ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋಪಾಲ್‌ ಅವರ 2ನೇ ಸುತ್ತಿನ ಸಂಧಾನ ಫಲಪ್ರದವಾಗಲಿದೆ : ಕೃಷ್ಣ

By Staff
|
Google Oneindia Kannada News

ಬೆಂಗಳೂರು : ಎರಡನೇ ಸುತ್ತಿನ ಸಂಧಾನಕ್ಕಾಗಿ ವೀರಪ್ಪನ್‌ ಬಳಿಗೆ ತೆರಳಿರುವ ನಕ್ಕೀರನ್‌ ಗೋಪಾಲ್‌ ಅವರಿಂದ ಈ ಬಾರಿ ಆಶಾದಾಯಕವಾದ ಪ್ರತಿಕ್ರಿಯೆ ಬರಲಿದೆ ಎಂಬ ಆಶಾಭಾವನೆಯನ್ನು ಕರ್ನಾಟಕ ಸರಕಾರ ಹೊಂದಿದೆ. ವೀರಪ್ಪನ್‌ ಬಂಧನದಿಂದ ರಾಜ್‌ಕುಮಾರ್‌ ಹಾಗೂ ಇತರ ಮೂವರು ಒತ್ತೆಯಾಳುಗಳ ಬಿಡುಗಡೆ ಆಗೇ ತೀರುತ್ತದೆ ಎಂಬುದು ಸರಕಾರದ ದೃಢ ವಿಶ್ವಾಸವಾಗಿದೆ.

ಈಬಾರಿ ವೀರಪ್ಪನ್‌ ಮತ್ತಾವುದೇ ಹೊಸ ಬೇಡಿಕೆಯನ್ನು ಮಂಡಿಸುವುದಿಲ್ಲ, ಬದಲಾಗಿ ರಾಜ್‌ ಬಿಡುಗಡೆ ಸಂಬಂಧದ ಶುಭ ಸುದ್ದಿ ಇಂದೋ ನಾಳೆಯೋ ಹೊರಬೀಳುತ್ತದೆ ಎಂದು ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ತಿಳಿಸಿದ್ದಾರೆ. ವೀರಪ್ಪನ್‌ ರಕ್ತದಾಹಕ್ಕೆ ಬಲಿಯಾದ ಪೊಲೀಸ್‌ ಅಧಿಕಾರಿ ಶಖೀಲ್‌ ಅಹ್ಮದ್‌ ಅವರ ತಂದೆ ಅಬ್ದುಲ್‌ ಕರೀಂ ಅವರು ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿರುವ ತಕರಾರು ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರಕಾರಕ್ಕೆ ಯಾವುದೇ ಸೂಚನೆ ಬಂದಿಲ್ಲವಾದರೂ ದೆಹಲಿಯಲ್ಲಿರುವ ರಾಜ್ಯ ಸರಕಾರದ ಸರ್ವೋಚ್ಚ ನ್ಯಾಯಾಲಯದ ವಕೀಲರಿಗೆ ಜಾಗರೂಕರಾಗಿರುವಂತೆ ಸೂಚನೆಗಳನ್ನು ನೀಡಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಕಾಡಿಗೆ ತೆರಳಿರುವ ಗೋಪಾಲ್‌ ಅವರಿಂದ ಈವರೆಗೆ ಯಾವುದೇ ಸಂದೇಶ ಬಂದಿಲ್ಲವಾದರೂ ವಿಶ್ವಸನೀಯ ಮೂಲಗಳ ರೀತ್ಯ ರಾಜ್‌ಕುಮಾರ್‌ ಅವರ ಬಿಡುಗಡೆ ಇನ್ನು ಒಂದೆರಡು ದಿನಗಳಲ್ಲೇ ಆಗಲಿದೆ ಎಂದು ರಾಜ್ಯ ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ಸಹ ತಿಳಿಸಿದ್ದಾರೆ.

ಮಂಡ್ಯ ಬಂದ್‌ : ರಾಜ್‌ಕುಮಾರ್‌ ಬಿಡುಗಡೆಗೆ ಚಲನಚಿತ್ರ ಕಲಾವಿದರು ವ್ರತ ಕೈಗೊಂಡಿದ್ದಾರೆ, ರಾಜ್ಯದ ಹಲವು ದೇವಾಲಯಗಳಲ್ಲಿ ವಿಶೇಷ ಪೂಜೆಗಳು ಅವಿರತವಾಗಿ ನಡೆಯುತ್ತಿವೆ. ಮಂಡ್ಯದಲ್ಲಿ ಶಾಂತಿಯುತ ಧರಣಿ ಇತ್ಯಾದಿ ಹೋರಾಟ ಮುಂದುವರಿದಿದೆ. ಈ ಮಧ್ಯೆ 23ರ ಬುಧವಾರ ರಾಜ್‌ ಬಿಡಗಡೆಗೆ ಒತ್ತಾಯಿಸಿ ರಾಜ್‌ಕುಮಾರ್‌ ಅಭಿಮಾನಿಗಳ ಸಂಘ ಮಂಡ್ಯ ಬಂದ್‌ಗೆ ಕರೆ ನೀಡಿದೆ.

ಚೆನ್ನೈವರದಿ : ಈ ಮಧ್ಯೆ ಟಿಎನ್‌ಎಲ್‌ಎಯ ಕೆಲವು ಸಹಚರರನ್ನು ಬಂಧಿಸಿರುವ ಪೊಲೀಸರು, ಬಂಧಿತರಿಂದ ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಹಿರಿಯ ಪೊಲೀಸ್‌ ಅಧಿಕಾರಿ ಡೇವಿಡ್‌ಸನ್‌ ಈ ವಿಷಯವನ್ನು ದೃಢ ಪಡಿಸಿದ್ದಾರೆ.

ಗೋಪಾಲ್‌ ಅವರು ಕಾಡುಗಳ್ಳ ವೀರಪ್ಪನ್‌ನೊಂದಿಗೆ ರಾಜ್‌ಕುಮಾರ್‌ ಹಾಗೂ ಇತರ ಮೂವರ ಬಿಡುಗಡೆ ಸಂಬಂಧ ಮಾತುಕತೆಯಲ್ಲಿ ತೊಡಗಿದ್ದು, ಬುಧವಾರ ಬೆಳಗ್ಗೆ ಗೋಪಾಲ್‌ರಿಂದ ಸಂದೇಶ ಬರುವ ನಿರೀಕ್ಷೆ ಇದೆ, ಅಥವಾ ಗೋಪಾಲ್‌ ಅವರೇ ರಾಜ್‌ ಸೇರಿದಂತೆ ಎಲ್ಲ ಒತ್ತೆಯಾಳುಗಳನ್ನೂ ತಮ್ಮೊಂದಿಗೆ ಕರೆತರುವ ಸಂಭವವೂ ಇದೆ ಎಂದು ಪೊಲೀಸ್‌ ಮೂಲಗಳಿಂದ ತಿಳಿದು ಬಂದಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X