, ಜಪಾನ್‌ ಪ್ರಧಾನಿ ಯೋಷಿರೋ ಮೋರಿ ಅವರ ರಾಜ್ಯ ಪ್ರವಾಸ ಹಾಗೂ ಸಿಂಗಪೂರ್‌ ವಾಣಿಜ್ಯ ನಿಯೋಗದ ಭೇಟಿ ಕಾರ್ಯಕ್ರಮ. ಒಂದೊಮ್ಮೆ ಜಪಾನ್‌ ಪ್ರಧಾನಿಯವರ ಕಾರ್ಯಕ್ರಮ ಕೂಡ ರದ್ದಾಗಿದ್ದರೆ, ರಾಜ್ಯಕ್ಕೆ ಕೆಟ್ಟ ಹೆಸರು ಬರುತ್ತಿದ್ದುದಷ್ಟೇ ಅಲ್ಲ, ವಿದೇಶೀ ಬಂಡವಾಳ ಹೂಡಿಕೆಯ ಪ್ರಕ್ರಿಯೆಗೂ ಭಾರಿ ಹೊಡೆತ ಬೀಳುತ್ತಿತ್ತು.

ಕೃಷ್ಣ ಅವರು, ನಾಲ್ಕು ಜಿಲ್ಲೆಗಳ ಅಭಿವೃದ್ಧಿ ಕಾರ್ಯಕ್ರಮಗಳ ಪರಿಶೀಲನಾ ಸಭೆಯನ್ನೂ ರದ್ದು ಮಾಡುವುದು ಅನಿವಾರ್ಯವಾಯಿತು. ಹೊಸ ಗಣಿ ನೀತಿಯ ಹಿನ್ನೆಲೆಯಲ್ಲಿ ಗಣಿ ಹಾಗೂ ಭೂಗರ್ಭ ಇಲಾಖೆ ಹಮ್ಮಿಕೊಂಡಿದ್ದ ಎರಡು ದಿನಗಳ ಸಮ್ಮೇಳನವೂ ಮುಂದಕ್ಕೆ ಹೋಗಿದೆ. ಪರಿಸರ ಕುರಿತ ಕಾರ್ಯಾಗಾರವೂ ರದ್ದಾಗಿದೆ.

ಇದಲ್ಲದೆ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನ, ಎ.ಎನ್‌. ಮೂರ್ತಿರಾಯರ ಅಭಿನಂದನಾ ಕಾರ್ಯಕ್ರಮಗಳೇ ಮುಂತಾದ ಹಲವು ಸಾಹಿತ್ಯಕ ಕಾರ್ಯಕ್ರಮಗಳು ಮುಂದಕ್ಕೆ ಹೋಗಿವೆ. ಕನ್ನಡ ಸಂಸ್ಕೃತಿ ಇಲಾಖೆಯ ಹಾಗೂ ಕನ್ನಡ ಸಾಹಿತ್ಯ ಅಕಾಡಮಿಯ ಕಾರ್ಯಕ್ರಮವೂ ರದ್ದಾಗಿದೆ. ಸಮಾನ ಮನಸ್ಕ ಮುಖ್ಯಮಂತ್ರಿಗಳ ಸಭೆಯಲ್ಲಿ ಹಾಗೂ ಹೂಸ್ಟನ್‌ ಕನ್ನಡ ಸಮ್ಮೇಳನದಲ್ಲಿ ಪಾಲ್ಗೊಳ್ಳಬೇಕಿದ್ದ ಮುಖ್ಯಮಂತ್ರಿಗಳು ಬೆಂಗಳೂರಿನಲ್ಲೇ ಉಳಿಯುವಂತಾಗಿದೆ.

ಚಿತ್ರರಂಗ ಚಟುವಟಿಕೆ ಸ್ತಬ್ಧ : ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಆದಾಯ ತರುವ ಚಿತ್ರ ಚಟುವಟಿಕೆ ಹಾಗೂ 15 ದಿನಗಳ ಕಾಲ ಮದ್ಯ ಮಾರಾಟ ನಿಷೇಧದಿಂದಾಗಿ ಭಾರಿ ನಷ್ಟ ಉಂಟಾಗಿದೆ. ಚಿತ್ರರಂಗದ ಚಟುವಟಿಕೆ ನಿಂತ ಹಿನ್ನೆಲೆಯಲ್ಲಿ ಪ್ರತಿದಿನ ಸುಮಾರು ಮೂರೂವರೆ ಕೋಟಿ ನಷ್ಟ ಸಂಭವಿಸಿದ್ದರೆ, 15 ದಿನ ಮದ್ಯ ಮಾರಾಟ ನಿಂತಿದ್ದರಿಂದ 123 ಕೋಟಿ ರುಪಾಯಿ ನಷ್ಟ ಉಂಟಾಗಿದೆ ಎಂಬುವುದ ಅಂದಾಜು.

ಗಣೇಶ ಚತುರ್ಥಿಯ ದಿನದಿಂದ ಚಿತ್ರಮಂದಿರಗಳು ಪ್ರದರ್ಶನ ಆರಂಭಿಸಿದ್ದರೂ, ಪ್ರೇಕ್ಷಕರ ಕೊರತೆ ಕಾಡುತ್ತಿದೆ. ಇನ್ನು ಬಂದ್‌ನಿಂದ ಉಂಟಾದ ನಷ್ಟ ಅಷ್ಟಿಷ್ಟಲ್ಲ. ರಾಜ್‌ ಇಲ್ಲದ ರಾಜ್ಯದಲ್ಲಿ ಆದ ನಷ್ಟ ಲೆಕ್ಕ ಹಾಕಲು ಆರ್ಥಿಕ ತಜ್ಞರೆಲ್ಲ ಒಂದೆಡೆ ಸೇರಬೇಕು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+